
ಹಾವೇರಿ, 14 ಆಗಸ್ಟ್ (ಹಿ.ಸ.):
ಆ್ಯಂಕರ್:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಲ್ಪನೆಯ 'ವಿಕಸಿತ ಭಾರತ 2047ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಪ್ರತಿಯೊಬ್ಬ ನಾಗರಿಕನೂ ಸಮರ್ಪಣಾ ಭಾವದಿಂದ ಶ್ರಮಿಸಬೇಕು. ಈ ಸುದೀರ್ಘ ಪ್ರಗತಿಯ ಪಯಣಕ್ಕೆ ಎಲ್ಲರೂ ಸಿದ್ಧರಾಗಿ ಪ್ರತಿಜ್ಞೆ ಸ್ವೀಕರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 78-80 ವರ್ಷಗಳ ಸುದೀರ್ಘ ಅವಧಿಯಲ್ಲಿ ದೇಶವು ಸಾಗಿ ಬಂದಿರುವ ದಾರಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಮುಂದಿನ ಭವಿಷ್ಯವನ್ನು ಶಕ್ತಿಯುತವಾಗಿ ನಿರ್ಮಾಣ ಮಾಡಲು ಇದು ಸೂಕ್ತ ಸಮಯ ಎಂದು ಬೊಮ್ಮಾಯಿ ತಿಳಿಸಿದರು.
ಆರ್ ಎಸ್ ಎಸ್ ಗೆ ರಾಜ್ಯ ಸರ್ಕಾರದಿಂದ ಅಂಕುಶ ಹಾಕಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ನಾಗರಿಕ ಹಕ್ಕುಗಳು, ವೈಯಕ್ತಿಕ ಹಕ್ಕುಗಳು ಹಾಗೂ ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ಈ ಹಕ್ಕುಗಳ ಉಲ್ಲಂಘನೆಯಾಗದಂತೆ ಕಾನೂನು ಚೌಕಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯನಿರ್ವಹಿಸಬೇಕು ಎಂದರು.
ನಮ್ಮ ದೇಶಕ್ಕೆ ಭವ್ಯ ಪರಂಪರೆ, ಸಂಸ್ಕೃತಿ ಹಾಗೂ ವರ್ಷವಿಡೀ ಆಚರಿಸುವ ಹಬ್ಬ-ಹರಿದಿನಗಳ ಸುದೀರ್ಘ ಇತಿಹಾಸವಿದೆ. ಇಂತಹ ಆಚರಣೆಗಳು ಜನರನ್ನು ಒಂದಾಗಿ ಜೋಡಿಸುವ ಕೆಲಸ ಮಾಡಬೇಕು ಇಂಥಹ ಪ್ರಕ್ರಿಯೆಗೆ ಅಡಚಣೆ ಮಾಡುವ ಕಾನೂನು ತರಲು ಹೊರಟಿರುವ ಇವರು ಸಂವಿಧಾನ ವಿರೋಧಿಗಳು. ಇಂಥಹ ಕಾನೂನು ತರಲು ಹೋಗಿ ಹಿಂದೆ ನ್ಯಾಯಲಾಯಗಳಲ್ಲಿ ಸೋಲು ಕಂಡಿದ್ದಾರೆ. ಇದರ ಹಣೆ ಬರಹವೂ ಅಷ್ಟೇ, ಕಾನೂನಿನ ಹೋರಾಟದಲ್ಲಿ ನಿಲ್ಲುವುದಿಲ್ಲ ಎಂದು ಅವರು ಪ್ರತಿಪಾದಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.