ಕೆಜಿಎಫ್ ನಲ್ಲಿ ಶಾಂತಿಯುವ ಗಣೇಶೋತ್ಸವ ಆಚರಿಸಲು ಎಸ್.ಪಿ. ಮನವಿ
ಕೆಜಿಎಫ್ ನಲ್ಲಿ ಶಾಂತಿಯುವ ಗಣೇಶೋತ್ಸವ ಆಚರಿಸಲು ಎಸ್.ಪಿ. ಮನವಿ
ಕೆಜಿಎಫ್ ಎಸ್.ಪಿ. ಶಿವಾಂಶು ರಜಪೂತ್


ಕೋಲಾರ, 14 ಸೆಪ್ಟೆಂಬರ್ (ಹಿ.ಸ)

ಆ್ಯಂಕರ್ : ಕೆಜಿಎಫ್ ನಗರದಲ್ಲಿ ಗಣೇಶ ಹಬ್ಬವನ್ನು ಶಾಂತಿಯುತ ಹಾಗೂ ಸುವ್ಯವಸ್ಥಿತವಾಗಿ ಆಚರಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಮತ್ತು ಆಯೋಜಕರು ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳನ್ನು ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಾಜಪೂತ್ ಪ್ರಕಟಿಸಿದ್ದಾರೆ. ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಪೊಲೀಸ್ ಇಲಾಖೆಯಿಂದ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸ್ಥಳೀಯ ಸಂಸ್ಥೆಗಳಿ0ದ ಅಥವಾ ಖಾಸಗಿ ಜಾಗವಾದರೆ ಮಾಲೀಕರಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು. ವಾಹನ ಹಾಗೂ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗದಂತೆ ಮೂರ್ತಿಗಳನ್ನು ಕೂರಿಸಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಧ್ವನಿವರ್ಧಕಗಳ ಬಳಕೆಗೆ ಪೊಲೀಸ್ ಇಲಾಖೆಯ ಅನುಮತಿ ಕಡ್ಡಾಯವಾಗಿದ್ದು, ನಿಗದಿತ ಸಮಯದಲ್ಲಿ ಹಾಗೂ ಮಿತಿಯಲ್ಲಿ ಮಾತ್ರ ಧ್ವನಿವರ್ಧಕ ಬಳಸಬೇಕು. ಪೆಂಡಾಲ್ ಬಳಿ ಅಗ್ನಿ ಅವಘಡ ತಡೆಯಲು ಮರಳು ಮತ್ತು ನೀರನ್ನು ಶೇಖರಿಸಿಡಬೇಕು ಹಾಗೂ ಅಗ್ನಿಶಾಮಕ ಮತ್ತು ಬೆಸ್ಕಾಂ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ವಿಸರ್ಜನೆವರೆಗೆ ೨೪ ಗಂಟೆಯೂ ಸ್ವಯಂಸೇವಕರನ್ನು ನೇಮಿಸಿ ಅವರ ವಿವರಗಳನ್ನು ಸ್ಥಳೀಯ ಠಾಣೆಗೆ ನೀಡಬೇಕು. ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನೇ ಬಳಸಿ, ಸೂರ್ಯಾಸ್ಥದೊಳಗೆ ನಿಗದಿತ ಸ್ಥಳಗಳಲ್ಲಿ ವಿಸರ್ಜನೆ ಮಾಡಬೇಕು. ಮೆರವಣಿಗೆಯ ಮಾರ್ಗ ಬದಲಾವಣೆಗೆ ಅವಕಾಶವಿಲ್ಲದಿದ್ದು, ಡಿ.ಜೆ. ಸೌಂಡ್ ಸಿಸ್ಟಮ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅನ್ಯಕೋಮಿನ ಧಾರ್ಮಿಕ ಕೇಂದ್ರಗಳ ಬಳಿ ಪ್ರಚೋದನಾಕಾರಿ ಹಾಡು ಅಥವಾ ಭಾಷಣಗಳಿಗೆ ಅವಕಾಶವಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿ ಗಲಾಟೆ ಮಾಡುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಸುರಕ್ಷತೆಗಾಗಿ ಕೆಜಿಎಫ್ನಲ್ಲಿ ವ್ಯಾಪಕ ಭದ್ರತೆ ಕಲ್ಪಿಸಲಾಗಿದ್ದು, ೩೧೫ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, ೩೪೨ ಹೋಮ್ ಗಾರ್ಡ್ಸ್, ೫ ಡಿ.ಎ.ಆರ್ ತುಕಡಿ ಹಾಗೂ ೨ ಕೆ.ಎಸ್.ಆರ್.ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಪ್ರಮುಖ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು, ಡ್ರೋಣ್ ಹಾಗೂ ಫುಟ್ ಪ್ಯಾಟ್ರೋಲಿಂಗ್ ಮೂಲಕ ತೀವ್ರ ನಿಗಾ ವಹಿಸಲಾಗಿದೆ. ಸಾರ್ವಜನಿಕರ ಸಹಕಾರದಿಂದ ಹಬ್ಬವನ್ನು ಸುರಕ್ಷಿತವಾಗಿ ಆಚರಿಸುವಂತೆ ಎಸ್ಪಿ ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande