ಜಾತಿ–ಮತಕ್ಕಿಂತ ಮಾನವೀಯತೆ, ಕಾಯಕವೇ ಮುಖ್ಯ: ಬಿ.ವೈ.ರಾಘವೇಂದ್ರ
ಶಿವಮೊಗ್ಗ, 28 ಆಗಸ್ಟ್ (ಹಿ.ಸ.): ಆ್ಯಂಕರ್: ಮಾನವನಿಗೆ ಒಂದೇ ಜಾತಿ, ಒಂದೇ ಮತ ಎಂಬ ಸಮಾನತೆಯ ಸಂದೇಶ ಸಾರಿದ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಕಾಯಕದ ಮೂಲಕ ಸ್ವಾಭಿಮಾನದ ಬದುಕಿನ ಮಹತ್ವವನ್ನು ಜಗತ್ತಿಗೆ ತಿಳಿಸಿದ ಶರಣ ಶ್ರೀ ನುಲಿಯ ಚಂದಯ್ಯ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸ
ಜಯಂತಿ


ಶಿವಮೊಗ್ಗ, 28 ಆಗಸ್ಟ್ (ಹಿ.ಸ.):

ಆ್ಯಂಕರ್:

ಮಾನವನಿಗೆ ಒಂದೇ ಜಾತಿ, ಒಂದೇ ಮತ ಎಂಬ ಸಮಾನತೆಯ ಸಂದೇಶ ಸಾರಿದ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಕಾಯಕದ ಮೂಲಕ ಸ್ವಾಭಿಮಾನದ ಬದುಕಿನ ಮಹತ್ವವನ್ನು ಜಗತ್ತಿಗೆ ತಿಳಿಸಿದ ಶರಣ ಶ್ರೀ ನುಲಿಯ ಚಂದಯ್ಯ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಶರಣ ಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ ಪದ್ಧತಿ, ಅಸ್ಪೃಶ್ಯತೆ ಹಾಗೂ ಸಾಮಾಜಿಕ ತಾರತಮ್ಯದ ವಿರುದ್ಧ ಹೋರಾಡಿದ ನಾರಾಯಣ ಗುರುಗಳು ಕೆಳವರ್ಗದವರಿಗೂ ಶಿಕ್ಷಣ ಹಾಗೂ ಮೂಲಭೂತ ಹಕ್ಕುಗಳು ದೊರೆಯಬೇಕು ಎಂದು ಪ್ರತಿಪಾದಿಸಿದರು. ಮನುಷ್ಯ ಮನುಷ್ಯತ್ವದಿಂದ ಬದುಕಬೇಕು ಎಂಬ ಸಂದೇಶದ ಮೂಲಕ ಸಮಾಜದಲ್ಲಿ ಸಾಮರಸ್ಯ ಮತ್ತು ಸೌಹಾರ್ದ ಬೆಳೆಸಲು ಶ್ರಮಿಸಿದ ಮಹಾನ್ ದಾರ್ಶನಿಕರು ಎಂದು ಸ್ಮರಿಸಿದರು.

ನುಲಿಯ ಚಂದಯ್ಯ ಅವರು ಹುಲ್ಲಿನಿಂದ ಹಗ್ಗ ಹೊಸೆಯುವ ಕಾಯಕದ ಮೂಲಕ ದುಡಿಮೆಯ ಮಹತ್ವ ಸಾರಿದರು. ಅವರ ವಚನಗಳು ಇಂದಿಗೂ ಜೀವನಕ್ಕೆ ದಾರಿದೀಪವಾಗಿವೆ. ಆಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಯುಗದಲ್ಲಿಯೂ ತಂದೆ-ತಾಯಿ ಪ್ರೀತಿ, ಗುರುಹಿರಿಯರ ಮಾರ್ಗದರ್ಶನ ಹಾಗೂ ನಮ್ಮ ದಾರ್ಶನಿಕರ ಮೌಲ್ಯಗಳನ್ನು ಮರೆಯಬಾರದು. ಆಧುನಿಕತೆ ಹಾಗೂ ಪರಂಪರೆಯನ್ನು ಸಮನ್ವಯಗೊಳಿಸಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು.

ಕಾಯಕವೇ ಕೈಲಾಸ ಎಂಬ ಸಂದೇಶ

ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಜಾತಿ, ಅಸ್ಪೃಶ್ಯತೆ ಮತ್ತು ತಾರತಮ್ಯದ ವಿರುದ್ಧ ಹೋರಾಡಿದ ನಾರಾಯಣ ಗುರುಗಳು ದೇಶ ಸೇವೆಯೇ ಈಶ ಸೇವೆ ಎಂಬ ಸಂದೇಶ ಸಾರಿದರು. ನುಲಿಯ ಚಂದಯ್ಯ ಅವರು ನೂಲನ್ನು ಒಗ್ಗೂಡಿಸಿ ಹಗ್ಗ ಮಾಡುವ ಕಾಯಕದ ಮೂಲಕ ಸಾಮೂಹಿಕ ಶಕ್ತಿಯ ಮಹತ್ವವನ್ನು ತಿಳಿಸಿದರು. ಕಾಯಕವೇ ಕೈಲಾಸ ಎಂಬ ನಂಬಿಕೆಯಿಂದ ಬದುಕಿದ ಅವರು ಬಸವಣ್ಣನವರೊಂದಿಗೆ ಕೆಲಸ ಮಾಡಿದ ಮಹಾನ್ ಶರಣರು ಎಂದು ಹೇಳಿದರು.

ಶಿಕ್ಷಣದ ಮೂಲಕ ಸಮಾನತೆಗೆ ನಾರಾಯಣ ಗುರುಗಳ ಒತ್ತು

ನಿವೃತ್ತ ಪ್ರಾಧ್ಯಾಪಕ ಪ್ರೊ. ಹೆಚ್. ಕಲ್ಲನ ಅವರು ನಾರಾಯಣ ಗುರು ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಾತಿ–ಮತದ ಕಠಿಣ ವ್ಯವಸ್ಥೆಯಿಂದ ನಲುಗಿದ್ದ ಸಮಾಜದಲ್ಲಿ ಮಾನವರೆಲ್ಲರೂ ಒಂದೇ ಎಂಬ ಸಂದೇಶ ಸಾರಿದ ನಾರಾಯಣ ಗುರುಗಳು ಸಂಘಟನೆ, ಶಿಕ್ಷಣ ಹಾಗೂ ವೈಚಾರಿಕತೆಯ ಮಹತ್ವವನ್ನು ತಿಳಿಸಿದರು ಎಂದರು.

ಆ ಕಾಲದಲ್ಲಿ ಕೆಳವರ್ಗದವರಿಗೆ ದೇವಸ್ಥಾನ ಪ್ರವೇಶ, ಶಿಕ್ಷಣ ಹಾಗೂ ಮೂಲಭೂತ ಹಕ್ಕುಗಳನ್ನು ನಿರಾಕರಿಸಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ನಾರಾಯಣ ಗುರುಗಳು ಮೌನ ಕ್ರಾಂತಿಯ ಮೂಲಕ ಸಮಾಜದಲ್ಲಿ ಬದಲಾವಣೆ ತಂದರು. ದಲಿತರು, ಶೋಷಿತರು ಹಾಗೂ ಅಸ್ಪೃಶ್ಯರು ಸೇರಿದಂತೆ ಎಲ್ಲರಿಗೂ ಶಿಕ್ಷಣದ ಮೂಲಕ ಸಮಾನತೆ ದೊರೆಯಬೇಕು ಎಂದು ಹೋರಾಡಿದರು. ಯಾವುದೇ ವ್ಯಕ್ತಿ ಹುಟ್ಟಿನಿಂದ ಶ್ರೇಷ್ಠನಾಗುವುದಿಲ್ಲ; ಗುಣ ಮತ್ತು ಕರ್ಮಗಳಿಂದ ಶ್ರೇಷ್ಠನಾಗುತ್ತಾನೆ ಎಂಬ ತತ್ವವನ್ನು ಸಾರಿದರು ಎಂದು ತಿಳಿಸಿದರು.

“ಶಿಕ್ಷಣದಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಶಾಲಿಗಳಾಗಿ” ಎಂಬ ಸಂದೇಶ ನೀಡಿದ ಅವರು ಶಾಲಾ–ಕಾಲೇಜುಗಳನ್ನು ಸ್ಥಾಪಿಸಿ ಎಲ್ಲರಿಗೂ ಶಿಕ್ಷಣ ದೊರೆಯುವಂತೆ ಶ್ರಮಿಸಿದರು. ಇಂದಿಗೂ ಅವರ ತತ್ವಗಳು ಶಾಂತಿ, ಸಹೋದರತ್ವ, ಸಮಾನತೆ ಮತ್ತು ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಪ್ರಸ್ತುತವಾಗಿವೆ ಎಂದರು.

ಕಾಯಕ ಮತ್ತು ದಾಸೋಹದ ಮಹತ್ವ ಸಾರಿದ ಚಂದಯ್ಯ

ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ ಅವರು ನುಲಿಯ ಚಂದಯ್ಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

12ನೇ ಶತಮಾನ ಜ್ಞಾನದ ದೀಪ್ತಿ ಬೆಳಗಿದ ಯುಗವಾಗಿದ್ದು, ಚಂದಯ್ಯ ಅವರು ನೂಲುವ ಕಾಯಕದೊಂದಿಗೆ ಅರಿವಿನ ಹಗ್ಗವನ್ನೂ ಹೊಸೆದವರು. ಹುಲ್ಲಿನಿಂದ ಹಗ್ಗ ತಯಾರಿಸಿ ಗಳಿಸಿದ ಹಣದಲ್ಲಿ ದಾಸೋಹ ಮಾಡುತ್ತಿದ್ದರು. ಮನುಕುಲದ ಉನ್ನತಿಗಾಗಿ ಹಲವಾರು ವಚನಗಳನ್ನು ರಚಿಸಿದ್ದು, ಅವರ 48 ವಚನಗಳು ಲಭ್ಯವಿವೆ ಎಂದು ತಿಳಿಸಿದರು.

ಇಷ್ಟಲಿಂಗ ಕಳೆದುಹೋದ ಪ್ರಸಂಗವನ್ನು ವಿವರಿಸಿದ ಅವರು, ಕಾಯಕದಲ್ಲಿ ತೊಡಗಿದ್ದಾಗ ಇಷ್ಟಲಿಂಗ ಕೆಳಗೆ ಬಿದ್ದರೂ ಚಂದಯ್ಯ ಅವರು ಕಾಯಕವನ್ನು ನಿಲ್ಲಿಸಿ ಅದನ್ನು ಹುಡುಕಲಿಲ್ಲ. ಕಾಯಕಕ್ಕೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ತಮ್ಮ ದುಡಿಮೆಯನ್ನು ಮುಂದುವರಿಸಿದರು. ಕಾಯಕ ನಿಷ್ಠೆಗೆ ಮೆಚ್ಚಿದ ಇಷ್ಟಲಿಂಗವೇ ಅವರ ಹಿಂದೆ ಬಂದು ತನ್ನನ್ನು ಸ್ವೀಕರಿಸುವಂತೆ ಬೇಡಿಕೊಂಡಿತು ಎಂಬ ಪ್ರಸಂಗದ ಮೂಲಕ ಚಂದಯ್ಯ ಅವರು ಕಾಯಕದ ಶ್ರೇಷ್ಠತೆಯನ್ನು ಸಾರಿದರು ಎಂದು ಹೇಳಿದರು.

ಕಾಯಕವಿಲ್ಲದೆ ಉಣ್ಣುವುದು ಸರಿಯಲ್ಲ ಎಂಬ ಸಂದೇಶ ನೀಡಿದ ಚಂದಯ್ಯ ಅವರು ಕಾಯಕ ಮತ್ತು ದಾಸೋಹದ ಮಹತ್ವವನ್ನು ಪ್ರತಿಪಾದಿಸಿದರು. ಇಂದಿನ ಯುವಜನತೆ ಇಂತಹ ಮಹಾತ್ಮರ ಜೀವನ ಹಾಗೂ ಚಿಂತನೆಗಳನ್ನು ಅರಿತುಕೊಳ್ಳಬೇಕು. ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಅತ್ಯಂತ ಮುಖ್ಯವಾಗಿದ್ದು, ಎಲ್ಲರೂ ಸುಶಿಕ್ಷಿತರಾಗುವ ಮೂಲಕ ಮಹನೀಯರ ತತ್ವಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ. ಮಾತನಾಡಿ, ಸಮಾನತೆಯ ತತ್ವವನ್ನು ಸಾರಿದ ನಾರಾಯಣ ಗುರು ಹಾಗೂ ಕಾಯಕದ ಮಹತ್ವವನ್ನು ತಿಳಿಸಿದ ನುಲಿಯ ಚಂದಯ್ಯ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್. ಉಮೇಶ್, ವಿವಿಧ ಸಮಾಜಗಳ ಮುಖಂಡರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande