
ನವದೆಹಲಿ, 03 ಆಗಸ್ಟ್ (ಹಿ.ಸ.):
ಆ್ಯಂಕರ್:ಸಂಸತ್ತಿನ ಮಳೆಗಾಲ ಅಧಿವೇಶನದ 11ನೇ ದಿನವಾದ ಸೋಮವಾರ, ರಾಮಮಂದಿರ ದೇಣಿಗೆ ವಿವಾದ ಹಾಗೂ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವಾಗಿ ಪ್ರತಿಪಕ್ಷ ಸದಸ್ಯರ ಭಾರೀ ಗದ್ದಲದ ನಡುವೆಯೇ ಲೋಕಸಭೆಯಲ್ಲಿ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆ ಮಸೂದೆ–2026 ಮತ್ತು ಬ್ಯಾಂಕರ್ಸ್ ಬುಕ್ಸ್ ಎವಿಡೆನ್ಸ್ ಮಸೂದೆ–2026ಗಳನ್ನು ಮಂಡಿಸಲಾಯಿತು. ನಿರಂತರ ಘೋಷಣೆಗಳು ಮತ್ತು ಪ್ರತಿಭಟನೆಯಿಂದ ಸದನದ ಕಾರ್ಯಚಟುವಟಿಕೆ ನಡೆಸಲು ಸಾಧ್ಯವಾಗದೆ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು.
ಪ್ರಶ್ನೋತ್ತರ ಅವಧಿಯಲ್ಲಿ ವಿವಿಧ ಸಚಿವಾಲಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಚಿವರು ಲಿಖಿತ ಉತ್ತರಗಳನ್ನು ಸದನದ ಪೀಠದ ಮೇಲೆ ಮಂಡಿಸಿದರು. ಬಳಿಕ ಕಾರ್ಪೊರೇಟ್ ಕಾನೂನು (ತಿದ್ದುಪಡಿ) ಮಸೂದೆ–2026 ಕುರಿತ ಜಂಟಿ ಸಂಸದೀಯ ಸಮಿತಿಯ ವರದಿಯನ್ನು ಮಂಡಿಸಲಾಯಿತು.
ನಂತರ ಕೇಂದ್ರ ಸಂಖ್ಯಾಶಾಸ್ತ್ರ ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆಯ ರಾಜ್ಯ ಸಚಿವ ರಾವ್ ಇಂದ್ರಜಿತ್ ಸಿಂಗ್ ಅವರು ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆ ಮಸೂದೆ–2026ನ್ನು ಮಂಡಿಸಿದರು. ಇದಾದ ಬಳಿಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕರ್ಸ್ ಬುಕ್ಸ್ ಎವಿಡೆನ್ಸ್ ಮಸೂದೆ–2026ನ್ನು ಮಂಡಿಸಿ, ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಗೆ ಅನುಗುಣವಾಗಿ ಬ್ಯಾಂಕಿಂಗ್ ದಾಖಲೆಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಆಧುನೀಕರಿಸುವ ಉದ್ದೇಶದಿಂದ ಈ ಮಸೂದೆ ತರಲಾಗಿದೆ ಎಂದು ತಿಳಿಸಿದರು.
ಈ ನಡುವೆ ಪ್ರತಿಪಕ್ಷ ಸದಸ್ಯರು ರಾಮಮಂದಿರ ದೇಣಿಗೆ ವಿವಾದ ಮತ್ತು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವಾಗಿ ನಿರಂತರ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು. ಸದನದಲ್ಲಿ ಶಾಂತಿ ಕಾಪಾಡುವಂತೆ ಸಭಾಧ್ಯಕ್ಷರು ಪದೇಪದೇ ಮನವಿ ಮಾಡಿದರೂ ಗದ್ದಲ ಮುಂದುವರಿದ ಕಾರಣ ಲೋಕಸಭೆಯ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.