ಮಕ್ಕಳ ಸುರಕ್ಷತೆಗೆ ಮಹತ್ವದ ಕ್ರಮ: ಭಾರತೀಯ ಏಜೆನ್ಸಿಗಳಿಗೆ ಮಾಹಿತಿ ನೀಡಲಿದೆ ಮೆಟಾ
ಭಾರತೀಯ ಏಜೆನ್ಸಿಗಳಿಗೆ ಮಾಹಿತಿ ನೀಡಲಿದೆ ಮೆಟಾ
Meta to share child safety related information with Indian agencies


ನವದೆಹಲಿ, 15 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ.

ಮಕ್ಕಳ ಲೈಂಗಿಕ ದೌರ್ಜನ್ಯ ಹಾಗೂ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ಪ್ರಕರಣಗಳ ಮಾಹಿತಿಯನ್ನು ಇನ್ನು ಮುಂದೆ ಭಾರತದಲ್ಲಿನ ಸಂಬಂಧಿತ ಕಾನೂನು ಜಾರಿ ಸಂಸ್ಥೆಗಳಿಗೆ ನೇರವಾಗಿ ನೀಡಲು ಮೆಟಾ ಒಪ್ಪಿಗೆ ಸೂಚಿಸಿದೆ.

ಮೆಟಾ ಸಂಸ್ಥೆಯ ಈ ನಿರ್ಧಾರದಿಂದ ಮಕ್ಕಳಿಗೆ ಸಂಬಂಧಿಸಿದ ಅಕ್ರಮ ಹಾಗೂ ಹಾನಿಕಾರಕ ಆನ್ಲೈನ್ ವಿಷಯಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಲು ಭಾರತೀಯ ತನಿಖಾ ಸಂಸ್ಥೆಗಳಿಗೆ ನೆರವಾಗಲಿದೆ.

ಈ ಹಿಂದೆ ಇಂತಹ ಪ್ರಕರಣಗಳ ವರದಿ ಮುಖ್ಯವಾಗಿ ಅಮೆರಿಕದ ನ್ಯಾಷನಲ್ ಸೆಂಟರ್ ಫಾರ್ ಮಿಸ್ಸಿಂಗ್ ಆ್ಯಂಡ್ ಎಕ್ಸ್ಪ್ಲಾಯಿಟೆಡ್ ಚಿಲ್ಡ್ರನ್ (NCMEC) ಮೂಲಕ ನಡೆಯುತ್ತಿತ್ತು. ಇದೀಗ ಭಾರತೀಯ ಅಧಿಕಾರಿಗಳಿಗೆ ನೇರವಾಗಿ ಮಾಹಿತಿ ನೀಡುವ ವ್ಯವಸ್ಥೆ ರೂಪುಗೊಳ್ಳಲಿದೆ.

ಮಕ್ಕಳ ಆನ್ಲೈನ್ ಸುರಕ್ಷತೆ ಸರ್ಕಾರಕ್ಕೆ ‘ರಾಜಿ ಮಾಡಿಕೊಳ್ಳಲಾಗದ’ ಮೂಲಭೂತ ವಿಷಯವಾಗಿದೆ. ಮಕ್ಕಳನ್ನು ರಕ್ಷಿಸಲು ಸಾಮಾಜಿಕ ಜಾಲತಾಣಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಸುರಕ್ಷತಾ ಕ್ರಮಗಳಲ್ಲಿ ವಿಫಲವಾಗುವ ವೇದಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದೆ.

ಮೆಟಾ ವಕ್ತಾರರು, “ನಮ್ಮ ವೇದಿಕೆಗಳಲ್ಲಿ ಮಕ್ಕಳನ್ನು ರಕ್ಷಿಸುವುದು ಕಂಪನಿಯ ಆದ್ಯತೆಯಾಗಿದೆ. ಈ ಅಪರಾಧಗಳಿಗೆ ಹೊಣೆಗಾರರನ್ನು ಕಾನೂನಿನ ಮುಂದೆ ತರಲು ಸರ್ಕಾರದೊಂದಿಗೆ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ” ಎಂದು ತಿಳಿಸಿದ್ದಾರೆ.

ಈ ಬೆಳವಣಿಗೆಯು ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಲೈಂಗಿಕ ಶೋಷಣೆ, ದುರುಪಯೋಗ ಮತ್ತು ಇತರ ಹಾನಿಕಾರಕ ವಿಷಯಗಳ ವಿರುದ್ಧ ಭಾರತದಲ್ಲಿ ನಡೆಯುತ್ತಿರುವ ಕಟ್ಟುನಿಟ್ಟಿನ ಕ್ರಮಗಳಿಗೆ ಮಹತ್ವದ ಹೆಜ್ಜೆಯಾಗಿದೆ.

ಸರ್ಕಾರವು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳೊಂದಿಗೂ ಈ ಕುರಿತು ಚರ್ಚೆ ನಡೆಸುತ್ತಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande