ಜೆನ್-ಜಿ ಯುವಕರನ್ನು ಸೆಳೆಯಲು ಬಿಜೆಪಿಯ ಹೊಸ ತಂತ್ರ: 14ರಿಂದ 22 ವರ್ಷದ ಯುವಕರ ಮೇಲೆ ವಿಶೇಷ ಗಮನ
ನವದೆಹಲಿ, 20 ಆಗಸ್ಟ್ (ಹಿ.ಸ.): ಆ್ಯಂಕರ್:ಜೆನ್-ಜಿ ಯುವಕರಲ್ಲಿ ತನ್ನ ಹಿಡಿತ ಬಲಪಡಿಸುವುದು ಹಾಗೂ ಯುವಜನರೊಂದಿಗೆ ನೇರ ಸಂವಾದ ನಡೆಸುವ ಉದ್ದೇಶದಿಂದ ಭಾರತೀಯ ಜನತಾ ಪಕ್ಷ ಹೊಸ ಕಾರ್ಯತಂತ್ರ ರೂಪಿಸಿದೆ. ಸಾಂಪ್ರದಾಯಿಕ ಏಕಮುಖ ಸಂದೇಶಗಳ ಬದಲಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂವಾದಾತ್ಮಕ ಸಂಪರ್ಕ ಹೆಚ್ಚಿಸು
भाजपा


ನವದೆಹಲಿ, 20 ಆಗಸ್ಟ್ (ಹಿ.ಸ.):

ಆ್ಯಂಕರ್:ಜೆನ್-ಜಿ ಯುವಕರಲ್ಲಿ ತನ್ನ ಹಿಡಿತ ಬಲಪಡಿಸುವುದು ಹಾಗೂ ಯುವಜನರೊಂದಿಗೆ ನೇರ ಸಂವಾದ ನಡೆಸುವ ಉದ್ದೇಶದಿಂದ ಭಾರತೀಯ ಜನತಾ ಪಕ್ಷ ಹೊಸ ಕಾರ್ಯತಂತ್ರ ರೂಪಿಸಿದೆ. ಸಾಂಪ್ರದಾಯಿಕ ಏಕಮುಖ ಸಂದೇಶಗಳ ಬದಲಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂವಾದಾತ್ಮಕ ಸಂಪರ್ಕ ಹೆಚ್ಚಿಸುವುದರ ಜೊತೆಗೆ ಕಾಲೇಜು, ವಿಶ್ವವಿದ್ಯಾಲಯ ಹಾಗೂ ತರಬೇತಿ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳನ್ನು ನೇರವಾಗಿ ಭೇಟಿ ಮಾಡಲು ಪಕ್ಷ ಮುಂದಾಗಿದೆ.

ನೀಟ್ ಪರೀಕ್ಷೆ ವಿವಾದದ ಬಳಿಕ ವಿದ್ಯಾರ್ಥಿಗಳ ಪ್ರತಿಭಟನೆಗಳು ಹಾಗೂ ಯುವಜನರಲ್ಲಿ ಉಂಟಾಗಿರುವ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು 14ರಿಂದ 22 ವರ್ಷದ ಯುವಕರನ್ನು ತಲುಪಲು ಬಿಜೆಪಿ ನಿರ್ಧರಿಸಿದೆ. ಈ ಸಂಬಂಧ ಎಲ್ಲ ರಾಜ್ಯಗಳ ಪಕ್ಷದ ಸಂಘಟನೆಗಳಿಗೆ ಮಾರ್ಗಸೂಚಿಗಳನ್ನು ನೀಡಲಾಗಿದ್ದು, ವರ್ಷವಿಡೀ ಈ ಅಭಿಯಾನ ನಡೆಸಲು ಯೋಜಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಎರಡು ಹಂತಗಳಲ್ಲಿ ಅಭಿಯಾನ

ಅಭಿಯಾನವನ್ನು ಮುಖ್ಯವಾಗಿ ಎರಡು ಹಂತಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ ಇನ್‌ಸ್ಟಾಗ್ರಾಂ, ಸ್ನ್ಯಾಪ್‌ಚಾಟ್ ಮತ್ತು ರೆಡಿಟ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಯುವಕರ ಭಾಷೆ ಮತ್ತು ಶೈಲಿಗೆ ಅನುಗುಣವಾಗಿ ಸಂವಾದ ನಡೆಸಲಾಗುತ್ತದೆ. ಪಠ್ಯ ಸಂದೇಶಗಳ ಬದಲಿಗೆ ರೀಲ್ಸ್, ಕಿರು ವಿಡಿಯೋ ಹಾಗೂ ದೃಶ್ಯಾಧಾರಿತ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಯುವಕರ ಅಭಿಪ್ರಾಯ ಮತ್ತು ಪ್ರತಿಕ್ರಿಯೆಗಳನ್ನು ಪಡೆಯಲು ದ್ವಿಮುಖ ಸಂವಾದಕ್ಕೂ ಒತ್ತು ನೀಡಲಾಗುತ್ತದೆ.

ಎರಡನೇ ಹಂತದಲ್ಲಿ ಕೇಂದ್ರ ಸಚಿವರು, ಸಂಸದರು, ಶಾಸಕರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶಿಕ್ಷಣ ಸಂಸ್ಥೆಗಳಿಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂವಾದ ನಡೆಸಲಿದ್ದಾರೆ. ಕಾಲೇಜು, ವಿಶ್ವವಿದ್ಯಾಲಯ, ಶಾಲೆ, ತರಬೇತಿ ಸಂಸ್ಥೆ ಹಾಗೂ ಕ್ರೀಡಾ ಕ್ಲಬ್‌ಗಳಲ್ಲಿ ಅನೌಪಚಾರಿಕವಾಗಿ ಮಾತುಕತೆ ನಡೆಸಲಾಗುತ್ತದೆ.

ರಾಜಕೀಯ ಮುಕ್ತ ಸಂವಾದಕ್ಕೆ ಆದ್ಯತೆ

ವಿದ್ಯಾರ್ಥಿಗಳೊಂದಿಗೆ ನಡೆಯುವ ಸಂವಾದವನ್ನು ರಾಜಕೀಯ ಮುಕ್ತವಾಗಿಡಲು ಬಿಜೆಪಿ ನಿರ್ಧರಿಸಿದೆ. ಕಾರ್ಯಕ್ರಮಗಳಲ್ಲಿ ಪಕ್ಷದ ಧ್ವಜ ಅಥವಾ ಬ್ಯಾನರ್‌ಗಳನ್ನು ಬಳಸಲಾಗುವುದಿಲ್ಲ. ಮಾಧ್ಯಮಗಳನ್ನೂ ಕಾರ್ಯಕ್ರಮಗಳಿಂದ ದೂರವಿಡಲಾಗುತ್ತದೆ ಮತ್ತು ಸಂವಾದದ ಬಳಿಕ ಯಾವುದೇ ಸಾರ್ವಜನಿಕ ಹೇಳಿಕೆ ನೀಡದಿರಲು ಉದ್ದೇಶಿಸಲಾಗಿದೆ. ವಿದ್ಯಾರ್ಥಿಗಳು ಮಾತುಕತೆಯನ್ನು ದಾಖಲಿಸಿಕೊಂಡರೆ ಅದಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ.

ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಸಂವಾದದ ಸ್ಥಳ ಮತ್ತು ವಿಧಾನವನ್ನು ನಿರ್ಧರಿಸಲಾಗುತ್ತದೆ. ಪರೀಕ್ಷೆ, ಪಠ್ಯಕ್ರಮ, ಉದ್ಯೋಗ, ಸ್ಪರ್ಧಾತ್ಮಕ ಪರೀಕ್ಷೆಗಳು, ವೃತ್ತಿ ಹಾಗೂ ಭವಿಷ್ಯಕ್ಕೆ ಸಂಬಂಧಿಸಿದ ವಿಚಾರಗಳ ಕುರಿತು ಚರ್ಚಿಸಲಾಗುತ್ತದೆ. ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಲು ವಿದ್ಯಾರ್ಥಿಗಳ ಸಲಹೆಗಳನ್ನು ಪಡೆಯಲಾಗುತ್ತದೆ. ಹಿಂದಿನ ಸರ್ಕಾರಗಳನ್ನು ದೂಷಿಸುವ ಬದಲು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವತ್ತ ಗಮನ ಹರಿಸಲು ಸೂಚಿಸಲಾಗಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರಗಳ ಬಗ್ಗೆಯೂ ಯುವಕರ ಅಭಿಪ್ರಾಯ ಸಂಗ್ರಹಿಸಲು ಯೋಜಿಸಲಾಗಿದೆ.

ಯುವ ನಾಯಕತ್ವ ಬೆಳೆಸಲು ಒತ್ತು

ಪಕ್ಷದ ಸಂಘಟನೆ ಮತ್ತು ಸರ್ಕಾರದಲ್ಲಿ ಹೆಚ್ಚಿನ ಯುವ ಮುಖಗಳಿಗೆ ಅವಕಾಶ ನೀಡುವ ಕಾರ್ಯತಂತ್ರವನ್ನೂ ರೂಪಿಸಲಾಗಿದೆ. ಭಾರತೀಯ ಜನತಾ ಯುವ ಮೋರ್ಚಾದ ಕಾರ್ಯಕರ್ತರು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ವಿಶೇಷ ಯುವ ತಂಡಗಳನ್ನು ರಚಿಸಿ, ಶಿಕ್ಷಣ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲಿದ್ದಾರೆ.

ದೊಡ್ಡ ವಿಶ್ವವಿದ್ಯಾಲಯಗಳು, ಐಐಟಿ, ಐಐಎಂ ಹಾಗೂ ಪ್ರಮುಖ ಸಂಶೋಧನಾ ಸಂಸ್ಥೆಗಳಿಗೆ ಸ್ಥಳೀಯ ಸಂಸದರೊಂದಿಗೆ ಕೇಂದ್ರ ಮಟ್ಟದ ಹಿರಿಯ ನಾಯಕರನ್ನೂ ಕಳುಹಿಸಲು ಯೋಜಿಸಲಾಗಿದೆ.

ಕೋಟಾ, ಪಾಟ್ನಾ, ಪ್ರಯಾಗ್‌ರಾಜ್, ಬೆಂಗಳೂರು, ವಿಶಾಖಪಟ್ಟಣಂ ಮತ್ತು ತಿರುವನಂತಪುರಂನಂತಹ ಪ್ರಮುಖ ತರಬೇತಿ ಕೇಂದ್ರಗಳಿಗೆ ವಿಶೇಷ ಗಮನ ನೀಡಲಾಗುತ್ತದೆ. ಶಿಕ್ಷಕರು ಹಾಗೂ ತರಬೇತಿ ಸಂಸ್ಥೆಗಳ ಜಾಲದ ಮೂಲಕ ಹೆಚ್ಚಿನ ಸಂಖ್ಯೆಯ ಯುವಕರನ್ನು ಪರಿಣಾಮಕಾರಿಯಾಗಿ ತಲುಪಬಹುದು ಎಂಬುದು ಪಕ್ಷದ ಅಭಿಪ್ರಾಯವಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande