ಕಿಶಾವು ಬಹುಉದ್ದೇಶಿತ ಅಣೆಕಟ್ಟು ಯೋಜನೆಗೆ ಆರು ರಾಜ್ಯಗಳ ಒಪ್ಪಿಗೆ
ನವದೆಹಲಿ, 15 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಕಿಶಾವು ಬಹುಉದ್ದೇಶಿತ ಅಣೆಕಟ್ಟು ಯೋಜನೆಗೆ ಸಂಬಂಧಿಸಿದಂತೆ ಆರು ರಾಜ್ಯಗಳು ಮಂಗಳವಾರ ಒಪ್ಪಂದಕ್ಕೆ ಸಹಿ ಹಾಕಿವೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ ಮತ್ತು ದೆಹಲಿ ರಾಜ್ಯಗಳು ಒಪ್ಪಂದದ ಭಾಗವಾಗಿವೆ. ಯಮುನಾ ನದಿಯ ಉಪನ
दिल्ली में आयोजित बैठक में गृह मंत्री शाह और अन्य गणमान्य व्यक्ति


ನವದೆಹಲಿ, 15 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಕಿಶಾವು ಬಹುಉದ್ದೇಶಿತ ಅಣೆಕಟ್ಟು ಯೋಜನೆಗೆ ಸಂಬಂಧಿಸಿದಂತೆ ಆರು ರಾಜ್ಯಗಳು ಮಂಗಳವಾರ ಒಪ್ಪಂದಕ್ಕೆ ಸಹಿ ಹಾಕಿವೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ ಮತ್ತು ದೆಹಲಿ ರಾಜ್ಯಗಳು ಒಪ್ಪಂದದ ಭಾಗವಾಗಿವೆ. ಯಮುನಾ ನದಿಯ ಉಪನದಿಯಾದ ಟೋನ್ಸ್‌ ನದಿಗೆ ಯೋಜಿತ ಅಣೆಕಟ್ಟು ನಿರ್ಮಾಣವಾಗಲಿದ್ದು, ಈ ಒಪ್ಪಂದದಿಂದ ಯೋಜನೆಯನ್ನು ಮುಂದುವರಿಸಲು ಹಾಗೂ ರಾಜ್ಯಗಳ ನಡುವಿನ ಬಾಕಿ ಸಮನ್ವಯ ಸಮಸ್ಯೆಗಳನ್ನು ಪರಿಹರಿಸಲು ದಾರಿ ಸುಗಮವಾಗುವ ನಿರೀಕ್ಷೆಯಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆರು ರಾಜ್ಯಗಳ ಮುಖ್ಯಮಂತ್ರಿಗಳು ಒಪ್ಪಂದಕ್ಕೆ ಸಹಿ ಹಾಕಿದರು. ಯಮುನಾ ಜಲಾನಯನ ಪ್ರದೇಶದಲ್ಲಿ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವುದು, ವಿದ್ಯುತ್‌ ಉತ್ಪಾದನೆ ಹಾಗೂ ಪ್ರವಾಹ ನಿಯಂತ್ರಣವನ್ನು ಬಲಪಡಿಸುವುದು ಯೋಜನೆಯ ಉದ್ದೇಶವಾಗಿದೆ. ಯಮುನಾ ಜಲಾನಯನ ಪ್ರದೇಶದ ಜಲ ಸಂಪನ್ಮೂಲ ಹಂಚಿಕೆ ವಿಚಾರದಲ್ಲಿ ರಾಜ್ಯಗಳ ನಡುವೆ ಸಮನ್ವಯದ ಕೊರತೆಯಿಂದಾಗಿ ಯೋಜನೆ ಹಲವು ವರ್ಷಗಳಿಂದ ಬಾಕಿ ಉಳಿದಿತ್ತು.

ಕಿಶಾವು ಬಹುಉದ್ದೇಶಿತ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಸರ್ಕಾರ ಘೋಷಿಸಿದೆ ಎಂದು ಅಮಿತ್‌ ಶಾ ಹೇಳಿದರು. ಯೋಜನೆಯ ಸುಮಾರು ಶೇ.90ರಷ್ಟು ಆರ್ಥಿಕ ಹೊಣೆಯನ್ನು ಕೇಂದ್ರ ಸರ್ಕಾರ ವಹಿಸಲಿದೆ. ಉಳಿದ ಶೇ.10ರಷ್ಟು ಮೊತ್ತವನ್ನು 1994ರ ಒಪ್ಪಂದದಂತೆ ಪಾಲುದಾರ ರಾಜ್ಯಗಳು ಭರಿಸಲಿವೆ ಎಂದರು.

ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಗಡಿಯಲ್ಲಿ ಹರಿಯುವ ಟೋನ್ಸ್‌ ನದಿಗೆ 232.6 ಮೀಟರ್‌ ಎತ್ತರದ ಕಾಂಕ್ರೀಟ್‌ ಗುರುತ್ವ ಅಣೆಕಟ್ಟು ನಿರ್ಮಿಸಲಾಗುವುದು. ಇಲ್ಲಿ 1,562 ದಶಲಕ್ಷ ಘನ ಮೀಟರ್‌ ನೀರು ಸಂಗ್ರಹಿಸಬಹುದಾಗಿದೆ. ಇದರಿಂದ 97 ಸಾವಿರ ಹೆಕ್ಟೇರ್‌ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದ್ದು, 1,476 ದಶಲಕ್ಷ ಯೂನಿಟ್‌ ಶುದ್ಧ ಜಲವಿದ್ಯುತ್‌ ಉತ್ಪಾದನೆಯಾಗಲಿದೆ ಎಂದು ಗೃಹ ಸಚಿವರು ತಿಳಿಸಿದರು. ಯೋಜನೆಯಿಂದ ದೆಹಲಿಗೆ ಅತ್ಯಧಿಕ ಪ್ರಯೋಜನವಾಗಲಿದೆ ಎಂದರು.

ಯಮುನಾ ನದಿ ನೀರಿನ ಹಂಚಿಕೆ ಸಂದರ್ಭದಲ್ಲಿ ನೀತಿ ನಿರ್ಧಾರಕರ್ತರಿಂದ ಗಂಭೀರ ಲೋಪವಾಗಿದೆ. ಯಮುನಾದ ಪರಿಸರ ಹರಿವಿನ ಪ್ರಮಾಣವನ್ನು ಲೆಕ್ಕಹಾಕದೆ ಲಭ್ಯವಿದ್ದ ಸಂಪೂರ್ಣ ನೀರನ್ನು ರಾಜ್ಯಗಳ ನಡುವೆ ಹಂಚಿಕೆ ಮಾಡಲಾಗಿತ್ತು. ಇದರಿಂದ ನದಿಗೆ ನೀರು ಬಿಡುವ ವ್ಯವಸ್ಥೆ ಇರಲಿಲ್ಲ ಎಂದು ಅಮಿತ್‌ ಶಾ ಹೇಳಿದರು.

ಕಿಶಾವು ಬಹುಉದ್ದೇಶಿತ ಯೋಜನೆಯ ಒಪ್ಪಂದದಿಂದ ಶೇ.25ರಷ್ಟು ನೀರು ಲಭ್ಯವಾಗಲಿದ್ದು, ಇದು ದೆಹಲಿ ಮತ್ತು ಯಮುನಾ ನದಿ ಎರಡಕ್ಕೂ ಅತ್ಯಂತ ಪ್ರಯೋಜನಕಾರಿಯಾಗಲಿದೆ. ಇದರ ಜತೆಗೆ ಪರಿಸರ ಸಂರಕ್ಷಣೆಯೂ ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್‌ ಶಾ ಹಾಗೂ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್‌. ಪಾಟೀಲ್‌ ಅವರ ಉಪಸ್ಥಿತಿಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್‌ ಸಿಂಗ್‌ ಸುಖು, ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್‌ ಶರ್ಮಾ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಹರಿಯಾಣ ಮುಖ್ಯಮಂತ್ರಿ ನಾಯಬ್‌ ಸಿಂಗ್‌ ಸೈನಿ ಒಪ್ಪಂದಕ್ಕೆ ಸಹಿ ಹಾಕಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ಹತ್ತನೇ ಜಲ ವಿವಾದವೂ ಬಗೆಹರಿಯುವ ಹಂತಕ್ಕೆ ಬಂದಿದೆ ಎಂದು ಅಮಿತ್‌ ಶಾ ಹೇಳಿದರು. ಕಳೆದ 50 ವರ್ಷಗಳಿಂದ ಬಾಕಿ ಉಳಿದಿದ್ದ ಗಂಭೀರ ಜಲ ವಿವಾದಗಳನ್ನು ಪರಿಹರಿಸುವ ಪ್ರಯತ್ನ ನಡೆದಿದೆ. 2018ರ ಆಗಸ್ಟ್‌ನಲ್ಲಿ ಲಖ್ವಾರ್‌ ಬಹುಉದ್ದೇಶಿತ ಯೋಜನೆ ಹಾಗೂ ಶಹಪುರ ಕಂದಿ ಅಣೆಕಟ್ಟು ಯೋಜನೆಯ ವಿವಾದಗಳು ಬಗೆಹರಿದವು. 2019ರಲ್ಲಿ ಮೇಲ್ದರ್ಜೆಯ ಯಮುನಾ ಜಲಾನಯನ ಪ್ರದೇಶದ ರೇಣುಕಾಜಿ ಬಹುಉದ್ದೇಶಿತ ಅಣೆಕಟ್ಟು ಯೋಜನೆಯ ವಿವಾದ ಪರಿಹಾರವಾಯಿತು.

2021ರಲ್ಲಿ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಗಳ ನಡುವೆ ಕೆನ್‌-ಬೆಟ್ವಾ ಸಂಪರ್ಕ ಯೋಜನೆ ಕುರಿತು ಒಪ್ಪಂದವಾಗಿದ್ದು, ಇದರಿಂದ ಬುಂದೇಲ್‌ಖಂಡ್‌ನಂತಹ ನೀರಿನ ಕೊರತೆಯ ಪ್ರದೇಶಗಳಿಗೆ ಪ್ರಯೋಜನವಾಗಲಿದೆ. ಪರಿಷ್ಕೃತ ಪಾರ್ವತಿ-ಕಾಲಿಸಿಂಧ್‌-ಚಂಬಲ್‌ ನದಿ ಸಂಪರ್ಕ ಯೋಜನೆ 2024ರಲ್ಲಿ ಮುಂದುವರಿಯಿತು. ಹಥಿನಿಕುಂಡ್‌ನಿಂದ ಭೂಗತ ಕೊಳವೆ ಮಾರ್ಗದ ಮೂಲಕ ಯಮುನಾಗೆ ನೀರು ವರ್ಗಾಯಿಸುವ ಯೋಜನೆಗೆ 2024ರ ಫೆಬ್ರವರಿಯಲ್ಲಿ ಅನುಮೋದನೆ ದೊರೆಯಿತು.

ನರ್ಮದಾ ಯೋಜನೆಯಿಂದ ಸ್ಥಳಾಂತರಗೊಂಡ ಕುಟುಂಬಗಳ ಪುನರ್ವಸತಿ ವಿವಾದ ಜುಲೈ 2026ರಲ್ಲಿ ಪೂರ್ಣಗೊಂಡಿತು. ಸೋನ್‌ ಜಲಾನಯನ ಪ್ರದೇಶದಲ್ಲಿ ಬಿಹಾರ ಮತ್ತು ಜಾರ್ಖಂಡ್‌ ನಡುವಿನ ನೀರು ಹಂಚಿಕೆ ವಿವಾದ ಆಗಸ್ಟ್‌ 2026ರಲ್ಲಿ ಬಗೆಹರಿಯಿತು. ಇದೀಗ ಕಿಶಾವು ಬಹುಉದ್ದೇಶಿತ ಯೋಜನೆಗೆ ಆರು ರಾಜ್ಯಗಳ ನಡುವೆ ಒಪ್ಪಂದವಾಗಿರುವುದಾಗಿ ಅಮಿತ್‌ ಶಾ ತಿಳಿಸಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande