ಫುಕೆಟ್–ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ತೀವ್ರ ಗಾಳಿಯ ಅಶಾಂತಿ; 12 ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಗಾಯ
ನವದೆಹಲಿ, 04 ಆಗಸ್ಟ್ (ಹಿ.ಸ.): ಆ್ಯಂಕರ್: ಥೈಲ್ಯಾಂಡ್‌ನ ಫುಕೆಟ್‌ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾದ ಎಐ–2379 ವಿಮಾನವು ಮಂಗಳವಾರ ಮಧ್ಯಾಕಾಶದಲ್ಲಿ ತೀವ್ರ ಗಾಳಿಯ ಅಶಾಂತಿಗೆ (ಟರ್ಬುಲೆನ್ಸ್) ಸಿಲುಕಿದ ಪರಿಣಾಮ 12 ಪ್ರಯಾಣಿಕರು ಹಾಗೂ ವಿಮಾನದ ಸಿಬ್ಬಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲ
एयर इंडिया का विमान (फाइल फोटो)।


ನವದೆಹಲಿ, 04 ಆಗಸ್ಟ್ (ಹಿ.ಸ.):

ಆ್ಯಂಕರ್:

ಥೈಲ್ಯಾಂಡ್‌ನ ಫುಕೆಟ್‌ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾದ ಎಐ–2379 ವಿಮಾನವು ಮಂಗಳವಾರ ಮಧ್ಯಾಕಾಶದಲ್ಲಿ ತೀವ್ರ ಗಾಳಿಯ ಅಶಾಂತಿಗೆ (ಟರ್ಬುಲೆನ್ಸ್) ಸಿಲುಕಿದ ಪರಿಣಾಮ 12 ಪ್ರಯಾಣಿಕರು ಹಾಗೂ ವಿಮಾನದ ಸಿಬ್ಬಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಏಳು ಮಂದಿಯನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಮಾನದಲ್ಲಿ ಒಟ್ಟು 134 ಪ್ರಯಾಣಿಕರಿದ್ದರು. ತೀವ್ರ ಗಾಳಿಯ ಅಶಾಂತಿಯ ನಡುವೆಯೂ ವಿಮಾನವು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತು. ಬಳಿಕ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನ ನಿಲ್ದಾಣದ ಸಮೀಪದ ವೈದ್ಯಕೀಯ ಕೇಂದ್ರಕ್ಕೆ ಕಳುಹಿಸಲಾಯಿತು. ಇವರಲ್ಲಿ ಏಳು ಮಂದಿಯನ್ನು ವಸಂತ ಕುಂಜ್‌ನಲ್ಲಿರುವ ಫೋರ್ಟಿಸ್ ಫ್ಲೈಟ್ ಲೆಫ್ಟಿನೆಂಟ್ ರಾಜನ್ ಧಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯನ್ನು ಏರ್ ಇಂಡಿಯಾ ದೃಢಪಡಿಸಿದ್ದು, ವಿಮಾನವು ತನ್ನ ಸಾಮಾನ್ಯ ಹಾರಾಟದ ಹಂತದಲ್ಲಿದ್ದಾಗ ಏಕಾಏಕಿ ತೀವ್ರ ಗಾಳಿಯ ಅಶಾಂತಿಯನ್ನು ಎದುರಿಸಿತು. ಇದರಿಂದ ವಿಮಾನದ ಎತ್ತರದಲ್ಲಿ ಕೆಲಕಾಲ ತೀವ್ರ ಏರಿಳಿತ ಉಂಟಾಯಿತು. ಆದಾಗ್ಯೂ, ವಿಮಾನವನ್ನು ಸುರಕ್ಷಿತವಾಗಿ ದೆಹಲಿಗೆ ತಂದು ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಸುರಕ್ಷಿತವಾಗಿ ಇಳಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ತಂಡ ಎಲ್ಲ ಗಾಯಾಳುಗಳನ್ನು ತಕ್ಷಣ ಪರೀಕ್ಷಿಸಿ ಅಗತ್ಯ ಚಿಕಿತ್ಸೆ ನೀಡಿತು. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ಸಂಸ್ಥೆಯ ಮೊದಲ ಆದ್ಯತೆಯಾಗಿದ್ದು, ಗಾಯಾಳುಗಳಿಗೆ ಅಗತ್ಯವಿರುವ ಎಲ್ಲ ನೆರವು ನೀಡಲಾಗುತ್ತಿದೆ ಎಂದು ಏರ್ ಇಂಡಿಯಾ ತಿಳಿಸಿದೆ. ಆಸ್ಪತ್ರೆಯಲ್ಲಿ ಸಂಸ್ಥೆಯ ವಿಶೇಷ ಸಮನ್ವಯ ತಂಡ ನಿಯೋಜನೆಯಾಗಿದ್ದು, ಚಿಕಿತ್ಸೆ, ದಾಖಲೆ ಪ್ರಕ್ರಿಯೆ ಹಾಗೂ ಕುಟುಂಬ ಸದಸ್ಯರೊಂದಿಗೆ ಸಂಪರ್ಕ ಸೇರಿದಂತೆ ಎಲ್ಲ ವ್ಯವಸ್ಥೆಗಳಲ್ಲಿ ನೆರವು ನೀಡುತ್ತಿದೆ.

ಆಸ್ಪತ್ರೆ ಆಡಳಿತದ ಪ್ರಕಾರ, ದಾಖಲಾಗಿರುವ ಏಳು ಮಂದಿಯ ಆರೋಗ್ಯ ಸ್ಥಿತಿಯನ್ನು ಸ್ಥಿರಗೊಳಿಸಿದ ಬಳಿಕ ಸಮನ್ವಿತ ತುರ್ತು ಚಿಕಿತ್ಸಾ ವ್ಯವಸ್ಥೆಗಾಗಿ ‘ಕೋಡ್ ಯೆಲ್ಲೋ’ ಜಾರಿಗೊಳಿಸಲಾಯಿತು. ವೈದ್ಯಕೀಯ ಅಗತ್ಯಕ್ಕೆ ಅನುಗುಣವಾಗಿ ಸಿಟಿ ಸ್ಕ್ಯಾನ್, ಎಂಆರ್‌ಐ ಹಾಗೂ ಎಕ್ಸ್-ರೇ ಪರೀಕ್ಷೆಗಳನ್ನು ನಡೆಸಲಾಗಿದ್ದು, ಮುಂದಿನ ನಿಗಾ ಮತ್ತು ಚಿಕಿತ್ಸೆಗೆ ವಾರ್ಡ್‌ಗಳಿಗೆ ಸ್ಥಳಾಂತರಿಸಲಾಗಿದೆ. ವೈದ್ಯರ ತಂಡ ಗಾಯಾಳುಗಳ ಆರೋಗ್ಯದ ಮೇಲೆ ನಿರಂತರ ನಿಗಾ ವಹಿಸಿದೆ.

ಘಟನೆಯ ಕುರಿತು ತಾಂತ್ರಿಕ ತಜ್ಞರು ಹಾಗೂ ಸಂಬಂಧಿತ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ತನಿಖೆಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿ ಏರ್ ಇಂಡಿಯಾ ತಿಳಿಸಿದೆ.

ಘಟನೆಯ ಬಳಿಕ ಕೆಲ ಪ್ರಯಾಣಿಕರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ವಿಮಾನವು ಸುಮಾರು ಒಂದೂವರೆ ಗಂಟೆಗಳ ಕಾಲ ಹಾರಿದ ಬಳಿಕ ಏಕಾಏಕಿ ಎರಡು-ಮೂರು ನಿಮಿಷಗಳ ಕಾಲ ತೀವ್ರವಾಗಿ ಮೇಲಕ್ಕೆ-ಕೆಳಕ್ಕೆ ಅಲುಗಾಡಿತು ಎಂದು ತಿಳಿಸಿದ್ದಾರೆ. ಈ ವೇಳೆ ಹಲವರ ತಲೆ ಮೇಲಿನ ಸಾಮಾನು ಇಡುವ ಕಪಾಟಿಗೆ ಬಡಿದಿದ್ದು, ಕೆಲವರು ಆಸನದಿಂದ ಮೇಲಕ್ಕೆ ಎಸೆಯಲ್ಪಟ್ಟ ಅನುಭವವಾಗಿದೆ ಎಂದು ಹೇಳಿದ್ದಾರೆ.

ಇನ್ನೊಬ್ಬ ಪ್ರಯಾಣಿಕನ ಪ್ರಕಾರ, ವಿಮಾನವು ಏಕಾಏಕಿ ಸಾಕಷ್ಟು ಕೆಳಕ್ಕೆ ಇಳಿದಂತೆ ಅನುಭವವಾಗಿದ್ದು, ಹಲವರ ತಲೆ ವಿಮಾನದ ಮೇಲ್ಛಾವಣಿಗೆ ಬಡಿದಿದೆ. ಕೆಲ ಕ್ಷಣಗಳ ಕಾಲ ವಿಮಾನ ಉರುಳಿಬೀಳುವಂತೆಯೇ ಭಾಸವಾಗಿದ್ದು, ಪ್ರಯಾಣಿಕರಲ್ಲಿ ಭಾರೀ ಆತಂಕ ಮತ್ತು ಗೊಂದಲ ಉಂಟಾಗಿತ್ತು ಎಂದು ಅವರು ವಿವರಿಸಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande