ನಾಳೆ ಸೆಮಿಕಾನ್ ಇಂಡಿಯಾ 2026 ಉದ್ಘಾಟಿಸಲಿರುವ ಪ್ರಧಾನಿ ಮೋದಿ
ನವದೆಹಲಿ, 16 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ನವದೆಹಲಿಯ ಯಶೋಭೂಮಿಯಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಮೂರು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಮತ್ತು ಪ್ರದರ್ಶನ ‘ಸೆಮಿಕಾನ್ ಇಂಡಿಯಾ 2026’ ಅನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಅವರು ಸಭಿ
पंतप्रधान नरेंद्र मोदी


ನವದೆಹಲಿ, 16 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ನವದೆಹಲಿಯ ಯಶೋಭೂಮಿಯಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಮೂರು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಮತ್ತು ಪ್ರದರ್ಶನ ‘ಸೆಮಿಕಾನ್ ಇಂಡಿಯಾ 2026’ ಅನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಅವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಸೆ.17ರಿಂದ 19ರವರೆಗೆ ನಡೆಯಲಿರುವ ಸಮ್ಮೇಳನದ ವಿಷಯ ‘ಸಿಲಿಕಾನ್‌ನಿಂದ ವ್ಯವಸ್ಥೆಗಳವರೆಗೆ: ಪರಿಸರ ವ್ಯವಸ್ಥೆ ನಿರ್ಮಾಣ’ ಎಂಬುದಾಗಿದೆ.

ಪ್ರಧಾನಿ ಕಚೇರಿ ನೀಡಿರುವ ಮಾಹಿತಿ ಪ್ರಕಾರ, ಸಮ್ಮೇಳನದಲ್ಲಿ ಅರೆವಾಹಕ ಮತ್ತು ಎಲೆಕ್ಟ್ರಾನಿಕ್ಸ್ ಮೌಲ್ಯ ಸರಪಳಿಗೆ ಸಂಬಂಧಿಸಿದ ಜಾಗತಿಕ ಹಾಗೂ ಭಾರತೀಯ ಉದ್ಯಮ ಸಂಸ್ಥೆಗಳ ಜತೆಗೆ ನೀತಿ ನಿರೂಪಕರು, ಹೂಡಿಕೆದಾರರು, ಸಂಶೋಧಕರು, ನವೋದ್ಯಮ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಸೇರಲಿದ್ದಾರೆ. ಭಾರತದಲ್ಲಿ ಸಹಕಾರ, ಹೂಡಿಕೆ ಮತ್ತು ನವೋದ್ಯಮಕ್ಕೆ ಉತ್ತೇಜನ ನೀಡುವುದರ ಜತೆಗೆ ಅರೆವಾಹಕ ಕ್ಷೇತ್ರಕ್ಕೆ ಅಗತ್ಯವಿರುವ ಕೌಶಲ್ಯಯುತ ಮಾನವ ಸಂಪನ್ಮೂಲ ಅಭಿವೃದ್ಧಿಗೆ ವೇಗ ನೀಡುವುದು ಸಮ್ಮೇಳನದ ಉದ್ದೇಶವಾಗಿದೆ.

ಸಮ್ಮೇಳನದಲ್ಲಿ ಅರೆವಾಹಕ ಕ್ಷೇತ್ರದ ಜತೆಗೆ ಪ್ರದರ್ಶನ ಉದ್ಯಮದಲ್ಲಿನ ತಾಂತ್ರಿಕ ಪ್ರಗತಿ ಕುರಿತು ಸಮಾನಾಂತರ ಗೋಷ್ಠಿಗಳು ನಡೆಯಲಿವೆ. ಕಾರ್ಯತಂತ್ರದ ಪಾಲುದಾರಿಕೆ ಮತ್ತು ಜಂಟಿ ಉದ್ಯಮಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಆರು ದೇಶಗಳ ದುಂಡುಮೇಜಿನ ಸಭೆಗಳು ನಡೆಯಲಿವೆ. ಮಹಿಳಾ ನಾಯಕತ್ವಕ್ಕೆ ಸಂಬಂಧಿಸಿದ ವಿಶೇಷ ಗೋಷ್ಠಿಯನ್ನೂ ಆಯೋಜಿಸಲಾಗಿದೆ.

‘ಸೆಮಿಕಾನ್ ಇಂಡಿಯಾ 2026’ರಲ್ಲಿ ಅರೆವಾಹಕ ಮೌಲ್ಯ ಸರಪಳಿಯ ಎಲ್ಲ ಪ್ರಮುಖ ಹಂತಗಳನ್ನು ಸಮಗ್ರವಾಗಿ ಪ್ರದರ್ಶಿಸಲಾಗುತ್ತದೆ. ಅರೆವಾಹಕ ಸಾಮಗ್ರಿ ಮತ್ತು ಉಪಕರಣಗಳಿಂದ ಹಿಡಿದು ಚಿಪ್ ವಿನ್ಯಾಸ, ತಯಾರಿಕೆ, ಸುಧಾರಿತ ಪ್ಯಾಕೇಜಿಂಗ್, ಎಲೆಕ್ಟ್ರಾನಿಕ್ಸ್ ಹಾಗೂ ಸಮಗ್ರ ವ್ಯವಸ್ಥೆಗಳವರೆಗಿನ ಸಂಪೂರ್ಣ ಪ್ರಕ್ರಿಯೆಯನ್ನು ಇಲ್ಲಿ ಪರಿಚಯಿಸಲಾಗುತ್ತದೆ. ಇದಕ್ಕಾಗಿ ‘ಮರಳಿನಿಂದ ಸಿಲಿಕಾನ್, ಸಿಲಿಕಾನ್‌ನಿಂದ ವ್ಯವಸ್ಥೆಗಳವರೆಗೆ’ ಎಂಬ ಮೌಲ್ಯ ಸರಪಳಿ ಅನುಭವ ಕೇಂದ್ರವನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದೆ.

ಆಯೋಜಕರ ಪ್ರಕಾರ, 52 ದೇಶಗಳ ಪ್ರತಿನಿಧಿಗಳು ಸೇರಿದಂತೆ 600ಕ್ಕೂ ಹೆಚ್ಚು ಕಂಪನಿಗಳು ಸಮ್ಮೇಳನದಲ್ಲಿ ಭಾಗವಹಿಸಲಿವೆ. ಸುಮಾರು 50 ಸಾವಿರ ಮಂದಿ ಭೇಟಿ ನೀಡುವ ನಿರೀಕ್ಷೆಯಿದೆ. 400ಕ್ಕೂ ಹೆಚ್ಚು ಉನ್ನತ ಮಟ್ಟದ ಕಾರ್ಯನಿರ್ವಾಹಕರು ಹಾಗೂ 150ಕ್ಕೂ ಹೆಚ್ಚು ಭಾಷಣಕಾರರು ವಿವಿಧ ತಾಂತ್ರಿಕ ಮತ್ತು ಕಾರ್ಯತಂತ್ರದ ಗೋಷ್ಠಿಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.

ಪ್ರದರ್ಶನದಲ್ಲಿ ಜಪಾನ್, ದಕ್ಷಿಣ ಕೊರಿಯಾ, ಮಲೇಷ್ಯಾ, ನೆದರ್‌ಲ್ಯಾಂಡ್ಸ್, ಸಿಂಗಾಪುರ ಮತ್ತು ಸ್ವೀಡನ್ ದೇಶಗಳ ವಿಶೇಷ ಮಂಟಪಗಳನ್ನು ನಿರ್ಮಿಸಲಾಗಿದೆ. ಇದರೊಂದಿಗೆ 12 ರಾಜ್ಯಗಳ ಮಳಿಗೆಗಳು, ನವೋದ್ಯಮ ಮಂಟಪ, ನವೀನತೆ ಪ್ರದರ್ಶನ, ವಿದ್ಯಾರ್ಥಿಗಳ ತಂತ್ರಜ್ಞಾನ ಸ್ಪರ್ಧೆ ಹಾಗೂ ಕೌಶಲ್ಯಾಭಿವೃದ್ಧಿ ಮಂಟಪವೂ ಸಮ್ಮೇಳನದ ಭಾಗವಾಗಿರಲಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande