
ಬಾಗಲಕೋಟೆ, 18 ಆಗಸ್ಟ್ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ
ಮುಧೋಳ ನಗರದ ತಂಬಾಕ್ ಚೌಕ್ ಬಳಿಯ ಚಿನ್ನಾಭರಣದ ಅಂಗಡಿಯೊಂದರಲ್ಲಿ ವ್ಯಾಪಾರ ಮಾಡುವ ನೆಪದಲ್ಲಿ ಬಂದ ಮೂವರು ಬುರ್ಖಾಧಾರಿ ಮಹಿಳೆಯರು ಅಂಗಡಿ ಮಾಲೀಕನ ಗಮನವನ್ನು ಬೇರೆಡೆ ಸೆಳೆದು ಬರೋಬ್ಬರಿ ₹22,87,600 ಮೌಲ್ಯದ 163 ಗ್ರಾಂ ಚಿನ್ನಾಭರಣವನ್ನು ಕದ್ದು ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವ್ಯಾಪಾರಿಯಂತೆ ಅಂಗಡಿಗೆ ಆಗಮಿಸಿದ ಮೂವರು ಮಹಿಳೆಯರು ಕಾಲುಚೈನು ಖರೀದಿಸುವುದಾಗಿ ತಿಳಿಸಿದ್ದಾರೆ. ಬಳಿಕ ವಿವಿಧ ವಿನ್ಯಾಸಗಳ ಕಾಲುಚೈನುಗಳನ್ನು ತೋರಿಸುವಂತೆ ಅಂಗಡಿ ಮಾಲೀಕರಿಗೆ ಮನವಿ ಮಾಡಿದ್ದಾರೆ. ಮಹಿಳೆಯರು ಚಿನ್ನಾಭರಣಗಳನ್ನು ಪರಿಶೀಲಿಸುವ ನೆಪದಲ್ಲಿ ಅಂಗಡಿ ಮಾಲೀಕರೊಂದಿಗೆ ಮಾತುಕತೆ ನಡೆಸುತ್ತಿದ್ದ ವೇಳೆ, ಅವರ ಗಮನವನ್ನು ಬೇರೆಡೆ ಸೆಳೆದಿದ್ದಾರೆ ಎನ್ನಲಾಗಿದೆ.
ಮಹಿಳೆಯರ ಮಾತಿನಂತೆ ಅಂಗಡಿ ಮಾಲೀಕರು ಟ್ರೇಜರಿಯಲ್ಲಿದ್ದ ಕಾಲುಚೈನುಗಳನ್ನು ತೋರಿಸಲು ಮುಂದಾದ ಸಂದರ್ಭದಲ್ಲಿ, ಅಲ್ಲಿದ್ದ ಚಿನ್ನಾಭರಣಗಳ ಟ್ರೇಯನ್ನೇ ಮಹಿಳೆಯರು ಕದ್ದುಕೊಂಡು ಕ್ಷಣಾರ್ಧದಲ್ಲಿ ಅಂಗಡಿಯಿಂದ ಹೊರಗೆ ತೆರಳಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಹಿಳೆಯರು ತೆರಳಿದ ಬಳಿಕ ಚಿನ್ನಾಭರಣದ ಟ್ರೇ ಕಾಣೆಯಾಗಿರುವುದು ಅಂಗಡಿ ಮಾಲೀಕರ ಗಮನಕ್ಕೆ ಬಂದಿದೆ. ಪರಿಶೀಲನೆ ನಡೆಸಿದಾಗ ಒಟ್ಟು 163 ಗ್ರಾಂ ತೂಕದ ಚಿನ್ನಾಭರಣ ಕಳವಾಗಿದ್ದು, ಅದರ ಅಂದಾಜು ಮೌಲ್ಯ ₹22,87,600 ಎಂದು ತಿಳಿದುಬಂದಿದೆ.
ಕಳೆದ 8 ರಂದು ಈ ಘಟನೆ ನಡೆದಿದ್ದು , ಘಟನೆಗೆ ಸಂಬಂಧಿಸಿದಂತೆ ಅಂಗಡಿ ಮಾಲೀಕರು ಆಗಸ್ಟ್ 16ರಂದು ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಂಗಡಿಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಕಳ್ಳತನದಲ್ಲಿ ಭಾಗಿಯಾಗಿರುವ ಮಹಿಳೆಯರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
ವ್ಯಾಪಾರ ಮಾಡುವ ನೆಪದಲ್ಲಿ ಅಂಗಡಿಗೆ ಬಂದು ಸಿಬ್ಬಂದಿ ಅಥವಾ ಮಾಲೀಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳವು ಮಾಡಿರುವ ಘಟನೆ ವ್ಯಾಪಾರಿಗಳಲ್ಲಿ ಆತಂಕ ಮೂಡಿಸಿದೆ. ಮಹಿಳೆಯರ ಚಲನವಲನ, ಅಂಗಡಿಗೆ ಆಗಮಿಸಿದ ಸಮಯ ಸೇರಿದಂತೆ ವಿವಿಧ ಮಾಹಿತಿಗಳನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕಳವಾದ ಚಿನ್ನಾಭರಣ ಹಾಗೂ ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ
---------------
ಹಿಂದೂಸ್ತಾನ್ ಸಮಾಚಾರ್ / jyothi deshpande