
ಗ್ಲಾಸ್ಗೋ, 03 ಆಗಸ್ಟ್ (ಹಿ.ಸ.):
ಆ್ಯಂಕರ್:ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ 11 ದಿನಗಳ ಕಾಲ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟ 2026 ಭವ್ಯ ಸಮಾರೋಪ ಸಮಾರಂಭದೊಂದಿಗೆ ಸೋಮವಾರ ಮುಕ್ತಾಯಗೊಂಡಿತು. ಇದೇ ವೇಳೆ 2030ರ ಕಾಮನ್‌ವೆಲ್ತ್ ಕ್ರೀಡಾಕೂಟದ ಆತಿಥ್ಯದ ಹೊಣೆಗಾರಿಕೆಯನ್ನು ಭಾರತ ಅಧಿಕೃತವಾಗಿ ಸ್ವೀಕರಿಸಿತು.
ಸಮಾರೋಪ ಸಮಾರಂಭದಲ್ಲಿ ಕಾಮನ್‌ವೆಲ್ತ್ ಧ್ವಜವನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು. ಇದರೊಂದಿಗೆ ಅಹಮದಾಬಾದ್‌ನಲ್ಲಿ 2030ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ದೊರೆಯಿತು.
ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಹಾಗೂ ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ ಪಿ.ಟಿ. ಉಷಾ ಅವರ ಸಮ್ಮುಖದಲ್ಲಿ ಧ್ವಜ ಹಸ್ತಾಂತರ ನಡೆಯಿತು. ಬಳಿಕ ಗಾಯಕ ಶಂಕರ್ ಮಹಾದೇವನ್ ಮತ್ತು ಮಾಜಿ ವಿಶ್ವಸುಂದರಿ ಮಾನುಷಿ ಛಿಲ್ಲರ್ ನೇತೃತ್ವದಲ್ಲಿ ಭಾರತದ ಸಂಸ್ಕೃತಿ, ಪರಂಪರೆ ಮತ್ತು ವಸುದೈವ ಕುಟುಂಬಕಂ ಪರಿಕಲ್ಪನೆಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಗ್ಲಾಸ್ಗೋ ಕ್ರೀಡಾಕೂಟದಲ್ಲಿ ಭಾರತ 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚು ಸೇರಿ ಒಟ್ಟು 39 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ಬಾಕ್ಸಿಂಗ್, ಅಥ್ಲೆಟಿಕ್ಸ್, ಭಾರ ಎತ್ತುವಿಕೆ, ಜೂಡೋ, ಶೂಟಿಂಗ್ ಹಾಗೂ ಪ್ಯಾರಾ ಸ್ಪರ್ಧೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.