
ಬೆಂಗಳೂರು, 03 ಆಗಸ್ಟ್ (ಹಿ.ಸ.):
ಆ್ಯಂಕರ್:
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಶತಮಾನೋತ್ಸವ ವರ್ಷದ ಅಂಗವಾಗಿ ಆರ್‌ಎಸ್‌ಎಸ್@100 : ಸಾಮಾಜಿಕ ಜಾಗೃತಿಯ ಮೂಲಕ ಸಮಾಜ ಪರಿವರ್ತನೆ ಕೃತಿಯನ್ನು ಸೋಮವಾರ ಬೆಂಗಳೂರಿನ ಕೇಶವಕೃಪಾದಲ್ಲಿ ಬಿಡುಗಡೆ ಮಾಡಲಾಯಿತು.
2025ರ ನವೆಂಬರ್ 8 ಮತ್ತು 9ರಂದು ಬೆಂಗಳೂರಿನ ಪಿ.ಇ.ಎಸ್. ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆದ ವ್ಯಾಖ್ಯಾನಮಾಲೆ ಹಾಗೂ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಸಂಘದ ಶತಮಾನದ ಪಯಣ, ರಾಷ್ಟ್ರ ನಿರ್ಮಾಣದಲ್ಲಿ ಸಂಘದ ಪಾತ್ರ, ಸಾಮಾಜಿಕ ಪರಿವರ್ತನೆ, ಸೇವಾ ಚಟುವಟಿಕೆಗಳು, ರಾಷ್ಟ್ರೀಯ ಏಕತೆ, ಕುಟುಂಬ ವ್ಯವಸ್ಥೆ, ಯುವಜನರ ಪಾತ್ರ, ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ ಹಾಗೂ ಭವಿಷ್ಯದ ಭಾರತ ನಿರ್ಮಾಣದ ಕುರಿತು ವ್ಯಕ್ತಪಡಿಸಿದ ವಿಚಾರಗಳ ವಿಸ್ತೃತ ಸಾರಾಂಶವನ್ನು ಈ ಕೃತಿಯಲ್ಲಿ ಸಂಗ್ರಹಿಸಲಾಗಿದೆ.
ಕೇಶವಕೃಪಾದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್, ಕ್ಷೇತ್ರೀಯ ಸಂಘಚಾಲಕ ಡಾ. ಪಿ. ವಾಮನ್ ಶೆಣೈ ಹಾಗೂ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಅವರು ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಶತಮಾನೋತ್ಸವ ವರ್ಷವು ಸಂಘದ ವಿಚಾರಧಾರೆ, ಸೇವಾ ಕಾರ್ಯಗಳು ಹಾಗೂ ಸಾಮಾಜಿಕ ಜಾಗೃತಿಯ ಸಂದೇಶವನ್ನು ಸಮಾಜದ ಎಲ್ಲ ವರ್ಗಗಳಿಗೆ ತಲುಪಿಸುವ ಮಹತ್ವದ ಘಟ್ಟವಾಗಿದ್ದು, ಈ ಕೃತಿ ಆ ನಿಟ್ಟಿನಲ್ಲಿ ಉಪಯುಕ್ತ ದಾಖಲೆ ಆಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.