
ಮಹಾಬಲಿಪುರಂ, 20 ಆಗಸ್ಟ್ (ಹಿ.ಸ.):
ಆ್ಯಂಕರ್:ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರದಿಂದ ನ್ಯಾಯಯುತ ಅನುದಾನ ಹಾಗೂ ಸಂಪನ್ಮೂಲಗಳ ಸಮರ್ಪಕ ಪಾಲು ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.
ತಮಿಳುನಾಡಿನ ಮಹಾಬಲಿಪುರಂನಲ್ಲಿ ಗುರುವಾರ ನಡೆದ 31ನೇ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, “ಕರ್ನಾಟಕ ಬಲಿಷ್ಠವಾದರೆ ದಕ್ಷಿಣ ಭಾರತ ಬಲಿಷ್ಠವಾಗುತ್ತದೆ. ದಕ್ಷಿಣ ಭಾರತ ಬಲಿಷ್ಠವಾದರೆ ಭಾರತ ಮತ್ತಷ್ಟು ಬಲಿಷ್ಠವಾಗುತ್ತದೆ. ನಮ್ಮ ನಿಧಿಗಳಲ್ಲಿ ಹಾಗೂ ನಮ್ಮ ಧ್ವನಿಯಲ್ಲಿ ನ್ಯಾಯ ಬೇಕು” ಎಂದು ಹೇಳಿದರು.
ದಕ್ಷಿಣ ಭಾರತದ ಐದು ರಾಜ್ಯಗಳು ದೇಶದ ಜನಸಂಖ್ಯೆಯ ಸುಮಾರು ಶೇ.20ರಷ್ಟಿದ್ದರೂ ದೇಶದ ಜಿಡಿಪಿಗೆ ಶೇ.33ರಷ್ಟು ಕೊಡುಗೆ ನೀಡುತ್ತಿವೆ. ಕರ್ನಾಟಕದ ಜನಸಂಖ್ಯೆ ದೇಶದ ಶೇ.5.5ರಷ್ಟಿದ್ದರೂ ಜಿಡಿಪಿಗೆ ಶೇ.9ರಷ್ಟು ಕೊಡುಗೆ ನೀಡುತ್ತಿದೆ ಎಂದು ವಿವರಿಸಿದರು.
15ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕದ ತೆರಿಗೆ ಪಾಲು ಶೇ.4.7ರಿಂದ ಶೇ.3.6ಕ್ಕೆ ಇಳಿಕೆಯಾಗಿದ್ದು, ಇದರಿಂದ ರಾಜ್ಯಕ್ಕೆ ಸುಮಾರು ₹65 ಸಾವಿರ ಕೋಟಿ ನಷ್ಟವಾಗಿದೆ ಎಂದು ಶಿವಕುಮಾರ್ ತಿಳಿಸಿದರು. ಕರ್ನಾಟಕಕ್ಕೆ ಶಿಫಾರಸು ಮಾಡಿದ್ದ ವಿಶೇಷ ಅನುದಾನ ಹಾಗೂ ರಾಜ್ಯ-ನಿರ್ದಿಷ್ಟ ಅನುದಾನವನ್ನು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.
ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಯಲ್ಲಿ ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯಕ್ಕೆ ಧಕ್ಕೆಯಾಗಬಾರದು. 1971ರ ಜನಗಣತಿ ಆಧಾರವನ್ನು ಗೌರವಿಸಿ, ರಾಜ್ಯಗಳ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಂಡು ಇದೇ ಸ್ಥಾನಗಳೊಳಗೆ ಮಹಿಳಾ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕಾವೇರಿ, ಕೃಷ್ಣಾ, ತುಂಗಭದ್ರಾ, ಪೆನ್ನಾರ್ ಮತ್ತು ಪಾಲಾರ್ ನದಿಗಳ ನೀರಿನ ಹಂಚಿಕೆ ವಿಚಾರದಲ್ಲಿ ರಾಜ್ಯಗಳ ನಡುವೆ ಸಹಕಾರ ಅಗತ್ಯ. ನೀರು ನಮ್ಮನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು ಎಂದರು.
ಕರ್ನಾಟಕಕ್ಕೆ ಬೆಂಗಳೂರು-ಮುಂಬೈ ಅತಿ ವೇಗದ ರೈಲು ಯೋಜನೆ, ದಕ್ಷಿಣ ಭಾಗದ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ, ರಾಯಚೂರಿಗೆ ಏಮ್ಸ್ ಹಾಗೂ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ಸೇರಿದಂತೆ ಹೆಚ್ಚುವರಿ ಕೇಂದ್ರ ಯೋಜನೆಗಳ ಮೂಲಕ ನ್ಯಾಯ ಒದಗಿಸಬೇಕು ಎಂದು ಕೇಂದ್ರವನ್ನು ಒತ್ತಾಯಿಸಿದರು.
ಖನಿಜ ಸಂಪನ್ಮೂಲಗಳ ಮೇಲಿನ ರಾಜ್ಯಗಳ ಹಕ್ಕು ಹಾಗೂ ಹೆಚ್ಚುತ್ತಿರುವ ಮಾದಕ ವಸ್ತುಗಳ ಕಳ್ಳಸಾಗಣೆ ತಡೆಗೂ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಆಗ್ರಹಿಸಿದರು.
“ಕರ್ನಾಟಕ ದೂರು ನೀಡಲು ಬಂದಿಲ್ಲ. ದೇಶದ ಆರ್ಥಿಕತೆಯನ್ನು ಮುನ್ನಡೆಸುತ್ತಿರುವ ರಾಜ್ಯಗಳಿಗೆ ಸಲ್ಲಬೇಕಾದ ಗೌರವ ಮತ್ತು ನ್ಯಾಯಯುತ ಪಾಲನ್ನು ತಿಳಿಸಲು ಬಂದಿದ್ದೇವೆ. ನಾವು ಭಾರತದ ಭವಿಷ್ಯದ ಅಭಿವೃದ್ಧಿಯ ಪಾಲುದಾರರು” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.