
ಬೆಂಗಳೂರು, 28 ಆಗಸ್ಟ್ (ಹಿ.ಸ.):
ಆ್ಯಂಕರ್:
ಕರ್ನಾಟಕ ಲೋಕಸೇವಾ ಆಯೋಗದ ಮೂಲಕ 2022ರಲ್ಲಿ ನಡೆದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಗ್ರೇಡ್–1) ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಹಗರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ನೇರವಾಗಿ ಶಾಮೀಲಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಅವರು, ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಅಕ್ರಮಕ್ಕೆ ಸಂಬಂಧಿಸಿದ ವಿಧಿವಿಜ್ಞಾನ ತನಿಖಾ ವರದಿ ಹಾಗೂ ಕಾರ್ಬನ್ ಬಳಸಿ ತಿದ್ದಲಾಗಿದೆ ಎನ್ನಲಾದ ಓಎಂಆರ್ ಉತ್ತರ ಪತ್ರಿಕೆಗಳ ದಾಖಲೆಗಳನ್ನು ಬಿಡುಗಡೆ ಮಾಡಿದರು. 24 ಅಭ್ಯರ್ಥಿಗಳ ಆಯ್ಕೆಯಲ್ಲಿ ಅಕ್ರಮ ನಡೆದಿರುವುದು ವಿಧಿವಿಜ್ಞಾನ ತನಿಖೆಯಿಂದ ದೃಢಪಟ್ಟಿದ್ದರೂ, ತರಾತುರಿಯಲ್ಲಿ ನೇಮಕಾತಿ ಪತ್ರಗಳನ್ನು ನೀಡಲಾಗಿದೆ ಎಂದು ದೂರಿದರು.
ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಓಎಂಆರ್ ಪತ್ರಿಕೆಗಳನ್ನು ತಿದ್ದಲಾಗಿದೆ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ನಾಶಪಡಿಸಲಾಗಿದೆ ಎಂದು ಆರೋಪಿಸಿದರು. ಹಗರಣದ ಆರೋಪ ಎದುರಿಸುತ್ತಿರುವ ಅಂದಿನ ಪರೀಕ್ಷಾ ನಿಯಂತ್ರಕ, ಐಪಿಎಸ್ ಅಧಿಕಾರಿ ಗ್ಯಾನೇಂದ್ರ ಗಂಗ್ವಾರ್ ಅವರನ್ನು ಗೃಹ ಸಚಿವರು ರಕ್ಷಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಹೈಕೋರ್ಟ್ ನಿರ್ದೇಶನದಂತೆ ಪ್ರಕರಣವನ್ನು ಸಂಪೂರ್ಣವಾಗಿ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು. ನೇಮಕಾತಿ ಅಕ್ರಮ ಮತ್ತು ಭ್ರಷ್ಟಾಚಾರದ ವಿರುದ್ಧ ನಿರುದ್ಯೋಗಿಗಳು ಹಾಗೂ ಯುವಜನರು ಮೌನವಾಗದೆ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ, ಮಾಜಿ ಶಾಸಕರಾದ ಕೆ.ಎ. ತಿಪ್ಪೇಸ್ವಾಮಿ, ಚೌಡರೆಡ್ಡಿ ತೂಪಲ್ಲಿ ಹಾಗೂ ದೊಡ್ಡನಗೌಡ ಪಾಟೀಲ್ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R