
ನವದೆಹಲಿ, 09 ಆಗಸ್ಟ್ (ಹಿ.ಸ.):
ಆ್ಯಂಕರ್:ಭಾರತದ ಬಾಹ್ಯಾಕಾಶ ಆರ್ಥಿಕತೆ ಮುಂದಿನ 8-9 ವರ್ಷಗಳಲ್ಲಿ 40ರಿಂದ 45 ಶತಕೋಟಿ ಅಮೆರಿಕನ್ ಡಾಲರ್‌ಗೆ ತಲುಪುವ ನಿರೀಕ್ಷೆಯಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.
ನವದೆಹಲಿಯ ಲಲಿತ್ ಹೋಟೆಲ್‌ನಲ್ಲಿ ಭಾನುವಾರ ನಡೆದ ಡಿಜಿಟಲ್ ಉಪಕರಣ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೆ ಬಹುತೇಕ ಶೂನ್ಯವಾಗಿದ್ದ ಭಾರತದ ಬಾಹ್ಯಾಕಾಶ ಆರ್ಥಿಕತೆ ಇದೀಗ ಸುಮಾರು 9 ಶತಕೋಟಿ ಡಾಲರ್‌ಗೆ ವೃದ್ಧಿಯಾಗಿದೆ. ಇದು ವೇಗವಾಗಿ ವಿಸ್ತರಿಸುತ್ತಿದ್ದು, ಮುಂದಿನ 8-9 ವರ್ಷಗಳಲ್ಲಿ 40-45 ಶತಕೋಟಿ ಡಾಲರ್‌ಗೆ ತಲುಪುವ ಸಾಧ್ಯತೆಯಿದೆ ಎಂದರು.
2047ರ ವೇಳೆಗೆ ಭಾರತದ ಸಾಮರ್ಥ್ಯ ಮತ್ತು ನಾವೀನ್ಯತೆಗಳನ್ನು ಜಗತ್ತಿನ ಇತರ ರಾಷ್ಟ್ರಗಳು ಅಳವಡಿಸಿಕೊಳ್ಳುವಂತಹ ದೇಶವಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಸಚಿವರು ಹೇಳಿದರು.
ಮುಂದಿನ ಕೈಗಾರಿಕಾ ಕ್ರಾಂತಿ ಜೈವಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತವಾಗಿರಲಿದೆ. ಭಾರತವು ಜೈವಿಕ ತಂತ್ರಜ್ಞಾನಕ್ಕೆ ಪ್ರತ್ಯೇಕ ನೀತಿ ಹೊಂದಿರುವ ಕೆಲವೇ ರಾಷ್ಟ್ರಗಳಲ್ಲಿ ಒಂದಾಗಿದೆ. ರಾಷ್ಟ್ರೀಯ ಕ್ವಾಂಟಂ ಮಿಷನ್, ಭಾರತೀಯ ಕೃತಕ ಬುದ್ಧಿಮತ್ತೆ ಮಿಷನ್ ಸೇರಿದಂತೆ ಬಾಹ್ಯಾಕಾಶ ಹಾಗೂ ಇತರ ಅತ್ಯಾಧುನಿಕ ಕ್ಷೇತ್ರಗಳಲ್ಲಿ ಭಾರತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಎಂದರು.
ಪರಮಾಣು ಕ್ಷೇತ್ರವನ್ನು ಖಾಸಗಿ ಕಂಪನಿಗಳಿಗೆ ಮುಕ್ತಗೊಳಿಸುವುದರಿಂದ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಅದಕ್ಕೆ ಅನುಗುಣವಾಗಿ ಕೈಗಾರಿಕೆಗಳು ಅಗತ್ಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ದೇಶದ ನವೋದ್ಯಮ ಪರಿಸರ ವ್ಯವಸ್ಥೆಯ ಬೆಳವಣಿಗೆಯಿಂದ ನಾವೀನ್ಯತೆಗಳು ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಜಿತೇಂದ್ರ ಸಿಂಗ್ ಹೇಳಿದರು.
ಹಳೆಯ ಕಾನೂನುಗಳು ಮತ್ತು ಕಾರ್ಯವಿಧಾನಗಳನ್ನು ತೆಗೆದುಹಾಕುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡ ಕ್ರಮಗಳನ್ನು ಉಲ್ಲೇಖಿಸಿದ ಅವರು, ಸಮಾಜ ಮತ್ತು ಆಡಳಿತದಲ್ಲಿ ಬದಲಾವಣೆಗಳಾದರೂ ಹಿಂದಿನ ಕಾಲದಿಂದ ಮುಂದುವರಿದಿದ್ದ ಸುಮಾರು 2,000 ಅನಗತ್ಯ ಕಾನೂನುಗಳನ್ನು ರದ್ದುಪಡಿಸಲಾಗಿದೆ ಎಂದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.