19 ಲಕ್ಷ ಮನೆಗಳ ವಿದ್ಯುತ್ ಬಿಲ್ ಶೂನ್ಯ; ಸಚಿವ ಜೋಶಿ
ನವದೆಹಲಿ, 04 ಆಗಸ್ಟ್ (ಹಿ.ಸ.): ಆ್ಯಂಕರ್: ದೇಶದಲ್ಲಿ ʼಪಿಎಂ ಸೂರ್ಯಘರ್‌ʼ ಶುರುವಾದ ಎರಡೇ ವರ್ಷದಲ್ಲಿ 50.06 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಸೌರ ಬೆಳಕು ಕಂಡಿವೆ. 19 ಲಕ್ಷ ಮನೆಗಳ ವಿದ್ಯುತ್‌ ಬಿಲ್‌ ಶೂನ್ಯವಾಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಪತ್ರಿಕಾ
ಪ್ರಹ್ಲಾದ ಜೋಶಿ ಸಂಗ್ರಹ ಚಿತ್ರ


ನವದೆಹಲಿ, 04 ಆಗಸ್ಟ್ (ಹಿ.ಸ.):

ಆ್ಯಂಕರ್:

ದೇಶದಲ್ಲಿ ʼಪಿಎಂ ಸೂರ್ಯಘರ್‌ʼ ಶುರುವಾದ ಎರಡೇ ವರ್ಷದಲ್ಲಿ 50.06 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಸೌರ ಬೆಳಕು ಕಂಡಿವೆ. 19 ಲಕ್ಷ ಮನೆಗಳ ವಿದ್ಯುತ್‌ ಬಿಲ್‌ ಶೂನ್ಯವಾಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.

ʼಪ್ರಧಾನ ಮಂತ್ರಿ ಸೂರ್ಯಘರ್ ಮಫ್ತ್ ಬಿಜ್ಲಿ ಯೋಜನೆʼ ವಿಶ್ವದ ಅತಿದೊಡ್ಡ ಸೌರ ಮೇಲ್ಚಾವಣಿ ಅಭಿಯಾನವಾಗಿ ಹೆಗ್ಗುರುತಾಗಿದ್ದು, ಯೋಜನೆ ಆರಂಭವಾದ ಎರಡೇ ವರ್ಷದಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ. ಪ್ರತಿ ನಿತ್ಯವೂ ಹೊಸದೊಂದು ಮೈಲಿಗಲ್ಲು ಸ್ಥಾಪಿಸುತ್ತಿದೆ ಎಂದಿದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ 7.94 ಲಕ್ಷ ಸೌರ ಮೇಲ್ಛಾವಣಿ ಸ್ಥಾಪನೆ ಕಂಡಿದ್ದ ಭಾರತದಲ್ಲೀಗ ಸೂರ್ಯಘರ್‌ ಯೋಜನೆ ಜಾರಿ ಬಳಿಕ ಗಮನಾರ್ಹ ವೇಗ ಕಂಡಿದೆ. ₹75,021 ಕೋಟಿ ವೆಚ್ಚದಲ್ಲಿ ತ್ವರಿತ ಅನುಷ್ಠಾನಗೊಂಡ ಈ ಯೋಜನೆ ಇಂದು ಪ್ರತಿ ಆರು ದಿನಗಳಿಗೊಮ್ಮೆ 1 ಲಕ್ಷ ಮನೆಗಳನ್ನು ತಲುಪುತ್ತಿದೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ಜಗತ್ತಿನೆಲ್ಲೆಡೆ ಅತಿ ವೇಗವಾಗಿ ಬೆಳೆಯುತ್ತಿರುವ ಶುದ್ಧ ಇಂಧನ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಜುಲೈ ಒಂದೇ ತಿಂಗಳಲ್ಲಿ 5.06 ಲಕ್ಷ ಕುಟುಂಬಗಳು ಪ್ರಯೋಜನ ಪಡೆದಿವೆ. ಯೋಜನೆ ಶುರುವಾದ ನಂತರದಲ್ಲಿ ಇದು ದಾಖಲೆ ಎಂದು ಹೇಳಿದ್ದಾರೆ.

19 ಲಕ್ಷ ಮನೆಗಳಲ್ಲಿ ಶೂನ್ಯ ವಿದ್ಯುತ್‌ ಬಿಲ್‌:

ದೇಶಾದ್ಯಂತ ಸುಮಾರು 19 ಲಕ್ಷ ಕುಟುಂಬಗಳೀಗ ಶೂನ್ಯ ವಿದ್ಯುತ್ ಬಿಲ್‌ ಪಡೆಯುತ್ತಿವೆ. 2024-25ನೇ ಆರ್ಥಿಕ ವರ್ಷದಲ್ಲಿ 12 ಲಕ್ಷಕ್ಕೂ ಅಧಿಕ ಕುಟುಂಬಗಳು ಹೆಚ್ಚುವರಿ ವಿದ್ಯುತ್ ಮಾರಾಟದ ಮೂಲಕ ಒಟ್ಟು ₹421 ಕೋಟಿ ಗಳಿಸಿವೆ. ಈ ಮೂಲಕ ಗ್ರಿಡ್‌ಗೆ ಮತ್ತೆ ವಿದ್ಯುತ್ ರಫ್ತು ಮಾಡುವವರಿಗೆ ಪ್ರತಿ ಮನೆಗೆ ವಾರ್ಷಿಕವಾಗಿ ಸುಮಾರು ₹3,500 ಹೆಚ್ಚುವರಿ ಆದಾಯ ಕಲ್ಪಿಸಿದೆ. ಫಲಾನುಭವಿಗಳಿಗೆ ಈವರೆಗೆ ಡಿಬಿಟಿ ಮೂಲಕ ₹28,024 ಕೋಟಿ ಸಬ್ಸಿಡಿ ಭರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

12 ರಾಜ್ಯಗಳಲ್ಲಿ ಯುಟಿಲಿಟಿ ಮಾದರಿಗೆ ಅನುಮೋದನೆ:

ದೇಶದ 4 ರಾಜ್ಯಗಳಲ್ಲಿ ಪಿಎಂಎವಾಯ್,ಬಿಪಿಎಲ್, ಮತ್ತು ಎಸ್.ಸಿ./ಎಸ್.ಟಿ ಕುಟುಂಬಗಳಿಗೆ 1.6 ಲಕ್ಷ ಸೌರ ಮೇಲ್ಚಾವಣಿ ಸ್ಥಾಪನೆ ಪೂರ್ಣಗೊಂಡಿವೆ. ಯುಟಿಲಿಟಿ ನೇತೃತ್ವದ ಈ ಮಾದರಿಯಡಿ 12 ರಾಜ್ಯಗಳಲ್ಲಿ ಬಿಡುಗಡೆಗೆ ಅನುಮೋದನೆ ನೀಡಿದ್ದು, ಕಡಿಮೆ ಆದಾಯದ ಕುಟುಂಬಗಳಿಗೆ ಅನುಕೂಲ ಕಲ್ಪಿಸಿದೆ. 21.87 ಲಕ್ಷ ಅರ್ಜಿದಾರರಿಗೆ ಶೇ.5.75ರಷ್ಟು ರಿಯಾಯಿತಿ ಸಾಲ ಸೌಲಭ್ಯ ಮಂಜೂರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಪಿಎಂ ಸೂರ್ಯಘರ್‌ ಯೋಜನೆ ಮಾರಾಟ ಮತ್ತು ಉದ್ಯೋಗವನ್ನು ಸೃಷ್ಟಿಸಿದೆ. 34,219 ನೋಂದಾಯಿತ ಮಾರಾಟಗಾರರಿದ್ದು, 29,469 ಜನರು ಸಕ್ರಿಯರಾಗಿದ್ದಾರೆ. 2.32 ಲಕ್ಷಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಲಾಗಿದೆ. ಒಟ್ಟಾರೆಯಾಗಿ ಈವರೆಗೆ 14.8 ಗಿ.ವ್ಯಾ ಮೇಲ್ಛಾವಣಿ ಸೌರ ಸಾಮರ್ಥ್ಯವನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದ್ದಾರೆ ಸಚಿವರು.

ʼಸೂರ್ಯಘರ್‌ʼ ಯೋಜನೆ ಪ್ರಕ್ರಿಯೆ ಅರ್ಜಿ ಸಲ್ಲಿಕೆಯಿಂದ ಸಬ್ಸಿಡಿ ಬಿಡುಗಡೆವರೆಗೂ ಸಂಪೂರ್ಣ ಆನ್‌ಲೈನ್ ಡಿಜಿಟಲ್‌ ವ್ಯವಸ್ಥೆಯಿರುತ್ತದೆ. ಗ್ರಾಹಕರು ಕಚೇರಿಗೆ ಅಲೆದಾಡಬೇಕಿಲ್ಲ. ʼಜನ್ ಸಮರ್ಥ್ʼ ಏಕೀಕರಣ ಮೂಲಕ 15 ದಿನಗಳಲ್ಲಿ ಸಬ್ಸಿಡಿ ಹಣ ಬಿಡುಗಡೆಯಾಗುತ್ತದೆ. ಪಿಎಫ ಎಂಎಸ್ ಏಕೀಕರಣ, ತಡೆರಹಿತ ಪ್ರಕ್ರಿಯೆಗಾಗಿ 80ಕ್ಕೂ ಹೆಚ್ಚು ಡಿಸ್ಕಾಮ್‌ ಗಳೊಂದಿಗೆ ಎಪಿಐ ಏಕೀಕರಣ, ರಾಷ್ಟ್ರೀಯ ಪೋರ್ಟಲ್ ಮೂಲಕ ಡಿಜಿಟಲ್ ನೆಟ್ ಮೀಟರಿಂಗ್ ಒಪ್ಪಂದ ಮೂಲಕ ಸಕ್ರಿಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮೇಲ್ಛಾವಣಿ ಸೌರಶಕ್ತಿಗೆ ಅರ್ಜಿ ಮತ್ತು ನಿವ್ವಳ ಮೀಟರಿಂಗ್ ಶುಲ್ಕ ತೆಗೆದು ಹಾಕಿವೆ. ಡಿಸ್ಕಾಮ್‌ಗಳಿಗೆ ಪ್ರೋತ್ಸಾಹಧನವಾಗಿ ₹3,807.6 ಕೋಟಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸುಮಾರು ₹104 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.

41,542 ಸರ್ಕಾರಿ ಕಟ್ಟಡಗಳ ಗುರಿ:

ಕೇಂದ್ರ ಸಚಿವಾಲಯಗಳು 1,418 ಮೆಗಾವ್ಯಾಟ್ ಸಾಮರ್ಥ್ಯವಿರುವ ಸುಮಾರು 41,542 ಸರ್ಕಾರಿ ಕಟ್ಟಡಗಳನ್ನು ಗುರುತಿಸಿದ್ದು, ಈ ಪೈಕಿ ಈಗಾಗಲೇ 872 ಮೆಗಾವ್ಯಾಟ್ ಸಾಮರ್ಥ್ಯವಿರುವ 25,255 ಕಟ್ಟಡಗಳನ್ನು ಸೌರೀಕರಣಗೊಳಿಸಲಾಗಿದೆ ಎಂದಿದ್ದಾರೆ.

ರಾಜ್ಯಗಳು 4,400 ಮೆಗಾವ್ಯಾಟ್ ಸಾಮರ್ಥ್ಯವಿರುವ ಸುಮಾರು 3.20 ಲಕ್ಷ ಸರ್ಕಾರಿ ಕಟ್ಟಡಗಳನ್ನು ಗುರುತಿಸಿದ್ದು, 1,450 ಮೆಗಾವ್ಯಾಟ್ ಸಾಮರ್ಥ್ಯದ 81,329 ಕಟ್ಟಡಗಳನ್ನು ಸೌರೀಕರಣಗೊಳಿಸಲಾಗಿದೆ. ಒಟ್ಟಾರೆ ಈವರೆಗೆ 1.06 ಲಕ್ಷ ಸರ್ಕಾರಿ ಕಟ್ಟಡಗಳನ್ನು ಸೌರೀಕರಣಗೊಳಿಸಲಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande