
ಮೆಲ್ಬೋರ್ನ್, 09 ಜುಲೈ (ಹಿ.ಸ.):
ಆ್ಯಂಕರ್:ಜಾಗತಿಕ ಅನಿಶ್ಚಿತತೆ, ಪೂರೈಕೆ ಸರಪಳಿಯ ವ್ಯತ್ಯಯ ಹಾಗೂ ಇಂಧನ ಬಿಕ್ಕಟ್ಟಿನ ನಡುವೆಯೂ ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಾಸಾರ್ಹ ಹಾಗೂ ಸಹಜ ಪಾಲುದಾರ ರಾಷ್ಟ್ರಗಳಾಗಿ ಹೊರಹೊಮ್ಮಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮೆಲ್ಬೋರ್ನ್‌ನಲ್ಲಿ ನಡೆದ 'ಆರ್ಥಿಕ ಮಾರ್ಗಸೂಚಿ ವ್ಯವಹಾರ ಸ್ವಾಗತ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶುದ್ಧ ಇಂಧನ, ಅಣುಶಕ್ತಿ, ಪ್ರಮುಖ ಖನಿಜಗಳು, ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್, ಮೂಲಸೌಕರ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಉಭಯ ರಾಷ್ಟ್ರಗಳ ಸಹಕಾರವನ್ನು ಮತ್ತಷ್ಟು ವಿಸ್ತರಿಸುವಂತೆ ಕರೆ ನೀಡಿದರು. ಭಾರತ ಮತ್ತು ಆಸ್ಟ್ರೇಲಿಯಾ ಜಾಗತಿಕ ಸಮಸ್ಯೆಗಳಿಗೆ ಜಂಟಿಯಾಗಿ ಪರಿಹಾರಗಳನ್ನು ರೂಪಿಸುವ ಸಾಮರ್ಥ್ಯ ಹೊಂದಿವೆ ಎಂದು ಅವರು ಹೇಳಿದರು.
2022ರಲ್ಲಿ ಜಾರಿಗೆ ಬಂದ ಭಾರತ-ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ (ಇಸಿಟಿಎ) ಉಭಯ ರಾಷ್ಟ್ರಗಳ ಆರ್ಥಿಕ ಸಂಬಂಧಗಳಿಗೆ ಹೊಸ ಬಲ ನೀಡಿದೆ. ಈ ಒಪ್ಪಂದದ ನಂತರ ಭಾರತದಿಂದ ಆಸ್ಟ್ರೇಲಿಯಾಗೆ ರಫ್ತು ದ್ವಿಗುಣಗೊಂಡಿದ್ದು, ಎರಡೂ ದೇಶಗಳ ಉದ್ಯಮಿಗಳಿಗೆ ಹೊಸ ಮಾರುಕಟ್ಟೆಗಳ ಅವಕಾಶ ದೊರೆತಿದೆ ಎಂದು ಮೋದಿ ತಿಳಿಸಿದರು. ಸಮಗ್ರ ಆರ್ಥಿಕ ಸಹಕಾರ ಒಪ್ಪಂದ (ಸಿಇಸಿಎ)ವನ್ನು ಶೀಘ್ರದಲ್ಲೇ ಅಂತಿಮಗೊಳಿಸುವ ಅಗತ್ಯವನ್ನೂ ಅವರು ಒತ್ತಿ ಹೇಳಿದರು.
2030ರೊಳಗೆ 500 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹಾಗೂ 2070ರೊಳಗೆ ಶೂನ್ಯ ನಿವ್ವಳ ಕಾರ್ಬನ್ ಹೊರಸೂಸುವಿಕೆ ಗುರಿಯನ್ನು ಭಾರತ ಹೊಂದಿದೆ ಎಂದು ಪ್ರಧಾನಿ ಹೇಳಿದರು. ಹಸಿರು ಹೈಡ್ರೋಜನ್, ಸೌರ, ಪವನ ಹಾಗೂ ಜಲವಿದ್ಯುತ್ ಯೋಜನೆಗಳಲ್ಲಿ ಆಸ್ಟ್ರೇಲಿಯಾದ ತಂತ್ರಜ್ಞಾನ, ಬಂಡವಾಳ ಮತ್ತು ಸಂಪನ್ಮೂಲಗಳು ಭಾರತದ ಇಂಧನ ಪರಿವರ್ತನೆಗೆ ಮಹತ್ವದ ನೆರವಾಗಲಿವೆ ಎಂದರು.
ಇತ್ತೀಚೆಗೆ ಭಾರತದಲ್ಲಿ ಖಾಸಗಿ ವಲಯಕ್ಕೆ ಅಣುಶಕ್ತಿ ಕ್ಷೇತ್ರವನ್ನು ತೆರೆಯಲಾಗಿದ್ದು, 2047ರೊಳಗೆ 100 ಗಿಗಾವ್ಯಾಟ್ ಅಣುಶಕ್ತಿ ಉತ್ಪಾದನೆ ಗುರಿ ಹೊಂದಲಾಗಿದೆ. ಆಸ್ಟ್ರೇಲಿಯಾದ ಅಪಾರ ಯುರೇನಿಯಂ ಸಂಪನ್ಮೂಲಗಳು ಈ ಕ್ಷೇತ್ರದಲ್ಲಿ ಉಭಯ ರಾಷ್ಟ್ರಗಳ ಐತಿಹಾಸಿಕ ಸಹಕಾರಕ್ಕೆ ಅವಕಾಶ ಕಲ್ಪಿಸುತ್ತವೆ ಎಂದು ಮೋದಿ ತಿಳಿಸಿದರು.
ಭಾರತದಲ್ಲಿ ಬಂದರುಗಳು, ವಿಮಾನ ನಿಲ್ದಾಣಗಳು, ರಸ್ತೆ, ರೈಲು ಹಾಗೂ ನಗರ ಮೂಲಸೌಕರ್ಯ ಕ್ಷೇತ್ರಗಳಲ್ಲಿ ದೀರ್ಘಾವಧಿಯ ಹೂಡಿಕೆಗೆ ಅಪಾರ ಅವಕಾಶಗಳಿವೆ. ದೇಶದಲ್ಲಿ ಪ್ರತಿದಿನ ಸುಮಾರು 34 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ಹಾಗೂ 8 ಕಿಲೋಮೀಟರ್‌ಗಿಂತ ಹೆಚ್ಚು ಹೊಸ ರೈಲು ಮಾರ್ಗ ನಿರ್ಮಾಣವಾಗುತ್ತಿರುವುದು ಭಾರತದ ವೇಗ, ವ್ಯಾಪ್ತಿ ಮತ್ತು ಅಭಿವೃದ್ಧಿಗೆ ಸಾಕ್ಷಿಯಾಗಿದೆ ಎಂದರು.
ಕೃತಕ ಬುದ್ಧಿಮತ್ತೆ ಮಿಷನ್, ಕ್ವಾಂಟಂ ಮಿಷನ್ ಹಾಗೂ ಸೆಮಿಕಂಡಕ್ಟರ್ ಕಾರ್ಯಕ್ರಮಗಳಿಗೆ ಭಾರತ ಸರ್ಕಾರ 10 ಬಿಲಿಯನ್ ಅಮೆರಿಕನ್ ಡಾಲರ್‌ಗಿಂತ ಹೆಚ್ಚಿನ ನೆರವು ಒದಗಿಸಿದೆ ಎಂದು ಪ್ರಧಾನಿ ಹೇಳಿದರು. ದತ್ತಾಂಶ ಕೇಂದ್ರಗಳು, ಕೃತಕ ಬುದ್ಧಿಮತ್ತೆ, ಕ್ವಾಂಟಂ ತಂತ್ರಜ್ಞಾನ, ಸೆಮಿಕಂಡಕ್ಟರ್ ಹಾಗೂ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಭಾರತ-ಆಸ್ಟ್ರೇಲಿಯಾ ಸಹಭಾಗಿತ್ವದಿಂದ ಜಾಗತಿಕ ಮಟ್ಟದ ಪರಿಹಾರಗಳನ್ನು ಅಭಿವೃದ್ಧಿಪಡಿಸಬಹುದಾಗಿದೆ ಎಂದರು.
ಆಸ್ಟ್ರೇಲಿಯಾದ ನಿವೃತ್ತಿ ನಿಧಿಗಳು ಭಾರತದಲ್ಲಿ ಹೂಡಿಕೆ ಮಾಡಲು ಪ್ರಧಾನಿ ಆಹ್ವಾನ ನೀಡಿದರು. ಭಾರತ ಸುರಕ್ಷಿತ, ಸ್ಥಿರ ಮತ್ತು ದೀರ್ಘಕಾಲಿಕ ಹೂಡಿಕೆಗೆ ಅತ್ಯುತ್ತಮ ತಾಣವಾಗಿದ್ದು, ಹೂಡಿಕೆದಾರರ ವಿಶ್ವಾಸ ಹಾಗೂ ಬಂಡವಾಳದ ಬೆಳವಣಿಗೆಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಕ್ಷೇತ್ರದ ಸಹಕಾರವನ್ನು ಉಲ್ಲೇಖಿಸಿದ ಮೋದಿ, ಆಸ್ಟ್ರೇಲಿಯಾದ ಪ್ರಮುಖ ವಿಶ್ವವಿದ್ಯಾಲಯಗಳು ಗಿಫ್ಟ್ ಸಿಟಿಯಲ್ಲಿ ಕ್ಯಾಂಪಸ್‌ಗಳನ್ನು ಸ್ಥಾಪಿಸುತ್ತಿರುವುದು ಭಾರತದ ಮೇಲಿನ ವಿಶ್ವಾಸದ ಪ್ರತೀಕವಾಗಿದೆ ಎಂದರು. ವಿದ್ಯಾರ್ಥಿಗಳ ವಿನಿಮಯ ಕಾರ್ಯಕ್ರಮವನ್ನು ಪ್ರತಿಭಾ ಪಾಲುದಾರಿಕೆಯಾಗಿಸಲು ಒತ್ತು ನೀಡಬೇಕು ಎಂದು ಹೇಳಿದರು.
ಭಾರತದ ರಾಜ್ಯಗಳು ಹಾಗೂ ಆಸ್ಟ್ರೇಲಿಯಾದ ಪ್ರಾಂತ್ಯಗಳ ವಿಶೇಷ ಸಾಮರ್ಥ್ಯಗಳ ಆಧಾರದ ಮೇಲೆ ನೇರ ಆರ್ಥಿಕ ಸಹಭಾಗಿತ್ವ ರೂಪಿಸಬೇಕು ಎಂದು ಪ್ರಧಾನಿ ಸಲಹೆ ನೀಡಿದರು. ಪಶ್ಚಿಮ ಆಸ್ಟ್ರೇಲಿಯಾದ ಪ್ರಮುಖ ಖನಿಜ ಸಂಪನ್ಮೂಲಗಳನ್ನು ಒಡಿಶಾ ಹಾಗೂ ಗುಜರಾತ್‌ನ ಉತ್ಪಾದನಾ ಸಾಮರ್ಥ್ಯದೊಂದಿಗೆ, ಕ್ವೀನ್ಸ್‌ಲ್ಯಾಂಡ್ ಮತ್ತು ತಸ್ಮೇನಿಯಾದ ಶುದ್ಧ ಇಂಧನ ಪರಿಣತಿಯನ್ನು ಭಾರತದ ನವೀಕರಿಸಬಹುದಾದ ಇಂಧನ ಕಾರಿಡಾರ್‌ಗಳೊಂದಿಗೆ ಹಾಗೂ ನ್ಯೂ ಸೌತ್ ವೇಲ್ಸ್ ಮತ್ತು ವಿಕ್ಟೋರಿಯಾದ ಹಣಕಾಸು ಹಾಗೂ ನಾವೀನ್ಯತೆ ಸಾಮರ್ಥ್ಯವನ್ನು ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣದೊಂದಿಗೆ ಜೋಡಿಸುವ ಮೂಲಕ ಹೊಸ ಆರ್ಥಿಕ ಅವಕಾಶಗಳನ್ನು ಸೃಷ್ಟಿಸಬಹುದು ಎಂದು ಅವರು ಹೇಳಿದರು.
ಸಾಮಾನ್ಯ ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗೂ ಮುಕ್ತ ಮತ್ತು ಸಮಾವೇಶಿತ ಇಂಡೋ-ಪೆಸಿಫಿಕ್ ಪ್ರದೇಶದ ಸಾಮಾನ್ಯ ದೃಷ್ಟಿಕೋನದ ಆಧಾರದ ಮೇಲೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕಾರ್ಯತಂತ್ರದ ಪಾಲುದಾರಿಕೆ ನಿರಂತರವಾಗಿ ಬಲಗೊಳ್ಳುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಈ ಸಂವಾದವು ಉಭಯ ರಾಷ್ಟ್ರಗಳ ನಡುವೆ ಹೊಸ ಆಲೋಚನೆಗಳು, ಹೊಸ ಹೂಡಿಕೆಗಳು ಹಾಗೂ ಹೊಸ ವ್ಯಾಪಾರ ಪಾಲುದಾರಿಕೆಗಳಿಗೆ ದಾರಿ ಮಾಡಿಕೊಡಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.