
ಜಮ್ಮು, 20 ಆಗಸ್ಟ್ (ಹಿ.ಸ.):
ಆ್ಯಂಕರ್:ಜಮ್ಮು-ಕಾಶ್ಮೀರದ ಕತ್ರಾ–ಬನಿಹಾಲ್ ರೈಲು ಮಾರ್ಗದಲ್ಲಿ ಗರಿಷ್ಠ ವೇಗ ಹೆಚ್ಚಿಸಲು ರೈಲ್ವೆ ಸಚಿವಾಲಯ ಅನುಮತಿ ನೀಡಿದ ಬಳಿಕ, ವಂದೇ ಭಾರತ್ ಎಕ್ಸ್‌ಪ್ರೆಸ್ ಮೊದಲ ಬಾರಿಗೆ ವಿಶ್ವದ ಅತಿ ಎತ್ತರದ ರೈಲು ಸೇತುವೆಯಾದ ಚೆನಾಬ್ ಸೇತುವೆಯ ಮೇಲೆ ಗಂಟೆಗೆ ಸುಮಾರು 100 ಕಿಲೋಮೀಟರ್ ವೇಗದಲ್ಲಿ ಸಂಚರಿಸಿದೆ.
ಉತ್ತರ ರೈಲ್ವೆಯ ಜಮ್ಮು ವಿಭಾಗದ ವ್ಯಾಪ್ತಿಯ ಶ್ರೀ ಮಾತಾ ವೈಷ್ಣೋದೇವಿ ಕತ್ರಾ ಮತ್ತು ಬನಿಹಾಲ್ ನಡುವಿನ 111 ಕಿಲೋಮೀಟರ್ ಉದ್ದದ ಹೊಸ ವಿಶಾಲ ಗೇಜ್ ರೈಲು ಮಾರ್ಗದಲ್ಲಿ ರೈಲುಗಳ ಗರಿಷ್ಠ ವೇಗವನ್ನು ಗಂಟೆಗೆ 100 ಕಿಲೋಮೀಟರ್‌ಗೆ ಹೆಚ್ಚಿಸಲು ಅನುಮತಿ ನೀಡಲಾಗಿದೆ. ಈ ಮೊದಲು ಕತ್ರಾ–ಸಂಗಲ್ದಾನ್ ಮಾರ್ಗದಲ್ಲಿ ಗಂಟೆಗೆ 85 ಕಿ.ಮೀ. ಹಾಗೂ ಸಂಗಲ್ದಾನ್–ಬನಿಹಾಲ್ ಮಾರ್ಗದಲ್ಲಿ ಗಂಟೆಗೆ 75 ಕಿ.ಮೀ. ವೇಗಕ್ಕೆ ಮಾತ್ರ ಅನುಮತಿ ಇತ್ತು.
ನಿಗದಿತ ಎಲ್ಲ ಸುರಕ್ಷತಾ ನಿಯಮಗಳು ಹಾಗೂ ಷರತ್ತುಗಳನ್ನು ಖಚಿತಪಡಿಸಿಕೊಂಡ ಬಳಿಕ ವೇಗ ಹೆಚ್ಚಳಕ್ಕೆ ಅನುಮತಿ ನೀಡಲಾಗಿದೆ ಎಂದು ಉತ್ತರ ರೈಲ್ವೆ ತಿಳಿಸಿದೆ. ಜಮ್ಮು ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಉಚಿತ್ ಸಿಂಘಲ್ ಮಾತನಾಡಿ, ವೇಗ ಹೆಚ್ಚಳದಿಂದ ಪ್ರಯಾಣದ ಸಮಯ ಕಡಿಮೆಯಾಗುವುದರ ಜೊತೆಗೆ ಜಮ್ಮು-ಕಾಶ್ಮೀರದ ನಡುವಿನ ಸಂಪರ್ಕ ಮತ್ತಷ್ಟು ಬಲಪಡಲಿದೆ ಎಂದು ಹೇಳಿದರು.
ಪ್ರವಾಸೋದ್ಯಮ, ವ್ಯಾಪಾರಕ್ಕೆ ಉತ್ತೇಜನ
ವೇಗ ಹೆಚ್ಚಳದಿಂದ ಪ್ರಯಾಣಿಕರಿಗೆ ವೇಗದ, ಸುರಕ್ಷಿತ ಹಾಗೂ ಹೆಚ್ಚು ಆರಾಮದಾಯಕ ಪ್ರಯಾಣದ ಅನುಭವ ದೊರೆಯಲಿದೆ. ಜಮ್ಮು-ಕಾಶ್ಮೀರದಲ್ಲಿ ಪ್ರವಾಸೋದ್ಯಮ, ವ್ಯಾಪಾರ ಮತ್ತು ಆರ್ಥಿಕ ಚಟುವಟಿಕೆಗಳಿಗೂ ಇದರಿಂದ ಉತ್ತೇಜನ ಸಿಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕತ್ರಾ–ಬನಿಹಾಲ್ ನಡುವಿನ ರೈಲು ಪ್ರಯಾಣದ ಸಮಯದಲ್ಲಿ ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆಯಿದೆ. ಕಾಶ್ಮೀರಕ್ಕೆ ತೆರಳುವ ವಂದೇ ಭಾರತ್ ಎಕ್ಸ್‌ಪ್ರೆಸ್ ಚೆನಾಬ್ ಸೇತುವೆಯ ಮೇಲೆ ಗಂಟೆಗೆ 100 ಕಿ.ಮೀ ವೇಗ ತಲುಪಿರುವುದು ದೇಶದ ಪಾಲಿಗೆ ಐತಿಹಾಸಿಕ ಕ್ಷಣವಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.
2025ರ ಫೆಬ್ರವರಿಯಲ್ಲಿ ಕಾಶ್ಮೀರಕ್ಕೆ ವಂದೇ ಭಾರತ್
ಕಾಶ್ಮೀರದವರೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸುವ ಕನಸು 2025ರ ಫೆಬ್ರವರಿಯಲ್ಲಿ ನನಸಾಗಿತ್ತು. ಜಮ್ಮು ತವಿ ಮತ್ತು ಶ್ರೀನಗರ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ಸುಮಾರು 269 ಕಿಲೋಮೀಟರ್ ದೂರವನ್ನು 4 ಗಂಟೆ 50 ನಿಮಿಷಗಳಲ್ಲಿ ಕ್ರಮಿಸುತ್ತದೆ.
ಈ ಆಧುನಿಕ ರೈಲು ಚೆನಾಬ್ ಸೇತುವೆ ಹಾಗೂ ಅಂಜಿ ಖಡ್ಡ್ ಸೇತುವೆಯಂತಹ ದೇಶದ ಪ್ರಮುಖ ಎತ್ತರದ ಸೇತುವೆಗಳ ಮೂಲಕ ಸಂಚರಿಸುತ್ತದೆ.
ಐಫೆಲ್ ಟವರ್‌ಗಿಂತಲೂ ಎತ್ತರದ ಸೇತುವೆ
ಚೆನಾಬ್ ನದಿಯ ತಳಭಾಗದಿಂದ ಸುಮಾರು 359 ಮೀಟರ್ ಅಥವಾ 1,178 ಅಡಿ ಎತ್ತರದಲ್ಲಿ ಚೆನಾಬ್ ರೈಲು ಸೇತುವೆಯನ್ನು ನಿರ್ಮಿಸಲಾಗಿದೆ. ಇದು ಪ್ಯಾರಿಸ್‌ನ ಪ್ರಸಿದ್ಧ ಐಫೆಲ್ ಟವರ್‌ಗಿಂತಲೂ ಸುಮಾರು 35 ಮೀಟರ್ ಎತ್ತರವಾಗಿದೆ.
ಉಧಂಪುರ–ಶ್ರೀನಗರ–ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯ ಪ್ರಮುಖ ಭಾಗವಾಗಿರುವ ಈ ಸೇತುವೆ ಜಮ್ಮು-ಕಾಶ್ಮೀರದ ರೈಲು ಸಂಪರ್ಕದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಮಾರ್ಗದಲ್ಲಿ ರೈಲುಗಳ ವೇಗ ಹೆಚ್ಚಳವಾಗಿರುವುದರಿಂದ ಜಮ್ಮು ಮತ್ತು ಶ್ರೀನಗರ ನಡುವಿನ ಪ್ರಯಾಣದ ಸಮಯ ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.