
ಬೆಂಗಳೂರು, 15 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:
ರಾಜಸ್ಥಾನದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ವಿಜಯ ಸಾಧಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳಿಗೆ ಜನರ ಬೆಂಬಲ ಮತ್ತೊಮ್ಮೆ ವ್ಯಕ್ತವಾಗಿದೆ ಎಂದು ಕೇಂದ್ರ ಸಚಿವ ಜೆ.ಪಿ. ನಡ್ಡಾ ಹೇಳಿದರು.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಸ್ಥಾನದಲ್ಲಿ ದ್ವಿ ಎಂಜಿನ್ ಸರ್ಕಾರಕ್ಕೆ ಜನರು ಮತ್ತೆ ಅಧಿಕಾರ ನೀಡಿದ್ದಾರೆ. ಸೆ.17ರಿಂದ ಬಿಜೆಪಿ ‘ಸೇವಾ ಸಂಕಲ್ಪ ಅಭಿಯಾನ’ ನಡೆಸುತ್ತಿದ್ದು, ಉತ್ತಮ ಆಡಳಿತ ಮತ್ತು ಜನಕಲ್ಯಾಣ ಪ್ರಧಾನಿ ನರೇಂದ್ರ ಮೋದಿ ಅವರ ಆದ್ಯತೆಯಾಗಿದೆ ಎಂದರು.
ಸೇವೆ, ಬದ್ಧತೆ ಮತ್ತು ಸಮರ್ಪಣಾ ಮನೋಭಾವದ ಮೂಲಕ ಮೋದಿ ಕೆಲಸ ಮಾಡುತ್ತಿದ್ದಾರೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವುದು ಅವರ ಗುರಿಯಾಗಿದೆ. ಜನರಿಗಾಗಿ ಸೇವೆ ಸಲ್ಲಿಸುತ್ತಿರುವ ಪ್ರಧಾನಿಯವರ ಸೇವಾ ಯಾತ್ರೆ 25 ವರ್ಷಗಳನ್ನು ಪೂರೈಸಿದೆ. ರಾಜ್ಯದಿಂದ ಕೇಂದ್ರದವರೆಗೆ ಅವರ ಬದ್ಧತೆ ಮತ್ತು ಸೇವಾ ಮನೋಭಾವದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ನಡ್ಡಾ ಹೇಳಿದರು.
ಪ್ರಧಾನಿ ಮೋದಿ ಕಳೆದ 25 ವರ್ಷಗಳಲ್ಲಿ ಒಂದೂ ರಜೆ ಪಡೆಯದೆ ಸೇವೆ ಸಲ್ಲಿಸಿರುವುದು ಹೆಮ್ಮೆಯ ಸಂಗತಿ. ಪ್ರಧಾನ ಸೇವಕರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಗೌರವ ಸಲ್ಲಿಸಲು ಒಂದು ತಿಂಗಳ ಕಾಲ ಸೇವಾ ಸಂಕಲ್ಪ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಅಭಿಯಾನದ ಅಂಗವಾಗಿ ಅಕ್ಟೋಬರ್ 17ರಂದು ‘ಸುಶಾಸನ ಸಂವಾದ’ ನಡೆಸಲಾಗುವುದು. ಒಂದು ತಿಂಗಳ ಅವಧಿಯಲ್ಲಿ ದೇಶಾದ್ಯಂತ 12 ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣವೇ ಮೋದಿ ಅವರ ಸಂಕಲ್ಪವಾಗಿದೆ ಎಂದು ನಡ್ಡಾ ತಿಳಿಸಿದರು.
ಮೋದಿ ಅವರು ದೇಶದ ರಾಜಕೀಯದ ದಿಕ್ಕು ಮತ್ತು ಸ್ವರೂಪವನ್ನೇ ಬದಲಿಸಿದ್ದಾರೆ. ತುಷ್ಟೀಕರಣ, ಕುಟುಂಬ ರಾಜಕಾರಣ, ಅಸಮಾನತೆ, ಅಭಿವೃದ್ಧಿ ಶೂನ್ಯತೆ ಹಾಗೂ ಜನವಿರೋಧಿ ಆಡಳಿತದಿಂದ ದೇಶದ ರಾಜಕೀಯ ಸಿಲುಕಿತ್ತು. ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ ಎಂದು ಅವರು ಹೇಳಿದರು.
ಜನರ ಬಳಿಗೆ ಸರ್ಕಾರದ ಸಾಧನೆಗಳ ವರದಿಯನ್ನು ಕೊಂಡೊಯ್ಯುವ ಸಂಪ್ರದಾಯವನ್ನು ಮೋದಿ ಆರಂಭಿಸಿದ್ದಾರೆ. ಮೋದಿ ಹೇಳಿದ್ದನ್ನು ಮಾಡಿದ್ದಾರೆ, ಹೇಳದಿರುವುದನ್ನೂ ಮಾಡಿ ತೋರಿಸಿದ್ದಾರೆ ಎಂದು ನಡ್ಡಾ ಹೇಳಿದರು.
ರಾಷ್ಟ್ರೀಯ ಬದ್ಧತೆಯ ವಿಚಾರದಲ್ಲಿ ಪಾಕಿಸ್ತಾನಕ್ಕೆ ಅದರದೇ ಭಾಷೆಯಲ್ಲಿ ಉತ್ತರಿಸುವ ಮೂಲಕ ಜಗತ್ತಿಗೆ ಭಾರತದ ನಿಲುವನ್ನು ಮೋದಿ ತೋರಿಸಿದ್ದಾರೆ. ಯಾರನ್ನೂ ಕೆಣಕುವುದಿಲ್ಲ, ಆದರೆ ಕೆಣಕಿದರೆ ಬಿಡುವುದಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ. ಸಂವಿಧಾನದ 370ನೇ ವಿಧಿ ರದ್ದುಪಡಿಸಿರುವುದು ಮೋದಿ ಅವರ ರಾಜಕೀಯ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ದೇಶದಲ್ಲಿ 25 ಕೋಟಿ ಜನರು ಬಡತನ ರೇಖೆಯಿಂದ ಹೊರಬಂದಿದ್ದಾರೆ. ಭಾರತ ಈಗ ಬೇಡುವ ದೇಶವಲ್ಲ, ನೀಡುವ ದೇಶವಾಗಿದೆ. ಮೋದಿ ಹಗಲು-ರಾತ್ರಿ ದೇಶದ ಜನರಿಗಾಗಿ ಸೇವೆ ಸಲ್ಲಿಸಿದ್ದಾರೆ ಎಂದು ನಡ್ಡಾ ಹೇಳಿದರು.
ಭಾರತ ವೇಗವಾಗಿ ಸಾಗುತ್ತಿರುವ ಆರ್ಥಿಕತೆಯ ದೇಶವಾಗಿದೆ. ಮೋದಿ ಅವರ ಆರ್ಥಿಕ ನೀತಿಗಳಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ರೈಲ್ವೆ ಹಾಗೂ ಭದ್ರತಾ ಕ್ಷೇತ್ರಗಳಲ್ಲಿ ದೇಶ ಸಾಕಷ್ಟು ಪ್ರಗತಿ ಸಾಧಿಸಿದೆ. ರಕ್ಷಣಾ ವಲಯದ ರಫ್ತು ಶೇ.5,500ರಷ್ಟು ಹೆಚ್ಚಾಗಿದೆ ಎಂದು ಅವರು ತಿಳಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾತುಗಳಿಗೆ ಜಗತ್ತು ಕಿವಿಗೊಡುತ್ತಿದೆ. ಬ್ರಿಕ್ಸ್ ಸಮ್ಮೇಳನದಲ್ಲಿಯೂ ಒಮ್ಮತದ ನಿರ್ಣಯ ಅಂಗೀಕಾರವಾಗಿದೆ. 26 ದೇಶಗಳು ಪ್ರಧಾನಿ ಮೋದಿ ಅವರಿಗೆ ತಮ್ಮ ಅತ್ಯುನ್ನತ ಗೌರವ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ ಎಂದು ನಡ್ಡಾ ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.