
ಶಿವಮೊಗ್ಗ, 28 ಆಗಸ್ಟ್ (ಹಿ.ಸ.):
ಆ್ಯಂಕರ್:
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಕಸಿತ ಭಾರತ ನಿರ್ಮಾಣದ ಕನಸನ್ನು ಸಾಕಾರಗೊಳಿಸುವಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತಿದ್ದು, ರೈತರ ಆದಾಯ ಹೆಚ್ಚಳ, ಯುವಕರಿಗೆ ಉದ್ಯೋಗಾವಕಾಶ ಹಾಗೂ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಬ್ಯಾಂಕುಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಆಯೋಜಿಸಿದ್ದ ಜಿಲ್ಲಾ ಮಾಸಿಕ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಪ್ರತಿಯೊಬ್ಬರಿಗೂ ಆರ್ಥಿಕ ಭದ್ರತೆ ದೊರೆಯುವಂತೆ ಭವಿಷ್ಯದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸಬೇಕು. ರೈತರ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದರ ಜತೆಗೆ ಯುವಕರಿಗೆ ಸ್ವಯಂ ಉದ್ಯೋಗ ಹಾಗೂ ಹೊಸ ಉದ್ಯಮಗಳನ್ನು ಆರಂಭಿಸಲು ಅಗತ್ಯ ಸಾಲ ಸೌಲಭ್ಯಗಳನ್ನು ಒದಗಿಸಬೇಕು. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಬ್ಯಾಂಕುಗಳು ಸಹಕಾರ ನೀಡಬೇಕು ಎಂದು ತಿಳಿಸಿದರು.
ಬ್ಯಾಂಕುಗಳು ನಿಗದಿತ ಗುರಿ ಸಾಧಿಸಲಿ
ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳ ನಡುವೆ ಆರೋಗ್ಯಕರ ಸ್ಪರ್ಧೆ ನಡೆಯುವ ಮೂಲಕ ಜನಸಾಮಾನ್ಯರಿಗೆ ಹೆಚ್ಚಿನ ಆರ್ಥಿಕ ಸೌಲಭ್ಯಗಳು ದೊರೆಯಬೇಕು. ರಾಷ್ಟ್ರೀಕೃತ ಬ್ಯಾಂಕುಗಳಿಗೆ ನಿಗದಿಪಡಿಸಿರುವ ಗುರಿ ಕಡಿಮೆಯಿದ್ದರೂ, ಜನರಿಗೆ ಆರ್ಥಿಕ ಸೌಲಭ್ಯ ಕಲ್ಪಿಸುವಲ್ಲಿ ನಿಗದಿತ ಗುರಿಯನ್ನೂ ತಲುಪದಿರುವುದು ಸಮಾಧಾನದ ಸಂಗತಿಯಲ್ಲ. ಮುಂದಿನ ಸಭೆಯ ವೇಳೆಗೆ ನಿರೀಕ್ಷಿತ ಪ್ರಗತಿ ಸಾಧಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಶೈಕ್ಷಣಿಕ ಸಾಲ ನೀಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಿಬಿಲ್ ಅಂಕಕ್ಕೆ ಸಂಬಂಧಿಸಿದಂತೆ ಅಗತ್ಯ ಸಡಿಲಿಕೆ ನೀಡಬೇಕು. ಬ್ಯಾಂಕಿಂಗ್ ಸೇವೆಗಳು ಇನ್ನಷ್ಟು ಜನಸಾಮಾನ್ಯರಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಯೋಜನೆಗಳ ಪ್ರಯೋಜನಗಳು ಸರಳ ಹಾಗೂ ಸುಲಭವಾಗಿ ಅರ್ಹ ಫಲಾನುಭವಿಗಳಿಗೆ ದೊರೆಯುವಂತೆ ಬ್ಯಾಂಕುಗಳು ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ವಸತಿ ಯೋಜನೆ ತ್ವರಿತ ಪೂರ್ಣಗೊಳಿಸಲು ಸೂಚನೆ
ಗೃಹ ಸಾಲ ವಿತರಣೆಯಲ್ಲಿಯೂ ನಿರೀಕ್ಷಿತ ಪ್ರಗತಿ ಕಂಡುಬಂದಿಲ್ಲ ಎಂದು ಬಿ.ವೈ.ರಾಘವೇಂದ್ರ ಹೇಳಿದರು.
ಗೋವಿಂದಾಪುರದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ವಸತಿ ಸಂಕೀರ್ಣದಲ್ಲಿ 1,200 ಮನೆಗಳು ನಿರ್ಮಾಣಗೊಂಡಿದ್ದು, ಈ ಪೈಕಿ 400 ಮನೆಗಳನ್ನು ಮಾತ್ರ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ. ಉಳಿದ ಮನೆಗಳ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದೆ. ಯೋಜನೆ ಆರಂಭವಾಗಿ 6ರಿಂದ 8 ವರ್ಷಗಳಾದರೂ ಎಲ್ಲ ಮನೆಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ವಿತರಿಸಲು ಸಾಧ್ಯವಾಗಿಲ್ಲ. ನಿರ್ಮಾಣ ಹಾಗೂ ಹಸ್ತಾಂತರಕ್ಕೆ ಇರುವ ಸಮಸ್ಯೆಗಳನ್ನು ಸಂಬಂಧಿಸಿದ ಇಲಾಖೆಗಳು ತ್ವರಿತವಾಗಿ ಬಗೆಹರಿಸಿ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜನ್‌ಧನ್ ಯೋಜನೆಯಿಂದ ಬ್ಯಾಂಕಿಂಗ್ ವಿಸ್ತರಣೆ
ಪ್ರಧಾನಮಂತ್ರಿ ಜನ್‌ಧನ್ ಯೋಜನೆಯಿಂದ ಬ್ಯಾಂಕಿಂಗ್ ವ್ಯವಸ್ಥೆ ದೇಶದ ಕಟ್ಟಕಡೆಯ ವ್ಯಕ್ತಿಗೂ ತಲುಪಿದೆ. ಈ ಯೋಜನೆಯಡಿ ಶೂನ್ಯ ಶಿಲ್ಕಿನಲ್ಲಿ ಖಾತೆ ತೆರೆಯಲು ಅವಕಾಶ ಕಲ್ಪಿಸಿರುವುದು ಮಹತ್ವದ ಹೆಜ್ಜೆಯಾಗಿದೆ. ಯೋಜನೆ ಆರಂಭವಾಗಿ 12 ವರ್ಷಗಳು ಪೂರ್ಣಗೊಂಡಿದ್ದು, ದೇಶದಲ್ಲಿ ಸುಮಾರು 59 ಕೋಟಿ ಖಾತೆಗಳನ್ನು ತೆರೆಯಲಾಗಿದೆ. ಈ ಖಾತೆಗಳ ಮೂಲಕ ₹3.17 ಲಕ್ಷ ಕೋಟಿ ಆರ್ಥಿಕ ವ್ಯವಹಾರ ನಡೆದಿರುವುದು ಗಮನಾರ್ಹ ಎಂದು ಅವರು ಹೇಳಿದರು.
ಜನ್‌ಧನ್ ಖಾತೆದಾರರಿಗೆ ಉಚಿತ ರುಪೇ ಕಾರ್ಡ್, ₹2 ಲಕ್ಷದವರೆಗೆ ಅಪಘಾತ ವಿಮಾ ರಕ್ಷಣೆ ಹಾಗೂ ₹10 ಸಾವಿರದವರೆಗೆ ಓವರ್‌ಡ್ರಾಫ್ಟ್ ಸೌಲಭ್ಯ ದೊರೆಯುತ್ತದೆ. ಸರ್ಕಾರದ ವಿವಿಧ ಸಬ್ಸಿಡಿ ಮತ್ತು ಕಲ್ಯಾಣ ಯೋಜನೆಗಳ ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ ಎಂದು ವಿವರಿಸಿದರು.
ಯೋಜನೆಯಡಿ ಖಾತೆ ತೆರೆದವರಲ್ಲಿ ಶೇ.78ರಷ್ಟು ಮಂದಿ ಗ್ರಾಮೀಣ ಪ್ರದೇಶದವರಾಗಿದ್ದು, ಶೇ.56ರಷ್ಟು ಖಾತೆದಾರರು ಮಹಿಳೆಯರಾಗಿದ್ದಾರೆ. ಆ.19ರ ವೇಳೆಗೆ ಪ್ರತಿ ಖಾತೆಯ ಸರಾಸರಿ ಠೇವಣಿ ₹5,256ಕ್ಕೆ ಏರಿಕೆಯಾಗಿದೆ. ಆರಂಭಿಕ ಅವಧಿಗೆ ಹೋಲಿಸಿದರೆ ಠೇವಣಿ ಪ್ರಮಾಣ 3ರಿಂದ 4 ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದರು.
ಜನ್‌ಧನ್–ಆಧಾರ್–ಮೊಬೈಲ್ ವ್ಯವಸ್ಥೆಯ ಮೂಲಕ ಸರ್ಕಾರದ ಕಲ್ಯಾಣ ನೆರವು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗುತ್ತಿದೆ. ಪಾರದರ್ಶಕ ವ್ಯವಸ್ಥೆಯಿಂದಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬ್ಯಾಂಕಿಂಗ್ ಹಾಗೂ ಆರ್ಥಿಕ ವ್ಯವಹಾರದ ಅವಕಾಶ ದೊರೆತಿದೆ. ಜನ್‌ಧನ್ ಯೋಜನೆಯ ಯಶಸ್ಸಿಗೆ ಶ್ರಮಿಸಿದ ಎಲ್ಲ ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಭಿನಂದನಾರ್ಹರು ಎಂದು ಬಿ.ವೈ.ರಾಘವೇಂದ್ರ ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್. ಹೇಮಂತ್, ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಸಂಜೀವ್ ಕುಮಾರ್, ಆರ್‌ಬಿಐ ಪ್ರಧಾನ ವ್ಯವಸ್ಥಾಪಕ ಬಾಲುಲ್ ಬಾರ್ಡೋಲಿ, ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಶರತ್ ಗೌಡ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಹನುಮಂತಪ್ಪ ಸೇರಿದಂತೆ ವಿವಿಧ ಬ್ಯಾಂಕುಗಳ ಅಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.