ನಾಳೆಯಿಂದ ಕೇಂದ್ರ ಸಚಿವ ಪಿಯೂಷ್ ಗೋಯಲ್ ನಾಲ್ಕು ದಿನಗಳ ಜಪಾನ್ ಪ್ರವಾಸ
ನವದೆಹಲಿ, 23 ಆಗಸ್ಟ್ (ಹಿ.ಸ.): ಆ್ಯಂಕರ್: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಆ.24ರಿಂದ 27ರವರೆಗೆ ನಾಲ್ಕು ದಿನಗಳ ಜಪಾನ್ ಪ್ರವಾಸ ಕೈಗೊಳ್ಳಲಿದ್ದಾರೆ. ಭಾರತದ ಇದುವರೆಗಿನ ಅತಿದೊಡ್ಡ ವ್ಯಾಪಾರ ನಿಯೋಗವನ್ನು ಅವರು ಜಪಾನ್‌ಗೆ ಕರೆದೊಯ್ಯಲಿದ್ದು, 200ಕ್ಕೂ ಹೆಚ್ಚು ಉದ್ಯಮಿ
ನಾಳೆಯಿಂದ ಕೇಂದ್ರ ಸಚಿವ ಪಿಯೂಷ್ ಗೋಯಲ್ ನಾಲ್ಕು ದಿನಗಳ ಜಪಾನ್ ಪ್ರವಾಸ


ನವದೆಹಲಿ, 23 ಆಗಸ್ಟ್ (ಹಿ.ಸ.):

ಆ್ಯಂಕರ್:

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಆ.24ರಿಂದ 27ರವರೆಗೆ ನಾಲ್ಕು ದಿನಗಳ ಜಪಾನ್ ಪ್ರವಾಸ ಕೈಗೊಳ್ಳಲಿದ್ದಾರೆ. ಭಾರತದ ಇದುವರೆಗಿನ ಅತಿದೊಡ್ಡ ವ್ಯಾಪಾರ ನಿಯೋಗವನ್ನು ಅವರು ಜಪಾನ್‌ಗೆ ಕರೆದೊಯ್ಯಲಿದ್ದು, 200ಕ್ಕೂ ಹೆಚ್ಚು ಉದ್ಯಮಿಗಳು ನಿಯೋಗದಲ್ಲಿರಲಿದ್ದಾರೆ.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ಟೋಕಿಯೊ, ನಾಗೋಯಾ ಹಾಗೂ ಒಸಾಕಾಗೆ ಭೇಟಿ ನೀಡಲಿರುವ ಗೋಯಲ್, ಜಪಾನ್‌ನ ಪ್ರಮುಖ ಕೈಗಾರಿಕೋದ್ಯಮಿಗಳು ಹಾಗೂ ಕಂಪನಿಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಸೆಮಿಕಂಡಕ್ಟರ್, ಕೃತಕ ಬುದ್ಧಿಮತ್ತೆ, ನವೋದ್ಯಮ ಮತ್ತು ವಿದೇಶಿ ಹೂಡಿಕೆ ಕುರಿತ ವಿಶೇಷ ಸಭೆಗಳಲ್ಲೂ ಪಾಲ್ಗೊಳ್ಳಲಿದ್ದಾರೆ.

ಜಪಾನ್‌ನ ಆರ್ಥಿಕತೆ, ವ್ಯಾಪಾರ ಮತ್ತು ಕೈಗಾರಿಕಾ ಸಚಿವ ಅಕಾಜಾವಾ ರ್ಯೋಸೆ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿರುವ ಅವರು, ಜಪಾನ್‌ನ ಸಂಸತ್ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳನ್ನೂ ಭೇಟಿಯಾಗಲಿದ್ದಾರೆ.

ನಾಗೋಯಾದಲ್ಲಿ ಕೇಂದ್ರ ಜಪಾನ್ ಆರ್ಥಿಕ ಒಕ್ಕೂಟ ಹಾಗೂ ನಾಗೋಯಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯೊಂದಿಗೆ ಉದ್ಯಮಿಗಳ ಸಭೆ ನಡೆಸಲಿದ್ದು, ವಾಹನ ಮತ್ತು ಉಕ್ಕು ಕ್ಷೇತ್ರದ ಹೂಡಿಕೆದಾರರೊಂದಿಗೆ ಚರ್ಚಿಸಲಿದ್ದಾರೆ. ಒಸಾಕಾದಲ್ಲಿ ಹೂಡಿಕೆದಾರರು ಹಾಗೂ ಪ್ರಮುಖ ಜಪಾನ್ ಕಂಪನಿಗಳ ಪ್ರತಿನಿಧಿಗಳೊಂದಿಗೆ ವ್ಯಾಪಾರ ಸಭೆ ನಡೆಯಲಿದೆ.

ಭಾರತ ಮತ್ತು ಜಪಾನ್ ನಡುವಿನ ವ್ಯಾಪಾರ ಹಾಗೂ ಹೂಡಿಕೆ ಸಂಬಂಧಗಳಿಗೆ ಪ್ರವಾಸ ಮತ್ತಷ್ಟು ವೇಗ ನೀಡುವ ನಿರೀಕ್ಷೆಯಿದ್ದು, ಉನ್ನತ ತಂತ್ರಜ್ಞಾನ ಆಧಾರಿತ ಉತ್ಪಾದನೆ ಹಾಗೂ ಹೊಸ ತಲೆಮಾರಿನ ಕೈಗಾರಿಕೆಗಳಲ್ಲಿ ಸಹಕಾರಕ್ಕೆ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande