
ನವದೆಹಲಿ, 09 ಜುಲೈ (ಹಿ.ಸ.):
ಆ್ಯಂಕರ್:
ಗಲ್ವಾನ್ ಘರ್ಷಣೆಯ ಬಳಿಕ ಕೇಂದ್ರ ಸರ್ಕಾರ ಚೀನಾದ ಕುರಿತು ಮೃದು ಧೋರಣೆ ಅನುಸರಿಸಿದ್ದು, ಇದರ ಪರಿಣಾಮವಾಗಿ ಭಾರತದ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಚೀನಾದ ಮೇಲಿನ ಆರ್ಥಿಕ ಅವಲಂಬನೆ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಗುರುವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಗಲ್ವಾನ್‌ನಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಕ್ಕೆ ಕ್ಲೀನ್ ಚಿಟ್ ನೀಡಿದರು ಎಂದು ಖರ್ಗೆ ಟೀಕಿಸಿದ್ದಾರೆ. ದೇಶದ ಯೋಧರು ಅತ್ಯುನ್ನತ ತ್ಯಾಗ ಮಾಡಿದ್ದರೂ, ಕೇಂದ್ರ ಸರ್ಕಾರ ರಾಷ್ಟ್ರದ ಹಿತಾಸಕ್ತಿಗಳ ವಿಷಯದಲ್ಲಿ ರಾಜಿ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ.
2025-26ರ ವೇಳೆಗೆ ಚೀನಾದಿಂದ ಭಾರತದ ಆಮದು ಗಲ್ವಾನ್ ಘಟನೆಯ ನಂತರ ಶೇಕಡಾ 101.81ರಷ್ಟು ಏರಿಕೆಯಾಗಿದ್ದು, ಉಭಯ ದೇಶಗಳ ನಡುವಿನ ವ್ಯಾಪಾರ ಕೊರತೆ 112.1 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ಖರ್ಗೆ ಹೇಳಿದ್ದಾರೆ.
ಭಾರತದ ಪ್ರತಿಜೀವಕ ಔಷಧಗಳ (ಆಂಟಿಬಯೋಟಿಕ್ಸ್) ಆಮದುಗಳಲ್ಲಿ ಶೇ.86ರಷ್ಟು ಹಾಗೂ ಎಪಿಐ, ಬಲ್ಕ್ ಡ್ರಗ್ ಮತ್ತು ಔಷಧ ಮಧ್ಯವರ್ತಿ ವಸ್ತುಗಳ ಆಮದುಗಳಲ್ಲಿ ಶೇ.74ರಷ್ಟು ಪಾಲು ಚೀನಾದದ್ದೇ ಆಗಿದೆ ಎಂದು ಅವರು ತಿಳಿಸಿದ್ದಾರೆ.
ವಿದ್ಯುತ್ ಚಾಲಿತ ವಾಹನ (ಇವಿ) ಕ್ಷೇತ್ರದಲ್ಲಿಯೂ ಭಾರತದ ಶೇ.66ರಷ್ಟು ಇವಿ ಬಿಡಿಭಾಗಗಳು ಚೀನಾದಿಂದಲೇ ಬರುತ್ತಿವೆ. ಜೊತೆಗೆ ಭಾರತೀಯ ಇವಿಗಳಲ್ಲಿ ಬಳಸುವ ಸುಮಾರು ಶೇ.75ರಷ್ಟು ಲಿಥಿಯಂ-ಐಯಾನ್ ಬ್ಯಾಟರಿಗಳು ಆಮದು ಮಾಡಿಕೊಳ್ಳಲಾಗುತ್ತಿದ್ದು, ಅವುಗಳಲ್ಲಿ ಹೆಚ್ಚಿನವು ಚೀನಾದಿಂದ ಬರುತ್ತಿವೆ ಎಂದು ಆರೋಪಿಸಿದ್ದಾರೆ. 2025-26ರಲ್ಲಿ ಭಾರತ ಶೇ.93ರಷ್ಟು ಸ್ಥಿರ ಕಾಂತಗಳನ್ನು (ಪರ್ಮನೆಂಟ್ ಮ್ಯಾಗ್ನೆಟ್) ಚೀನಾದಿಂದ ಆಮದು ಮಾಡಿಕೊಂಡಿದೆ ಎಂದೂ ತಿಳಿಸಿದ್ದಾರೆ.
ಸೌರಶಕ್ತಿ ಕ್ಷೇತ್ರದಲ್ಲಿಯೂ 2025-26ರಲ್ಲಿ ಭಾರತ ಆಮದು ಮಾಡಿಕೊಂಡ ಅನ್ಡಿಫ್ಯೂಸ್ಡ್ ಸಿಲಿಕಾನ್ ವೇಫರ್‌ಗಳಲ್ಲಿ ಶೇ.99ಕ್ಕಿಂತ ಹೆಚ್ಚು ಚೀನಾದಿಂದ ಬಂದಿವೆ ಎಂದು ಖರ್ಗೆ ಹೇಳಿದ್ದಾರೆ. ಆತ್ಮನಿರ್ಭರ ಭಾರತದ ಮಾತು ಹೇಳುವ ಸರ್ಕಾರ ಸೌರಶಕ್ತಿ ಕ್ಷೇತ್ರದಲ್ಲಿಯೂ ಚೀನಾದ ಮೇಲೆಯೇ ಹೆಚ್ಚಿನ ಅವಲಂಬನೆ ಹೊಂದಿದೆ ಎಂದು ಟೀಕಿಸಿದ್ದಾರೆ.
ಇದಲ್ಲದೆ, ನಾಲ್ಕು ಚೀನಾದ ಕಂಪನಿಗಳಿಗೆ ಸರ್ಕಾರಿ ವಿದ್ಯುತ್ ಯೋಜನೆಗಳ ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ನೀಡುವ ಮೂಲಕ ಕೇಂದ್ರ ಸರ್ಕಾರ ಚೀನಾಕ್ಕೆ ಹೊಸ ಅವಕಾಶಗಳನ್ನು ಕಲ್ಪಿಸಿದೆ ಎಂದು ಆರೋಪಿಸಿದ್ದಾರೆ. ನಾಗರಿಕ ಸಮಾಜದ ವರದಿಗಳ ಪ್ರಕಾರ ಅರುಣಾಚಲ ಪ್ರದೇಶ ಹಾಗೂ ಲಡಾಖ್ ಭಾಗಗಳಲ್ಲಿ ಚೀನಾ ಅತಿಕ್ರಮಣ ಮುಂದುವರಿಸಿದೆ ಎಂದೂ ಅವರು ಹೇಳಿದ್ದಾರೆ.
ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ಪಾಕಿಸ್ತಾನದ ಚಟುವಟಿಕೆಗಳಲ್ಲಿ ಚೀನಾದ ಪಾತ್ರವಿದೆ ಎಂಬುದನ್ನು ಸೇನೆಯ ಉಪ ಮುಖ್ಯಸ್ಥರು ಉಲ್ಲೇಖಿಸಿದ್ದರು ಎಂದು ಹೇಳಿರುವ ಖರ್ಗೆ, ಗಲ್ವಾನ್ ನಂತರ ಕೇಂದ್ರ ಸರ್ಕಾರದ ನೀತಿಗಳಿಂದ ಚೀನಾ ಭಾರತದ ಹಲವು ಪ್ರಮುಖ ಕ್ಷೇತ್ರಗಳಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.