₹3.68 ಕೋಟಿಗೂ ಅಧಿಕ ಮೌಲ್ಯದ ಚಿನ್ನ, ಬೆಳ್ಳಿ, ನಗದು, ಮೊಬೈಲ್ ಹಾಗೂ ವಾಹನಗಳು ಜಪ್ತಿ
ಗದಗ, 17 ಆಗಸ್ಟ್ (ಹಿ.ಸ.) ಆ್ಯಂಕರ್:- ಗದಗ ಜಿಲ್ಲೆಯಲ್ಲಿ ಯಾವುದೇ ಸುಳಿವು ಬಿಡದೆ ಮನೆ, ಅಂಗಡಿ ಸೇರಿದಂತೆ ವಿವಿಧೆಡೆ ಕಳ್ಳತನ ನಡೆಸಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದು ದೋಚಿ ಪರಾರಿಯಾಗುತ್ತಿದ್ದ ಖತರ್ನಾಕ ಕಳ್ಳರ ಗ್ಯಾಂಗ್ಗಳ ವಿರುದ್ಧ ಗದಗ ಜಿಲ್ಲಾ ಪೊಲೀಸರು ಭರ್
ಫೋಟೋ


ಗದಗ, 17 ಆಗಸ್ಟ್ (ಹಿ.ಸ.)

ಆ್ಯಂಕರ್:- ಗದಗ ಜಿಲ್ಲೆಯಲ್ಲಿ ಯಾವುದೇ ಸುಳಿವು ಬಿಡದೆ ಮನೆ, ಅಂಗಡಿ ಸೇರಿದಂತೆ ವಿವಿಧೆಡೆ ಕಳ್ಳತನ ನಡೆಸಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದು ದೋಚಿ ಪರಾರಿಯಾಗುತ್ತಿದ್ದ ಖತರ್ನಾಕ ಕಳ್ಳರ ಗ್ಯಾಂಗ್ಗಳ ವಿರುದ್ಧ ಗದಗ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಸುದೀರ್ಘ ಅವಧಿಯ ತನಿಖೆ, ತಾಂತ್ರಿಕ ಮಾಹಿತಿ ಹಾಗೂ ನಿರಂತರ ಬೆನ್ನಟ್ಟುವಿಕೆಯ ಮೂಲಕ ಪೊಲೀಸರು ಕಳ್ಳತನ ಪ್ರಕರಣಗಳನ್ನು ಭೇದಿಸಿ ಬರೋಬ್ಬರಿ 95 ಆರೋಪಿಗಳನ್ನು ಬಂಧಿಸಿದ್ದಾರೆ.

2025ರ ಆಗಸ್ಟ್ 1ರಿಂದ 2026ರ ಜುಲೈ 31ರವರೆಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ 68 ಕಳ್ಳತನ ಪ್ರಕರಣಗಳನ್ನು ಭೇದಿಸಲಾಗಿದ್ದು, ಆರೋಪಿಗಳಿಂದ ₹3.68 ಕೋಟಿಗೂ ಅಧಿಕ ಮೌಲ್ಯದ ಚಿನ್ನ, ಬೆಳ್ಳಿ, ನಗದು ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬೆಳಗಾವಿ ಉತ್ತರ ವಲಯದ ಐಜಿಪಿ ಸಂದೀಪ್ ಪಾಟೀಲ್ ಹಾಗೂ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ತಿಳಿಸಿದ್ದಾರೆ.

ಗದಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಕಾರ್ಯಾಚರಣೆಯ ವಿವರಗಳನ್ನು ನೀಡಿದ ಅಧಿಕಾರಿಗಳು, ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವುದರ ಜೊತೆಗೆ ಕಳುವಾದ ವಸ್ತುಗಳನ್ನು ವಶಪಡಿಸಿಕೊಂಡು ಅವುಗಳ ನಿಜವಾದ ಮಾಲೀಕರಿಗೆ ಮರಳಿಸುವ ಕಾರ್ಯಕ್ಕೂ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ಪೊಲೀಸರು ವಶಪಡಿಸಿಕೊಂಡಿರುವ ಚಿನ್ನಾಭರಣಗಳು ಹಾಗೂ ಬೆಳ್ಳಿ ವಸ್ತುಗಳು ಇದೀಗ ಪೊಲೀಸರ ಭರ್ಜರಿ ಕಾರ್ಯಾಚರಣೆಗೆ ಸಾಕ್ಷಿಯಾಗಿವೆ. ವಿವಿಧ ವಿನ್ಯಾಸಗಳ ಚಿನ್ನದ ಸರ, ಉಂಗುರ, ಬಳೆ ಸೇರಿದಂತೆ ಹಲವು ಬಗೆಯ ಆಭರಣಗಳು ಹಾಗೂ ಬೆಳ್ಳಿ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಕಳ್ಳತನದ ಬಳಿಕ ಯಾವುದೇ ಸುಳಿವು ಬಿಡದೆ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು. ಆದರೆ ಪ್ರಕರಣಗಳ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ಮುಂದುವರಿಸಿದ ಪೊಲೀಸರು ಅಂತಿಮವಾಗಿ ಕಳ್ಳರ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

₹1.65 ಕೋಟಿ ಮೌಲ್ಯದ ಚಿನ್ನಾಭರಣ ವಶ

ಬಂಧಿತ ಆರೋಪಿಗಳಿಂದ ₹1,65,63,977 ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಇದರ ಜೊತೆಗೆ ಸುಮಾರು ₹60,52,877 ಮೌಲ್ಯದ ಬೆಳ್ಳಿ ಆಭರಣಗಳು ಹಾಗೂ ₹7.98 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳ್ಳತನ ಪ್ರಕರಣಗಳಲ್ಲಿ ಕೇವಲ ಆರೋಪಿಗಳನ್ನು ಬಂಧಿಸುವುದಕ್ಕೆ ಸೀಮಿತವಾಗದೆ, ಅವರಿಂದ ಕಳುವಾದ ವಸ್ತುಗಳನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿರುವುದು ವಿಶೇಷವಾಗಿದೆ.

40 ವಾಹನಗಳೂ ಪೊಲೀಸರ ವಶಕ್ಕೆ

ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಂತರ್ಜಿಲ್ಲಾ ಬಳಕೆಯ ವಾಹನಗಳು ಸೇರಿದಂತೆ ಒಟ್ಟು 40 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಕಳ್ಳತನಕ್ಕೆ ಬಳಸಲಾಗುತ್ತಿದ್ದ ವಾಹನಗಳು ಹಾಗೂ ಪ್ರಕರಣಗಳಿಗೆ ಸಂಬಂಧಿಸಿದ ಇತರ ವಾಹನಗಳ ಕುರಿತು ತನಿಖೆ ಮುಂದುವರಿಸಲಾಗಿದೆ.

ಪೊಲೀಸರ ಈ ಕಾರ್ಯಾಚರಣೆಯಿಂದ ಜಿಲ್ಲೆಯಲ್ಲಿ ಸಂಘಟಿತವಾಗಿ ಕಳ್ಳತನ ನಡೆಸುತ್ತಿದ್ದ ಹಲವು ತಂಡಗಳ ಚಟುವಟಿಕೆಗಳಿಗೆ ಕಡಿವಾಣ ಬಿದ್ದಂತಾಗಿದೆ.

ವಂಚನೆ ಪ್ರಕರಣಗಳಲ್ಲೂ ಕಾರ್ಯಾಚರಣೆ

ಕಳ್ಳತನ ಪ್ರಕರಣಗಳ ಜೊತೆಗೆ ಮೋಸ ಹಾಗೂ ವಂಚನೆ ಪ್ರಕರಣಗಳ ವಿರುದ್ಧವೂ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಒಟ್ಟು 32 ಮೋಸ, ವಂಚನೆ ಪ್ರಕರಣಗಳಲ್ಲಿ 35 ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರಿಂದ ₹37,13,942 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದೇ ವೇಳೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಬರೋಬ್ಬರಿ ₹97.19 ಲಕ್ಷ ಮೌಲ್ಯದ 965 ಮೊಬೈಲ್ಗಳನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ. ಮೊಬೈಲ್ ಕಳ್ಳತನ ಹಾಗೂ ಕಳೆದುಹೋದ ಮೊಬೈಲ್ಗಳ ಪತ್ತೆ ಕಾರ್ಯದಲ್ಲಿಯೂ ಗದಗ ಪೊಲೀಸರು ಗಮನಾರ್ಹ ಸಾಧನೆ ಮಾಡಿದ್ದಾರೆ.

ಹಲವು ಜಿಲ್ಲೆಗಳಲ್ಲಿ ಕೈಚಳಕ

ಬಂಧಿತ ಆರೋಪಿಗಳಲ್ಲಿ ಕೆಲವು ಅಂತರ್ರಾಜ್ಯ ಕಳ್ಳರ ತಂಡಗಳೊಂದಿಗೆ ಸಂಪರ್ಕ ಹೊಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗದಗ ಜಿಲ್ಲೆಗೆ ಮಾತ್ರ ಸೀಮಿತವಾಗದೆ ಬೆಳಗಾವಿ, ವಿಜಯಪುರ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇದೇ ತಂಡಗಳು ಕಳ್ಳತನ ನಡೆಸಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಗದಗ ಪೊಲೀಸರು ವಿವಿಧ ಪ್ರಕರಣಗಳ ನಡುವಿನ ಸಂಪರ್ಕವನ್ನು ಪರಿಶೀಲಿಸಿ, ಆರೋಪಿಗಳ ಚಲನವಲನ ಹಾಗೂ ಕಳ್ಳತನದ ಮಾದರಿಯನ್ನು ಆಧರಿಸಿ ತನಿಖೆ ನಡೆಸಿದ್ದಾರೆ. ಹಂತಹಂತವಾಗಿ ಆರೋಪಿಗಳನ್ನು ಬಂಧಿಸುವ ಮೂಲಕ ಕಳ್ಳರ ಜಾಲವನ್ನು ಪತ್ತೆಹಚ್ಚಲಾಗಿದೆ.

ಗಜೇಂದ್ರಗಡದ ಮನೆ ಕಳ್ಳತನ ಪ್ರಕರಣಕ್ಕೆ ವಾರದಲ್ಲೇ ಬ್ರೇಕ್

ಗಜೇಂದ್ರಗಡ ಪಟ್ಟಣದಲ್ಲಿ ನಡೆದ ಮನೆ ಕಳ್ಳತನ ಪ್ರಕರಣವೊಂದು ಪೊಲೀಸರ ಕಾರ್ಯಾಚರಣೆಗೆ ಪ್ರಮುಖ ಉದಾಹರಣೆಯಾಗಿದೆ. ಮನೆಯೊಂದರಲ್ಲಿ ಸುಮಾರು 12 ತೊಲಿ ಚಿನ್ನ, 1 ಕೆಜಿ ಬೆಳ್ಳಿ ಹಾಗೂ ಲಕ್ಷಾಂತರ ರೂಪಾಯಿ ನಗದು ಕಳವು ಮಾಡಿ ಆರೋಪಿಗಳು ಪರಾರಿಯಾಗಿದ್ದರು.

ಕುಟುಂಬದವರು ಜೀವನಪೂರ್ತಿ ಸಂಪಾದಿಸಿ ಕೂಡಿಟ್ಟಿದ್ದ ಚಿನ್ನಾಭರಣ ಹಾಗೂ ಹಣ ಕಳುವಾಗಿದ್ದರಿಂದ ಆತಂಕಕ್ಕೊಳಗಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ ಕೇವಲ ಒಂದು ವಾರದೊಳಗೆ ಆರೋಪಿಗಳನ್ನು ಪತ್ತೆಹಚ್ಚಿ ಪ್ರಕರಣವನ್ನು ಭೇದಿಸಿದ್ದಾರೆ.

ಕಳುವಾದ ವಸ್ತುಗಳು ಮತ್ತೆ ಸಿಕ್ಕಿರುವುದರಿಂದ ಕುಟುಂಬದವರು ಪೊಲೀಸರ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಮಾಲೀಕರಿಗೆ ಕಳುವಾದ ವಸ್ತುಗಳ ಹಸ್ತಾಂತರ

ಪೊಲೀಸರು ವಶಪಡಿಸಿಕೊಂಡಿದ್ದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ಇತರ ವಸ್ತುಗಳನ್ನು ಅವುಗಳ ನೈಜ ಮಾಲೀಕರಿಗೆ ಹಸ್ತಾಂತರಿಸುವ ಕಾರ್ಯಕ್ರಮವೂ ನಡೆಯಿತು.

ಕಳ್ಳತನದಿಂದ ಕಳೆದುಕೊಂಡಿದ್ದ ಆಭರಣಗಳು ಹಾಗೂ ವಸ್ತುಗಳು ಮರಳಿ ಸಿಕ್ಕ ಹಿನ್ನೆಲೆಯಲ್ಲಿ ಮಾಲೀಕರು ಸಂತಸ ವ್ಯಕ್ತಪಡಿಸಿದರು. ವರ್ಷಗಳ ಪರಿಶ್ರಮದಿಂದ ಸಂಪಾದಿಸಿದ್ದ ಆಸ್ತಿಯನ್ನು ಕಳೆದುಕೊಂಡಿದ್ದ ಕುಟುಂಬಗಳಿಗೆ ಪೊಲೀಸರು ವಸ್ತುಗಳನ್ನು ಮರಳಿ ನೀಡಿರುವುದು ದೊಡ್ಡ ನೆಮ್ಮದಿ ತಂದಿದೆ.

ಗಜೇಂದ್ರಗಡ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಳ್ಳತನಕ್ಕೊಳಗಾದ ಮನೆ ಹಾಗೂ ಅಂಗಡಿಗಳ ಮಾಲೀಕರು ಪೊಲೀಸರ ಕಾರ್ಯವನ್ನು ಶ್ಲಾಘಿಸಿದರು.

ಹಲವು ಪೊಲೀಸ್ ಠಾಣೆಗಳ ಪ್ರಕರಣಗಳಿಗೆ ಪರಿಹಾರ

ಗದಗ ಜಿಲ್ಲೆಯ ನರಗುಂದ, ಗಜೇಂದ್ರಗಡ, ರೋಣ, ಗದಗ ಶಹರ, ಬಡಾವಣೆ, ಬೆಟಗೇರಿ, ಮುಂಡರಗಿ ಹಾಗೂ ಶಿರಹಟ್ಟಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಹಲವು ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ.

ಪ್ರಕರಣಗಳ ತನಿಖೆಯಲ್ಲಿ ಸ್ಥಳೀಯ ಪೊಲೀಸ್ ಸಿಬ್ಬಂದಿಯ ಜೊತೆಗೆ ತಾಂತ್ರಿಕ ಹಾಗೂ ತನಿಖಾ ತಂಡಗಳು ಸಹ ಪ್ರಮುಖ ಪಾತ್ರ ವಹಿಸಿವೆ. ಆರೋಪಿಗಳ ಚಲನವಲನ ಪತ್ತೆಹಚ್ಚುವುದು, ಕಳುವಾದ ವಸ್ತುಗಳನ್ನು ಗುರುತಿಸುವುದು ಹಾಗೂ ವಿವಿಧ ಜಿಲ್ಲೆಗಳ ಪ್ರಕರಣಗಳೊಂದಿಗೆ ಸಂಪರ್ಕ ಕಲ್ಪಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ

ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿತ್ತು. ಮನೆಗಳಲ್ಲಿ ಸಂಗ್ರಹಿಸಿಟ್ಟಿದ್ದ ಚಿನ್ನಾಭರಣ, ಬೆಳ್ಳಿ ಹಾಗೂ ನಗದು ಕಳ್ಳತನವಾಗುತ್ತಿರುವುದು ಜನರಲ್ಲಿ ಭಯ ಮೂಡಿಸಿತ್ತು.

ಆದರೆ ಇದೀಗ ಗದಗ ಜಿಲ್ಲಾ ಪೊಲೀಸರು ಸಂಘಟಿತ ಕಳ್ಳರ ತಂಡಗಳನ್ನು ಪತ್ತೆಹಚ್ಚಿ ಬಂಧಿಸಿರುವುದು ಸಾರ್ವಜನಿಕರಲ್ಲಿ ನೆಮ್ಮದಿ ಮೂಡಿಸಿದೆ. ಕಳುವಾದ ವಸ್ತುಗಳನ್ನು ಪತ್ತೆಹಚ್ಚಿ ಮಾಲೀಕರಿಗೆ ಮರಳಿಸಿರುವುದಕ್ಕೆ ಜಿಲ್ಲೆಯ ಜನರು ಪೊಲೀಸ್ ಇಲಾಖೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಳ್ಳತನ ಪ್ರಕರಣಗಳನ್ನು ಭೇದಿಸುವುದರ ಜೊತೆಗೆ ಕಳುವಾದ ವಸ್ತುಗಳನ್ನು ಮರುಪಡೆಯುವಲ್ಲಿ ಯಶಸ್ವಿಯಾಗಿರುವುದು ಪೊಲೀಸ್ ಇಲಾಖೆಯ ತನಿಖಾ ಸಾಮರ್ಥ್ಯವನ್ನು ತೋರಿಸುತ್ತದೆ. ಮುಂದಿನ ದಿನಗಳಲ್ಲಿಯೂ ಜಿಲ್ಲೆಯಲ್ಲಿ ಕಳ್ಳತನ ಹಾಗೂ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಮುಂದುವರಿಯಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗಾವಿ ಉತ್ತರ ವಲಯದ ಐಜಿಪಿ ಸಂದೀಪ್ ಪಾಟೀಲ್ ಹಾಗೂ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಮಹತ್ವದ ಪಾತ್ರ ವಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande