ನಾಳೆ ಆಳ ಸಮುದ್ರ ಮೀನುಗಾರಿಕೆ ಉತ್ತೇಜನಕ್ಕೆ ಗಾಂಧಿನಗರದಲ್ಲಿ ರಾಷ್ಟ್ರೀಯ ಕಾರ್ಯಾಗಾರ
ನವದೆಹಲಿ, 16 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ಉತ್ತೇಜನ ನೀಡುವುದು ಹಾಗೂ ‘ಪ್ರವೇಶ ಅನುಮತಿ’ ಮತ್ತು ಅನುಮತಿ ಪತ್ರ ಹೊಂದಿರುವವರೊಂದಿಗೆ ಸಂವಾದ ನಡೆಸುವ ಉದ್ದೇಶದಿಂದ ಕೇಂದ್ರ ಮೀನುಗಾರಿಕೆ ಇಲಾಖೆ ಗುರುವಾರ ಗುಜರಾತ್‌ನ ಗಾಂಧಿನಗರದಲ್ಲಿ ಒಂದು ದಿನದ ರಾಷ್ಟ್ರೀಯ ಕಾರ್ಯ
ನಾಳೆ ಆಳ ಸಮುದ್ರ ಮೀನುಗಾರಿಕೆ ಉತ್ತೇಜನಕ್ಕೆ ಗಾಂಧಿನಗರದಲ್ಲಿ ರಾಷ್ಟ್ರೀಯ ಕಾರ್ಯಾಗಾರ


ನವದೆಹಲಿ, 16 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ಉತ್ತೇಜನ ನೀಡುವುದು ಹಾಗೂ ‘ಪ್ರವೇಶ ಅನುಮತಿ’ ಮತ್ತು ಅನುಮತಿ ಪತ್ರ ಹೊಂದಿರುವವರೊಂದಿಗೆ ಸಂವಾದ ನಡೆಸುವ ಉದ್ದೇಶದಿಂದ ಕೇಂದ್ರ ಮೀನುಗಾರಿಕೆ ಇಲಾಖೆ ಗುರುವಾರ ಗುಜರಾತ್‌ನ ಗಾಂಧಿನಗರದಲ್ಲಿ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರ ಆಯೋಜಿಸಲಿದೆ.

ಸಾಂಪ್ರದಾಯಿಕ ಮತ್ತು ಸ್ಥಳೀಯ ಮೀನುಗಾರರನ್ನು ಹೆಚ್ಚಿನ ಮೌಲ್ಯದ ಸಮುದ್ರ ಸಂಪನ್ಮೂಲಗಳ ಬಳಕೆಗೆ ಪ್ರೋತ್ಸಾಹಿಸುವುದು, ತಳಮಟ್ಟದಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ವಿವಿಧ ಪಾಲುದಾರರ ಸಲಹೆಗಳನ್ನು ಪಡೆಯುವುದು ಕಾರ್ಯಾಗಾರದ ಉದ್ದೇಶವಾಗಿದೆ.

ಕಾರ್ಯಾಗಾರದಲ್ಲಿ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಹಾಗೂ ಪಂಚಾಯತ್ ರಾಜ್ ಸಚಿವ ರಾಜೀವ್ ರಂಜನ್ ಸಿಂಗ್ (ಲಲನ್ ಸಿಂಗ್), ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹಾಗೂ ಕೇಂದ್ರ ಮೀನುಗಾರಿಕೆ ಖಾತೆ ರಾಜ್ಯ ಸಚಿವ ಪ್ರೊ. ಎಸ್.ಪಿ. ಸಿಂಗ್ ಬಘೇಲ್ ಭಾಗವಹಿಸಲಿದ್ದಾರೆ. ಮಹಿಳಾ ಮೀನುಗಾರರು ಸೇರಿದಂತೆ ದೇಶದ ವಿವಿಧ ಭಾಗಗಳ ಮೀನುಗಾರರು, ಕೇಂದ್ರ ಸರ್ಕಾರ ಹಾಗೂ ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿ, ಸಿಫ್ನೆಟ್, ನಬಾರ್ಡ್, ಎನ್‌ಸಿಇಎಲ್, ಎನ್‌ಸಿಡಿಸಿ, ಸಿಐ ಹಾಗೂ ಎಂಪಿಇಡಿಎ ಸೇರಿದಂತೆ ವಿವಿಧ ಸಂಸ್ಥೆಗಳ ಪ್ರತಿನಿಧಿಗಳೂ ಪಾಲ್ಗೊಳ್ಳಲಿದ್ದಾರೆ.

ಆಳ ಸಮುದ್ರ ಮೀನುಗಾರಿಕೆಯ ಸಂಪೂರ್ಣ ಮೌಲ್ಯ ಸರಪಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಕಾರ್ಯಾಗಾರದಲ್ಲಿ ತಾಂತ್ರಿಕ ಗೋಷ್ಠಿಗಳು ನಡೆಯಲಿವೆ. ಸಮುದ್ರ ಸಂಪನ್ಮೂಲಗಳ ಸಾಮರ್ಥ್ಯ, ಆಧುನಿಕ ದೋಣಿಗಳ ಬಳಕೆ, ಕೌಶಲ್ಯಾಭಿವೃದ್ಧಿ, ಸಾಂಸ್ಥಿಕ ಹಣಕಾಸು, ಮೀನು ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಹಾಗೂ ರಫ್ತು ಮಾರುಕಟ್ಟೆಗಳಿಗೆ ಪ್ರವೇಶ ಸೇರಿದಂತೆ ವಿವಿಧ ವಿಷಯಗಳು ಚರ್ಚೆಯಾಗಲಿವೆ.

ಭಾರತದ ವಿಶೇಷ ಆರ್ಥಿಕ ವಲಯ ಹಾಗೂ ಆಳ ಸಮುದ್ರದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ, ಮೀನುಗಾರರ ಸಾಮರ್ಥ್ಯವರ್ಧನೆ ಮತ್ತು ಸಹಕಾರಿ ಮಾದರಿ ಮೂಲಕ ಹೂಡಿಕೆಗೆ ಉತ್ತೇಜನ ನೀಡುವ ಬಗ್ಗೆಯೂ ತಜ್ಞರು ಚರ್ಚಿಸಲಿದ್ದಾರೆ.

ಪ್ರಸ್ತುತ ದೇಶದ ಬಹುತೇಕ ಮೀನುಗಾರಿಕೆ ಚಟುವಟಿಕೆಗಳು ಕರಾವಳಿಯಿಂದ 40ರಿಂದ 50 ನಾಟಿಕಲ್ ಮೈಲುಗಳ ವ್ಯಾಪ್ತಿಯಲ್ಲೇ ಕೇಂದ್ರೀಕೃತವಾಗಿವೆ. ಆದರೆ ಆಳ ಸಮುದ್ರ ಪ್ರದೇಶದಲ್ಲಿ ಟ್ಯೂನ ಮೀನು ಸೇರಿದಂತೆ ಹೆಚ್ಚಿನ ಮೌಲ್ಯದ ಮೀನು ಪ್ರಭೇದಗಳ ಬಳಕೆಗೆ ವ್ಯಾಪಕ ಅವಕಾಶಗಳಿವೆ. ಭಾರತವು ಸುಮಾರು 11,099 ಕಿಲೋಮೀಟರ್ ಉದ್ದದ ಕರಾವಳಿ ಹಾಗೂ ಸುಮಾರು 24 ಲಕ್ಷ ಚದರ ಕಿಲೋಮೀಟರ್ ವಿಶೇಷ ಆರ್ಥಿಕ ವಲಯವನ್ನು ಹೊಂದಿದೆ. ಈ ಪ್ರದೇಶದಲ್ಲಿ ಸುಮಾರು 58.6 ಲಕ್ಷ ಮೆಟ್ರಿಕ್ ಟನ್ ಸಮುದ್ರ ಮೀನು ಸಂಪನ್ಮೂಲಗಳ ಸಾಮರ್ಥ್ಯವಿದ್ದು, ಸುಮಾರು 50 ಲಕ್ಷ ಮೀನುಗಾರರ ಜೀವನೋಪಾಯಕ್ಕೆ ಇದು ಆಧಾರವಾಗಿದೆ.

ಕೇಂದ್ರ ಸರ್ಕಾರದ ಪ್ರಕಾರ, 2025-26ನೇ ಹಣಕಾಸು ವರ್ಷದಲ್ಲಿ ಭಾರತವು ಸುಮಾರು ₹73,890 ಕೋಟಿ ಮೌಲ್ಯದ ಸಮುದ್ರ ಉತ್ಪನ್ನಗಳನ್ನು ರಫ್ತು ಮಾಡಿದೆ. ಆಳ ಸಮುದ್ರ ಮೀನುಗಾರಿಕೆಯ ವಿಸ್ತರಣೆಯನ್ನು ವಿಶಾಲ ಸಮುದ್ರ ಆರ್ಥಿಕತೆ ಹಾಗೂ ಮೀನುಗಾರರ ಆದಾಯ ಹೆಚ್ಚಿಸುವ ಸಾಧ್ಯತೆಗಳೊಂದಿಗೆ ಜೋಡಿಸಿ ನೋಡಲಾಗುತ್ತಿದೆ.

ಕೇಂದ್ರ ಸರ್ಕಾರವು ‘ವಿಶೇಷ ಆರ್ಥಿಕ ವಲಯ ನಿಯಮಗಳು-2025’ ಹಾಗೂ ‘ಅಂತರರಾಷ್ಟ್ರೀಯ ಜಲ ಪ್ರದೇಶ ಮಾರ್ಗಸೂಚಿಗಳು-2025’ನ್ನು ಅಧಿಸೂಚಿಸಿದೆ. ಇದರಡಿ ಕರಾವಳಿಯಿಂದ 12ರಿಂದ 200 ನಾಟಿಕಲ್ ಮೈಲುಗಳವರೆಗೆ ಮೀನುಗಾರಿಕೆ ನಡೆಸಲು ‘ರಿಯಲ್‌ಕ್ರಾಫ್ಟ್‌’ ಪೋರ್ಟಲ್ ಮೂಲಕ ಉಚಿತ ಡಿಜಿಟಲ್ ‘ಪ್ರವೇಶ ಅನುಮತಿ’ ನೀಡಲಾಗುತ್ತಿದೆ. ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬಂದ ಅರ್ಜಿಗಳ ಆಧಾರದ ಮೇಲೆ ಇದುವರೆಗೆ ಒಟ್ಟು 9,650 ಪ್ರವೇಶ ಅನುಮತಿಗಳನ್ನು ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

24 ಮೀಟರ್‌ಗಿಂತ ಹೆಚ್ಚು ಉದ್ದದ ಯಾಂತ್ರೀಕೃತ ದೋಣಿಗಳಿಗೆ ಈ ಅನುಮತಿ ಕಡ್ಡಾಯವಾಗಿದೆ. ಸಣ್ಣ ಹಾಗೂ ಯಾಂತ್ರೀಕೃತವಲ್ಲದ ಸಾಂಪ್ರದಾಯಿಕ ದೋಣಿಗಳಿಗೆ ಸ್ಥಳೀಯ ಜೀವನೋಪಾಯದ ರಕ್ಷಣೆ ಉದ್ದೇಶದಿಂದ ಈ ನಿಯಮದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande