
ಬೆಂಗಳೂರು, 17 ಆಗಸ್ಟ್ (ಹಿ.ಸ.):
ಆ್ಯಂಕರ್:ಬೆಂಗಳೂರು ನಗರದ ಹೊರವಲಯದ ಚಿಕ್ಕಬಾಣಾವರ ಪೊಲೀಸ್ ಠಾಣೆ ವ್ಯಾಪ್ತಿಯ ಗುಡ್ಡೆಬಸವಪುರದಲ್ಲಿ ತಂದೆ ಹಾಗೂ ಐದು ವರ್ಷದ ಮಗ ಅನುಮಾನಾಸ್ಪದವಾಗಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಕುಣಿಗಲ್ ಮೂಲದ ಅಭಿನಂದನ್ (35) ಹಾಗೂ ಅವರ ಪುತ್ರ ಯದುವೀರ್ (5) ಮೃತರು. ಕುಟುಂಬ ಭಾನುವಾರ ಸಂಬಂಧಿಕರ ಮನೆಗೆ ತೆರಳಿ ಸಂಜೆ ಮನೆಗೆ ಮರಳಿತ್ತು. ಸೋಮವಾರ ಬೆಳಗ್ಗೆ ಅಭಿನಂದನ್ ಹಾಗೂ ಯದುವೀರ್ ಯಾವುದೇ ಚಲನವಲನ ಇಲ್ಲದೆ ಬಿದ್ದಿರುವುದನ್ನು ಕಂಡ ಪತ್ನಿ ಹರಿಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ತೆರಳಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತರ ದೇಹದ ಮೇಲೆ ಸಣ್ಣಪುಟ್ಟ ಗಾಯದ ಗುರುತುಗಳು ಕಂಡುಬಂದಿದ್ದು, ಸಾವಿನ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ವರದಿ ಬಳಿಕ ತಿಳಿಯಲಿದೆ.
ಇದು ಯೋಜಿತ ಕೊಲೆ ಎಂದು ಹರಿಣಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ದಂಪತಿಯ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಮನೆಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳು ಸರಿಯಾಗಿ ಲಭ್ಯವಾಗದ ಹಿನ್ನೆಲೆಯಲ್ಲಿ, ಕೃತ್ಯಕ್ಕೂ ಮುನ್ನ ಉದ್ದೇಶಪೂರ್ವಕವಾಗಿ ಸಿಸಿಟಿವಿ ಸ್ಥಗಿತಗೊಳಿಸಲಾಗಿತ್ತೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ವಾಯುವ್ಯ ವಿಭಾಗದ ಡಿಸಿಪಿ ನಾಗೇಶ್ ಡಿ.ಎಲ್. ತಿಳಿಸಿದ್ದಾರೆ
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R