
ನವದೆಹಲಿ, 09 ಜುಲೈ (ಹಿ.ಸ.):
ಆ್ಯಂಕರ್:
ಗಂಗಾ ಹಾಗೂ ಅದರ ಉಪನದಿಗಳ ಪುನರುಜ್ಜೀವನಕ್ಕಾಗಿ ಕೇಂದ್ರ ಸರ್ಕಾರ ಪ್ರಕೃತಿ ಆಧಾರಿತ ಪರಿಹಾರಗಳಿಗೆ ಹೆಚ್ಚಿನ ಒತ್ತು ನೀಡಿದ್ದು, ದೆಹಲಿಯ ಯಮುನಾ ನದಿಗೆ ಸೇರುವ ಶಾಸ್ತ್ರಿ ಪಾರ್ಕ್ ಮತ್ತು ಕೈಲಾಶ್ ನಗರ ಚರಂಡಿಗಳಲ್ಲಿ ಎರಡು ಪ್ರಾಯೋಗಿಕ ಯೋಜನೆಗಳನ್ನು ಆರಂಭಿಸಿದೆ. ಈ ಯೋಜನೆಗಳ ಮೂಲಕ ಮಾಲಿನ್ಯಯುಕ್ತ ನಗರ ಚರಂಡಿ ನೀರನ್ನು ಕೃತಕ ಜೌಗು ಪ್ರದೇಶಗಳ (ಕನ್ಸ್ಟ್ರಕ್ಟೆಡ್ ವೆಟ್‌ಲ್ಯಾಂಡ್) ಮೂಲಕ ಶುದ್ಧೀಕರಿಸುವ ಮಾದರಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಕೇಂದ್ರ ಜಲಶಕ್ತಿ ಸಚಿವಾಲಯ ಗುರುವಾರ ಈ ಕುರಿತು ಮಾಹಿತಿ ನೀಡಿದ್ದು, ನದಿ ಪುನರುಜ್ಜೀವನಕ್ಕೆ ಕೇವಲ ಒಳಚರಂಡಿ ಶುದ್ಧೀಕರಣ ಘಟಕಗಳು (ಎಸ್‌ಟಿಪಿ) ಮತ್ತು ಒಳಚರಂಡಿ ಜಾಲ ಮಾತ್ರ ಸಾಕಾಗುವುದಿಲ್ಲ ಎಂದು ತಿಳಿಸಿದೆ. ಆದ್ದರಿಂದ ರಾಷ್ಟ್ರೀಯ ಸ್ವಚ್ಛ ಗಂಗಾ ಮಿಷನ್ (ಎನ್‌ಎಂಸಿಜಿ) ಪರಿಸರ ಸ್ನೇಹಿ ಮತ್ತು ದೀರ್ಘಕಾಲಿಕ ಪರಿಹಾರಗಳನ್ನು ತನ್ನ ಕಾರ್ಯತಂತ್ರದ ಭಾಗವನ್ನಾಗಿ ಮಾಡಿಕೊಂಡಿದೆ.
ಸಚಿವಾಲಯದ ಪ್ರಕಾರ, ಸುಸ್ಥಿರ ನದಿ ಪುನರುಜ್ಜೀವನ ಕಾರ್ಯಕ್ರಮದಡಿ ನಗರ ಚರಂಡಿಗಳಲ್ಲೇ (ಇನ್-ಸಿಟು) ನೀರು ಶುದ್ಧೀಕರಣಕ್ಕಾಗಿ ಕೃತಕ ಜೌಗು ಪ್ರದೇಶ ಆಧಾರಿತ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಇದರೊಂದಿಗೆ ಸಂಶೋಧನೆ, ನಾವೀನ್ಯತೆ ಹಾಗೂ ಅಧಿಕಾರಿಗಳ ಸಾಮರ್ಥ್ಯ ವೃದ್ಧಿಗೂ ಒತ್ತು ನೀಡಲಾಗುತ್ತಿದೆ.
ದೆಹಲಿ ಯಮುನಾ ನದಿಗೆ ಸೇರುವ ಶಾಸ್ತ್ರಿ ಪಾರ್ಕ್ ಮತ್ತು ಕೈಲಾಶ್ ನಗರ ಚರಂಡಿಗಳಲ್ಲಿ ನಿರ್ಮಾಣವಾಗುತ್ತಿರುವ ಈ ಎರಡು ಯೋಜನೆಗಳು ಒಟ್ಟಾರೆ ದಿನಕ್ಕೆ ಸುಮಾರು 10 ಮಿಲಿಯನ್ ಲೀಟರ್ (10 ಎಂಎಲ್‌ಡಿ) ತ್ಯಾಜ್ಯ ನೀರನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿರಲಿವೆ. ಕಡಿಮೆ ಇಂಧನ ಬಳಕೆ, ಹವಾಮಾನ ಸ್ನೇಹಿ ಹಾಗೂ ದೀರ್ಘಕಾಲಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿರುವ ಈ ಯೋಜನೆಗಳು ನಗರ ಚರಂಡಿ ನಿರ್ವಹಣೆಯಲ್ಲಿ ಹೊಸ ಮಾದರಿಯಾಗಲಿವೆ.
ಸಾಂಪ್ರದಾಯಿಕ ತ್ಯಾಜ್ಯ ನೀರು ಶುದ್ಧೀಕರಣ ವ್ಯವಸ್ಥೆಗಳಿಗಿಂತ ಭಿನ್ನವಾಗಿ, ಈ ಯೋಜನೆಗಳಲ್ಲಿ ಭಾರೀ ಯಾಂತ್ರಿಕ ವ್ಯವಸ್ಥೆಗಳ ಅವಲಂಬನೆ ಕಡಿಮೆ ಇರುತ್ತದೆ. ನೀರಿನ ಹರಿವನ್ನು ನಿಯಂತ್ರಿಸಲು ಕಲ್ಲಿನ ರಚನೆಗಳು, ಘನ ತ್ಯಾಜ್ಯ ವಿಲೇವಾರಿಗಾಗಿ ರಾಕ್ ಫಿಲ್ಟರ್‌ಗಳು, ಪೋಷಕಾಂಶಗಳನ್ನು ಹೀರಿಕೊಳ್ಳಲು ಜಲಸಸ್ಯಗಳು ಹಾಗೂ ಫೈಟೋ-ರಿಮಿಡಿಯೇಷನ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಇದರಿಂದ ಮಾಲಿನ್ಯಕಾರಕಗಳು, ಹೆಚ್ಚುವರಿ ಪೋಷಕಾಂಶಗಳು ಮತ್ತು ಕೆಲವು ಭಾರೀ ಲೋಹಗಳ ಪ್ರಮಾಣ ಕಡಿಮೆಯಾಗಲಿದ್ದು, ನೀರಿನಲ್ಲಿನ ಕರಗಿದ ಆಮ್ಲಜನಕದ ಪ್ರಮಾಣ ಹೆಚ್ಚಿ ನದಿಯ ಜೀವವೈವಿಧ್ಯವೂ ಸುಧಾರಿಸುವ ನಿರೀಕ್ಷೆಯಿದೆ.
ಪ್ರಸ್ತುತ ಕೈಲಾಶ್ ನಗರ ಚರಂಡಿಯಲ್ಲಿ ಹೂಳು ಮತ್ತು ಕೆಸರನ್ನು ತೆರವುಗೊಳಿಸುವ ಕಾರ್ಯ ಪೂರ್ಣಗೊಂಡಿದ್ದು, ಇಟ್ಟಿಗೆ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಮುಂದಿನ ಹಂತದಲ್ಲಿ ರಾಕ್ ಫಿಲ್ಟರ್ ಅಳವಡಿಸಲಾಗುತ್ತದೆ. ಶಾಸ್ತ್ರಿ ಪಾರ್ಕ್ ಚರಂಡಿಯಲ್ಲೂ ಪ್ರಾಥಮಿಕ ಸ್ವಚ್ಛತಾ ಕಾರ್ಯಗಳು ನಡೆಯುತ್ತಿದ್ದು, ಬಳಿಕ ಕಲ್ಲಿನ ರಚನೆಗಳು, ಶೋಧನಾ ವ್ಯವಸ್ಥೆ ಮತ್ತು ಜಲಸಸ್ಯಗಳನ್ನು ಅಳವಡಿಸಲಾಗುತ್ತದೆ.
ಈ ಯೋಜನೆಗಳು ಗಂಗಾ ನದಿ ಕಣಿವೆಯ ನಗರ ಚರಂಡಿ ನಿರ್ವಹಣೆಗೆ ಕಡಿಮೆ ವೆಚ್ಚದ, ವಿಸ್ತರಿಸಬಹುದಾದ ಹಾಗೂ ದೇಶದ ಇತರ ಭಾಗಗಳಲ್ಲಿಯೂ ಅನುಸರಿಸಬಹುದಾದ ಮಾದರಿಯಾಗಲಿವೆ ಎಂದು ಸಚಿವಾಲಯ ತಿಳಿಸಿದೆ.
ಇದೇ ವೇಳೆ, ನದಿ ಪುನರುಜ್ಜೀವನ ಕ್ಷೇತ್ರದಲ್ಲಿ ತಾಂತ್ರಿಕ ಸಾಮರ್ಥ್ಯ ವೃದ್ಧಿಸಲು 2025ರ ಆಗಸ್ಟ್‌ನಿಂದ 2026ರ ಮಾರ್ಚ್‌ವರೆಗೆ ಆರು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, 100ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ತಜ್ಞರು ಇದರ ಪ್ರಯೋಜನ ಪಡೆದಿದ್ದಾರೆ.
ಇದಾದ ಬಳಿಕ ಗಂಗೆಯ ಉಪನದಿಯಾದ ಕಾಳಿ ನದಿಯ ಪುನರುಜ್ಜೀವನಕ್ಕಾಗಿ ಉತ್ತರ ಪ್ರದೇಶದ ಖತೌಲಿಯಲ್ಲಿ ಮತ್ತೊಂದು ಕೃತಕ ಜೌಗು ಪ್ರದೇಶ ಯೋಜನೆ ಆರಂಭಿಸಲಾಗುತ್ತಿದೆ. ಗೃಹ ಹಾಗೂ ಕೈಗಾರಿಕಾ ತ್ಯಾಜ್ಯದಿಂದ ಉಂಟಾಗುವ ಮಾಲಿನ್ಯವನ್ನು ಮೂಲ ಹಂತದಲ್ಲೇ ನಿಯಂತ್ರಿಸಿ ನದಿಯ ನೀರಿನ ಗುಣಮಟ್ಟ ಹಾಗೂ ಪರಿಸರ ವ್ಯವಸ್ಥೆಯನ್ನು ಸುಧಾರಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.