
ಹಾವೇರಿ, 14 ಆಗಸ್ಟ್ (ಹಿ.ಸ.):
ಆ್ಯಂಕರ್:ರಾಜ್ಯದಲ್ಲಿ ಮತ್ತೆ ಭಯೋತ್ಪಾದಕ ಸಂಘಟನೆಗಳ ಸ್ಲೀಪರ್ ಸೆಲ್‌ಗಳು ಸಕ್ರಿಯಗೊಳ್ಳುತ್ತಿದ್ದು, ಹೊಸ ನೇಮಕಾತಿ ನಡೆಯುತ್ತಿರುವ ಬಗ್ಗೆ ಗುಪ್ತಚರ ಮಾಹಿತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಾವಣಗೆರೆ ಹಾಗೂ ಕಲಬುರಗಿಯಲ್ಲಿ ಉಗ್ರರ ಬಂಧನವಾಗಿರುವುದನ್ನು ಉಲ್ಲೇಖಿಸಿ, ರಾಜ್ಯದಲ್ಲಿ ಭದ್ರತಾ ವ್ಯವಸ್ಥೆ ಬಗ್ಗೆ ಗಂಭೀರ ಪ್ರಶ್ನೆಗಳು ಮೂಡಿವೆ ಎಂದರು.
ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 15ಕ್ಕೂ ಹೆಚ್ಚು ಉಗ್ರರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಆದರೆ ಈಗ ರಾಜ್ಯ ಪೊಲೀಸರಿಗೆ ಮಾಹಿತಿ ಇದ್ದರೂ ರಾಜಕೀಯ ಒತ್ತಡ ಹಾಗೂ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ದಿಟ್ಟ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ರಾಜ್ಯಕ್ಕೆ ಪ್ರವೇಶಿಸಿ ಉಗ್ರರನ್ನು ಬಂಧಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.
ದೇಶದ ಭದ್ರತೆ ವಿಚಾರದಲ್ಲಿ ಸರ್ಕಾರ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು. ಭಯೋತ್ಪಾದಕರಿಗೆ ರಾಜ್ಯವು ‘ಸುರಕ್ಷಿತ ತಾಣ’ವಾಗದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬೊಮ್ಮಾಯಿ ಆಗ್ರಹಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.