
ಬೆಂಗಳೂರು, 04 ಆಗಸ್ಟ್ (ಹಿ.ಸ.):
ಆ್ಯಂಕರ್:ನ್ಯಾನೋ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್, ಜೈವಿಕ ತಂತ್ರಜ್ಞಾನ ಹಾಗೂ ಕ್ವಾಂಟಮ್ ತಂತ್ರಜ್ಞಾನ ಸೇರಿದಂತೆ ಡೀಪ್-ಟೆಕ್ ಕ್ಷೇತ್ರಗಳಲ್ಲಿ ಬೆಂಗಳೂರನ್ನು ಜಾಗತಿಕ ಕೇಂದ್ರವನ್ನಾಗಿ ರೂಪಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ನ್ಯಾನೋ ತಂತ್ರಜ್ಞಾನ ವಿಷನ್ ಗ್ರೂಪ್ ಆಯೋಜಿಸಿದ್ದ 14ನೇ ಇಂಡಿಯಾ ನ್ಯಾನೋ-2026 ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವಮಟ್ಟದ ಗುರುತನ್ನು ಪಡೆದಿರುವ ಬೆಂಗಳೂರು ಈಗ ಡೀಪ್-ಟೆಕ್ ಕ್ಷೇತ್ರದಲ್ಲಿಯೂ ಜಾಗತಿಕ ನಾಯಕತ್ವ ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದರು.
ಸರ್ಕಾರ, ಶೈಕ್ಷಣಿಕ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಉದ್ಯಮಗಳು ಹಾಗೂ ನವೋದ್ಯಮಗಳ ನಡುವಿನ ಸಮನ್ವಯವೇ ಕರ್ನಾಟಕದ ದೊಡ್ಡ ಶಕ್ತಿಯಾಗಿದ್ದು, ಇದೇ ಸಹಯೋಗದಿಂದ ಹೊಸ ಆವಿಷ್ಕಾರಗಳು ಬೆಳೆಯಲಿವೆ ಎಂದು ಹೇಳಿದರು. ಭಾರತ ರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರ ದೂರದೃಷ್ಟಿ ಹಾಗೂ ವೈಜ್ಞಾನಿಕ ಕೊಡುಗೆಗಳು ಇಂದಿಗೂ ಸಂಶೋಧಕರಿಗೆ ಪ್ರೇರಣೆಯಾಗಿವೆ ಎಂದು ಶ್ಲಾಘಿಸಿದರು.
ರಾಜ್ಯದಲ್ಲಿರುವ ಪ್ರಮುಖ ಸಂಶೋಧನಾ ಸಂಸ್ಥೆಗಳು, ಬಹುರಾಷ್ಟ್ರೀಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು, ವಿಶ್ವವಿದ್ಯಾಲಯಗಳು ಹಾಗೂ ಸ್ಟಾರ್ಟ್‌ಅಪ್‌ಗಳ ಬಲಿಷ್ಠ ಪರಿಸರ ವ್ಯವಸ್ಥೆ ಕರ್ನಾಟಕವನ್ನು ಡೀಪ್-ಟೆಕ್ ಕ್ಷೇತ್ರದಲ್ಲಿ ಜಾಗತಿಕ ಮುಂಚೂಣಿಗೆ ತರುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.
ನ್ಯಾನೋ ತಂತ್ರಜ್ಞಾನವು ಕೇವಲ ಸಂಶೋಧನಾ ಪ್ರಯೋಗಾಲಯಗಳಿಗೆ ಸೀಮಿತವಾಗಿಲ್ಲ. ಆರೋಗ್ಯ, ಕೃಷಿ, ಇಂಧನ, ಎಲೆಕ್ಟ್ರಾನಿಕ್ಸ್, ಸಾರಿಗೆ, ಬಾಹ್ಯಾಕಾಶ, ರಕ್ಷಣೆ ಹಾಗೂ ಸುಧಾರಿತ ಉತ್ಪಾದನಾ ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆ ತರಬಲ್ಲ ತಂತ್ರಜ್ಞಾನವಾಗಿದೆ ಎಂದು ಅವರು ಹೇಳಿದರು. ಕೃತಕ ಬುದ್ಧಿಮತ್ತೆ, ನ್ಯಾನೋ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಕ್ವಾಂಟಮ್ ತಂತ್ರಜ್ಞಾನ ಹಾಗೂ ಸೆಮಿಕಂಡಕ್ಟರ್‌ಗಳ ಸಂಯೋಜನೆಯೇ ಭವಿಷ್ಯದ ತಂತ್ರಜ್ಞಾನವನ್ನು ರೂಪಿಸಲಿದೆ ಎಂದು ಅಭಿಪ್ರಾಯಪಟ್ಟರು.
1893ರಲ್ಲಿ ಜಮ್‌ಶೆಟ್‌ಜಿ ಟಾಟಾ ಹಾಗೂ ಸ್ವಾಮಿ ವಿವೇಕಾನಂದರ ನಡುವೆ ನಡೆದ ಐತಿಹಾಸಿಕ ಭೇಟಿಯೇ ಭಾರತೀಯ ವಿಜ್ಞಾನ ಸಂಸ್ಥೆ ಸ್ಥಾಪನೆಗೆ ಪ್ರೇರಣೆಯಾಯಿತು ಎಂದು ಸ್ಮರಿಸಿದ ಮುಖ್ಯಮಂತ್ರಿ, ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಬೆಂಗಳೂರಿನಲ್ಲಿ ಭೂಮಿ ಹಾಗೂ ಅಗತ್ಯ ನೆರವು ನೀಡಿದ್ದರಿಂದ ಈ ಕನಸು ನನಸಾಯಿತು ಎಂದು ಹೇಳಿದರು.
ಇಂದು ರಾಷ್ಟ್ರಗಳು ಕೇವಲ ಹೂಡಿಕೆಗಳಿಗಾಗಿ ಮಾತ್ರವಲ್ಲ, ವೈಜ್ಞಾನಿಕ ನಾಯಕತ್ವಕ್ಕಾಗಿ ಸ್ಪರ್ಧಿಸುತ್ತಿವೆ. ಸುಧಾರಿತ ಸಾಮಗ್ರಿಗಳು, ನ್ಯಾನೋ ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್ ಹಾಗೂ ಕೃತಕ ಬುದ್ಧಿಮತ್ತೆ ಆಧಾರಿತ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರಗಳೇ ಮುಂದಿನ ಜಾಗತಿಕ ಆರ್ಥಿಕತೆಯನ್ನು ಮುನ್ನಡೆಸಲಿವೆ. ಆ ಸಾಲಿನಲ್ಲಿ ಕರ್ನಾಟಕವೂ ಸ್ಥಾನ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೈಜ್ಞಾನಿಕ ಸಂಶೋಧನೆಗಳು ಪ್ರಯೋಗಾಲಯಗಳಲ್ಲೇ ಉಳಿಯದೆ ಉದ್ಯಮಗಳಿಗೆ ತಲುಪಿ ವಾಣಿಜ್ಯ ಉತ್ಪನ್ನಗಳಾಗಬೇಕು. ಅದಕ್ಕಾಗಿ ಶೈಕ್ಷಣಿಕ ಕ್ಷೇತ್ರ, ಉದ್ಯಮಗಳು ಹಾಗೂ ನವೋದ್ಯಮಗಳ ನಡುವೆ ಹೆಚ್ಚಿನ ಸಹಯೋಗ ಅಗತ್ಯವಾಗಿದೆ ಎಂದು ಹೇಳಿದರು.
ನ್ಯಾನೋ ತಂತ್ರಜ್ಞಾನದಿಂದ ನಿಖರ ವೈದ್ಯಕೀಯ, ಗುರಿ ಆಧಾರಿತ ಔಷಧ ವಿತರಣೆ, ಸ್ಮಾರ್ಟ್ ರಸಗೊಬ್ಬರಗಳು, ನೀರಿನ ಸಮರ್ಥ ನಿರ್ವಹಣೆ, ಸ್ವಚ್ಛ ಇಂಧನ ಹಾಗೂ ಸುಸ್ಥಿರ ಉತ್ಪಾದನೆಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿರುವ ಜಾಗತಿಕ ಸಾಮರ್ಥ್ಯ ಕೇಂದ್ರಗಳು ಕೇವಲ ಸೇವಾ ಕಾರ್ಯಗಳಿಗೆ ಸೀಮಿತವಾಗದೆ ಹೊಸ ಸಂಶೋಧನೆ, ಹೊಸ ಪೇಟೆಂಟ್‌ಗಳು ಹಾಗೂ ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಕರೆ ನೀಡಿದರು. ಶೈಕ್ಷಣಿಕ ಸಂಸ್ಥೆಗಳು ಆರಂಭಿಕ ಹಂತದಲ್ಲೇ ಉದ್ಯಮಗಳೊಂದಿಗೆ ಕೈಜೋಡಿಸಿ ಸಂಶೋಧನೆಗಳನ್ನು ಸಮಾಜಕ್ಕೆ ಉಪಯುಕ್ತವಾಗುವ ಉತ್ಪನ್ನಗಳಾಗಿ ರೂಪಿಸಬೇಕು ಎಂದರು.
ಯುವ ವಿಜ್ಞಾನಿಗಳು ದೊಡ್ಡ ಕನಸುಗಳನ್ನು ಕಾಣಬೇಕು, ಸಂಕೀರ್ಣ ವೈಜ್ಞಾನಿಕ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬೇಕು. ಅವರಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದ ಮುಖ್ಯಮಂತ್ರಿ, ತಂತ್ರಜ್ಞಾನದ ಬೆಳವಣಿಗೆ ಮಾನವ ಕಲ್ಯಾಣ, ಉದ್ಯೋಗ ಸೃಷ್ಟಿ, ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿರಬೇಕು ಎಂದು ಪ್ರತಿಪಾದಿಸಿದರು.
ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಭಾರತದ ಸಿಲಿಕಾನ್ ವ್ಯಾಲಿ ಎಂಬ ಹೆಗ್ಗಳಿಕೆ ಪಡೆದಿರುವ ಬೆಂಗಳೂರು, ಮುಂದಿನ ದಿನಗಳಲ್ಲಿ ನ್ಯಾನೋ ತಂತ್ರಜ್ಞಾನ, ಸೆಮಿಕಂಡಕ್ಟರ್, ಕ್ವಾಂಟಮ್ ವಿಜ್ಞಾನ, ಸುಧಾರಿತ ಉತ್ಪಾದನೆ ಹಾಗೂ ಕೃತಕ ಬುದ್ಧಿಮತ್ತೆ ಆಧಾರಿತ ಡೀಪ್-ಟೆಕ್ ಕ್ಷೇತ್ರದಲ್ಲೂ ಜಾಗತಿಕ ರಾಜಧಾನಿಯಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವ್ಯಕ್ತಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.