
ಗದಗ, 06 ಜುಲೈ (ಹಿ.ಸ.)
ಆ್ಯಂಕರ್:- ರೈತರ ಆದಾಯ ಮತ್ತು ಬದುಕು ಸ್ಥಿರವಾಗಬೇಕಾದರೆ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕವಾಗಿ ಬೆಲೆ ನಿಗದಿ ಮಾಡುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ದಿ. ಶಿರಹಟ್ಟಿ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ ಶಿರಹಟ್ಟಿಯ ನೂತನ ಕಟ್ಟಡದ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದರು.
ಕರ್ನಾಟಕದ ಸಹಕಾರಿ ರಂಗಕ್ಕೆ ಗದಗ್ ಜಿಲ್ಲೆಯ ಕೊಡುಗೆ ಅಪಾರವಾಗಿದ್ದು, ಇದು ಸಹಕಾರಿ ಚಳುವಳಿಯ ಉಗಮ ಸ್ಥಾನವಾಗಿದೆ. ರೈತರ ಹಿತ ಕಾಯಲು ಸಹಕಾರಿ ಸಂಘಗಳ ಅಗತ್ಯವಿದೆ: ರೈತರು ತಾವು ಬೆಳೆದ ಬೆಳೆಗಳನ್ನು ಯಾವುದೇ ಮಧ್ಯವರ್ತಿಗಳ ಕಾಟವಿಲ್ಲದೆ, ಕಮಿಷನ್ ಇಲ್ಲದೆ ನೇರವಾಗಿ ಮಾರಾಟ ಮಾಡಿ ಉತ್ತಮ ಬೆಲೆ ಪಡೆಯಲಿ ಎಂಬ ಸದುದ್ದೇಶದಿಂದ ಈ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಗಳನ್ನು ಸ್ಥಾಪಿಸಲಾಗಿತ್ತು. ಎಪಿಎಂಸಿ ಹಾಗೂ ಈ ಸಹಕಾರಿ ಸಂಸ್ಥೆಗಳು ರೈತರ ಬೆನ್ನೆಲುಬಾಗಿ ನಿಲ್ಲಲು ಹುಟ್ಟಿಕೊಂಡವು ಎಂದರು.
ಸಹಕಾರಿ ರಂಗದ ಸದ್ಯದ ಸ್ಥಿತಿಗೆ ಕಳಕಳಿ:
ಇಡೀ ರಾಜ್ಯದಲ್ಲಿ ಇಂದು ಇಂತಹ ಸಹಕಾರಿ ಸಂಸ್ಥೆಗಳ ಪರಿಸ್ಥಿತಿ ಮೊದಲಿನಂತಿಲ್ಲ. ಅನೇಕ ಕಡೆಗಳಲ್ಲಿ ಖರೀದಿದಾರರಿಂದ ರೈತರಿಗೆ ಸಕಾಲದಲ್ಲಿ ಹಣ ಸಂದಾಯವಾಗದ ಕಾರಣ ಸಂಸ್ಥೆಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ.
ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ಪ್ರಮುಖ ಭಾಗಗಳಲ್ಲಿ ಇವುಗಳ ಸ್ಥಿತಿ ಸುಧಾರಿಸಬೇಕಿದೆ. ಆದರೆ, ಗದಗ ಜಿಲ್ಲೆಯು ಮೊದಲಿನಿಂದಲೂ ಸಹಕಾರಿ ರಂಗದಲ್ಲಿ ಮುಂಚೂಣಿಯಲ್ಲಿದ್ದು, ರೈತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲೂ ಈ ಸಂಸ್ಥೆಯು ರೈತರಿಗೆ ಇನ್ನಷ್ಟು ಹೆಚ್ಚಿನ ಸೇವೆ ನೀಡುವಂತಾಗಲಿ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯು ಸಹಕಾರಿ ರಂಗದ ಉಗಮ ಸ್ಥಾನವಾಗಿದೆ. ಇಲ್ಲಿನ ಸಹಕಾರಿ ಸಂಸ್ಥೆಗಳು ಕೇವಲ ಅಸ್ತಿತ್ವದಲ್ಲಿ ಇರುವುದಷ್ಟೇ ಅಲ್ಲದೆ, ರೈತರ ಕಲ್ಯಾಣಕ್ಕಾಗಿ ಸಕ್ರಿಯವಾಗಿ ಕೆಲಸ ಮಾಡಬೇಕು ಮತ್ತು ಆರ್ಥಿಕವಾಗಿ ಲಾಭದಾಯಕ ಹಾಗೂ ಆರೋಗ್ಯಕರವಾಗಿ ಬೆಳೆಯಬೇಕು ಎನ್ನುವುದು ನನ್ನ ಆಶಯವಾಗಿದೆ.
ರಾಜ್ಯದಲ್ಲಿ ಹಲವು ಸಹಕಾರಿ ಸಂಸ್ಥೆಗಳು ಸಂಕಷ್ಟದಲ್ಲಿರುವ ಇಂದಿನ ಸಂದರ್ಭದಲ್ಲಿ ಶಿರಹಟ್ಟಿಯ ಟಿ.ಎ.ಪಿ.ಸಿ.ಎಂ.ಎಸ್. ಸಂಸ್ಥೆಯು ಮತ್ತೆ ಎದ್ದು ನಿಂತಿರುವುದು ಶ್ಲಾಘನೀಯ ಎಂದ ಬೊಮ್ಮಾಯಿ ಅವರು, ಸಂಸ್ಥೆಯ ಪುನಶ್ಚೇತನಕ್ಕೆ ಕಾರಣವಾದ ದಿನಗಳನ್ನು ಸ್ಮರಿಸಿದರು. ನಾನು ಗೃಹ ಸಚಿವನಾಗಿದ್ದಾಗ ಈ ಭಾಗದ ಪ್ರಮುಖರು ಬಂದು ಸಂಸ್ಥೆಯ ಪುನಶ್ಚೇತನಕ್ಕೆ ಸಹಕಾರ ನೀಡುವಂತೆ ಕೋರಿದ್ದರು. ಆಗ ಯಾವುದೇ ಹೆಚ್ಚಿನ ಪ್ರಶ್ನೆಗಳನ್ನು ಕೇಳದೆ ತಕ್ಷಣವೇ ಸಂಸ್ಥೆಯನ್ನು ಪುನಶ್ಚೇತನಗೊಳಿಸಲು ಮಾಡಲು ಆದೇಶ ಮಾಡಲಾಯಿತು.
ತದನಂತರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶಿವಕುಮಾರ್ ಗೌಡ ಪಾಟೀಲ್ ಅವರು ಬೆನ್ನೆಲುಬಾಗಿ ನಿಂತು, ಶೇರ್ ಮೊತ್ತವನ್ನು ಸಂಗ್ರಹಿಸಿ ಹಾಗೂ ಮಾರ್ಕೆಟಿಂಗ್ ಫೆಡರೇಶನ್ ನೆರವು ಪಡೆದು ಸಾಲದ ಸೌಲಭ್ಯಗಳನ್ನು ಒದಗಿಸಿಕೊಟ್ಟರು ಎಂದು ಹೇಳಿದರು.
ಸ್ವಾವಲಂಬನೆಗೆ ಒತ್ತು ನೀಡಿ
ಸಂಸ್ಥೆಯು ಇನ್ನು ಮುಂದೆ ಸ್ವಾವಲಂಬನೆಯ ಹಾದಿಯಲ್ಲಿ ಸಾಗಬೇಕು ಎಂದು ಕಿವಿಮಾತು ಹೇಳಿದ ಅವರು, ಸಂಸ್ಥೆಗೆ ಸರ್ಕಾರದಿಂದಲೋ ಅಥವಾ ಬೇರೆ ಕಡೆಯಿಂದಲೋ ಅನುದಾನ ತಂದು ಮುಂದಿನ ಮಹಡಿಗಳನ್ನು ನಿರ್ಮಿಸುವುದಕ್ಕಿಂತ, ಸಂಸ್ಥೆಯು ವ್ಯಾಪಾರ-ವ್ಯವಹಾರಗಳನ್ನು ಹೆಚ್ಚಿಸಿಕೊಂಡು, ಲಾಭ ಗಳಿಸಿ, ಆ ಆದಾಯದ ಹಣದಿಂದಲೇ ಮುಂದಿನ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಕು. ಬೇರೆಯವರ ಹಣದಲ್ಲಿ ಕಟ್ಟಡ ಕಟ್ಟುವುದು ಸಾಧನೆಯಲ್ಲ, ಸ್ವಂತ ದುಡಿಮೆಯಿಂದ ಬೆಳೆಯುವುದೇ ನಿಜವಾದ ಯಶಸ್ಸು ಎಂದು ಅಭಿಪ್ರಾಯಪಟ್ಟರು.
ರೈತರಿಗೆ ಮತ್ತು ಸಂಸ್ಥೆಗೆ ಬೆಂಬಲ
ರೈತರು ಮತ್ತು ಸಂಸ್ಥೆಯ ವ್ಯವಹಾರಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಬಂಡವಾಳ ಹಾಗೂ ಸಾಲದ ಸೌಲಭ್ಯಗಳನ್ನು ಶೇಕಡಾ 1 ರ ಬಡ್ಡಿದರದಲ್ಲಿ ಒದಗಿಸಿಕೊಡಲು ತಾವು ಸದಾ ಸಿದ್ಧರಿರುವುದಾಗಿ ಭರವಸೆ ನೀಡಿದ ಬೊಮ್ಮಾಯಿ ಅವರು, ಸಂಸ್ಥೆಯು ಹೆಚ್ಚಿನ ವ್ಯವಹಾರ ನಡೆಸಿ ಲಾಭದಾಯಕವಾಗಿ ಹೊರಹೊಮ್ಮಲಿ ಎಂದು ಹಾರೈಸಿದರು.
ಬ್ಯಾಂಕುಗಳು ಮತ್ತು ಸಹಕಾರ ಸಂಸ್ಥೆಗಳ ಮೂಲಕ ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸಿ ಅವರಲ್ಲಿ ಅರಿವು ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕು, ನಾನು ಯಾವಾಗಲೂ ದುಡಿಯುವ ಜನರಿಗೆ ಸಹಾಯ ಮಾಡುತ್ತಾ ಬಂದಿದ್ದೇನೆ. ದುಡಿಮೆಯನ್ನೇ ನಾವೆಲ್ಲ ಲಾಭ ಮಾಡಿಕೊಳ್ಳಬೇಕು ಎಂದರೆ ಅದು ಸಾಧ್ಯವಿಲ್ಲ. ಆದರೆ ಈಗಿನ ಸರ್ಕಾರ ಬಂದ ತಕ್ಷಣವೇ ಎಲ್ಲದಕ್ಕೂ ಗ್ಯಾರಂಟಿಗಳನ್ನು ನೀಡಿದೆ ಎಂದು ಮಾರ್ಮಿಕವಾಗಿ ನುಡಿದರು.
ಮುಂದುವರಿದು ಚೀನಾದ ಹಳೆಯ ಗಾದೆಯೊಂದನ್ನು ಉದಾಹರಿಸಿದ ಅವರು, ಒಬ್ಬನಿಗೆ ಮೀನು ಹಿಡಿದು ಕೊಟ್ಟರೆ ಅದು ಕೇವಲ ಒಂದು ದಿನದ ಆಹಾರವಾಗುತ್ತದೆ. ಅದೇ ಅವನಿಗೆ ಮೀನು ಹಿಡಿಯುವುದನ್ನು ಕಲಿಸಿಕೊಟ್ಟರೆ, ಅವನು ಬದುಕಿನುದ್ದಕ್ಕೂ ಸ್ವಾವಲಂಬಿಯಾಗಿ ಬದುಕಲು ಸಾಧ್ಯವಾಗುತ್ತದೆ. ಆದ್ದರಿಂದ ಜನರಲ್ಲಿ ದುಡಿಮೆಯ ಸಂಸ್ಕೃತಿಯನ್ನು ಬೆಳೆಸಬೇಕು ಎಂದರು.
ಡಿಸಿಸಿ ಬ್ಯಾಂಕ್ ಕೊಡುಗೆ: ಡಿಸಿಸಿ ಬ್ಯಾಂಕ್ ಈ ಹಿಂದೆ ಕೇವಲ 600 ಕೋಟಿ ರೂಪಾಯಿಗಳಷ್ಟು ಸಾಲ ನೀಡುತ್ತಿತ್ತು. ಆದರೆ ಈಗ ಕೇವಲ ಶೇ. 3ರ ಬಡ್ಡಿದರದಲ್ಲಿ ಸುಮಾರು 1,100 ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ರೈತರಿಗೆ ಹಾಗೂ ವಿವಿಧ ಸಹಕಾರ ಸೊಸೈಟಿಗಳಿಗೆ ವಿತರಿಸಲಾಗಿದೆ. ತಾವು ನೀರಾವರಿ ಸಚಿವರಾಗಿದ್ದ ಅವಧಿಯಲ್ಲಿ ನಬಾರ್ಡ್ ನೆರವಿನೊಂದಿಗೆ ಕೃಷಿ ಮೂಲಸೌಕರ್ಯ ನಿಧಿಯನ್ನು ಆರಂಭಿಸಲಾಗಿತ್ತು. ಈ ಯೋಜನೆಯಡಿ ಕೋಲ್ಡ್ ಸ್ಟೋರೇಜ್ (ಶೀತಲೀಕರಣ ಘಟಕ) ಸ್ಥಾಪನೆಗೆ 50 ಕೋಟಿ ರೂಪಾಯಿಗಳವರೆಗೆ ಹಣಕಾಸಿನ ನೆರವು ಸಿಗುತ್ತದೆ. ಅಷ್ಟೇ ಅಲ್ಲದೆ, ರೈತರು ವೈಯಕ್ತಿಕವಾಗಿ ಗೋದಾಮುಗಳನ್ನು (ರೈತರ ಉಗ್ರಾಣ) ನಿರ್ಮಿಸಿಕೊಳ್ಳಲು ಯಾವುದೇ ಮಿತಿಯಿಲ್ಲದೆ ಸಾಲ ಸೌಲಭ್ಯ ದೊರೆಯುತ್ತದೆ ಎಂದರು.
ಮಹಾರಾಷ್ಟ್ರ-ಗುಜರಾತ್ ಮಾದರಿ ಸಹಕಾರ ಚಳುವಳಿ
ದೇಶದ ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿ ಸಹಕಾರ ಕ್ಷೇತ್ರ ಅತ್ಯಂತ ಪ್ರಬಲವಾಗಿದೆ. ಅಲ್ಲಿ ಸಹಕಾರ ರಂಗದ ಮುಖಂಡರೇ ಸರ್ಕಾರ ರಚನೆಯಲ್ಲಿ ಮತ್ತು ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅಲ್ಲಿ 'ಸಹಕಾರ ಸರ್ಕಾರ'ವೇ ಆಡಳಿತ ನಡೆಸುತ್ತದೆ. ಆದರೆ ನಮ್ಮಲ್ಲಿ ಸಹಕಾರ ರಂಗದ ಮೇಲೆ ಸರ್ಕಾರದ ಹಸ್ತಕ್ಷೇಪ ಹೆಚ್ಚಾಗಿರುತ್ತದೆ ಎಂದು ಹೇಳಿದರು.
ಸೊಸೈಟಿಗಳನ್ನು ಸೂಪರ್ಸೀಡ್ ಮಾಡುವುದು, ನಾಮನಿರ್ದೇಶನ ಮಾಡುವುದು ಮುಂತಾದ ರಾಜಕೀಯ ಬ್ರಹ್ಮಾಸ್ತ್ರಗಳನ್ನು ಬಳಸಿ ಸಹಕಾರ ರಂಗವನ್ನು ನಿಯಂತ್ರಿಸುವ ಪ್ರಯತ್ನಗಳು ನಡೆಯುತ್ತವೆ. ಇಂತಹ ಕಾನೂನುಬಾಹಿರ ಆದೇಶಗಳ ವಿರುದ್ಧ ಹಾಗೂ ಸಹಕಾರ ರಂಗದಲ್ಲಿ ಎದುರಾಗುವ ಕಾನೂನು ಹೋರಾಟಗಳನ್ನು ಎದುರಿಸಲು ಹಿರಿಯ ಮುಖಂಡರಾದ ಶಿವಕುಮಾರ್ ಅವರು ಪ್ರಮುಖರಾಗಿದ್ದಾರೆ ಎಂದು ಬೊಮ್ಮಾಯಿ ಅವರು ಇದೇ ವೇಳೆ ಶ್ಲಾಘಿಸಿದರು.
ರೈತರು ಆರ್ಥಿಕವಾಗಿ ಬಲಿಷ್ಠರಾದರೆ ಮಾತ್ರ ಟಿಎಪಿಸಿಎಂಎಸ್ ನಂತಹ ಸಹಕಾರ ಸಂಸ್ಥೆಗಳು ಬಲಿಷ್ಠಗೊಳ್ಳಲು ಸಾಧ್ಯ. ಆದ್ದರಿಂದ ಸಂಸ್ಥೆಯು ರೈತರ ಹಿತರಕ್ಷಣೆಗೆ ಸದಾ ಬದ್ಧವಾಗಿರಬೇಕು ಎಂದು ಅವರು ಕರೆ ನೀಡಿದರು.
ರೈತರ ಬದುಕು ಜೂಜಾಟ
ದೇಶದಲ್ಲಿ ರೈತರ ಕಲ್ಯಾಣಕ್ಕಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದ್ದರೂ, ಅವರ ಸಂಕಷ್ಟಗಳು ಇಂದಿಗೂ ಮುಗಿದಿಲ್ಲ. ರೈತರ ಬದುಕು ಒಂದು ರೀತಿಯಲ್ಲಿ ಜೂಜಾಟದಂತಾಗಿದೆ. ರೈತರು ಎದುರಿಸುತ್ತಿರುವ ನಿರಂತರ ಆರ್ಥಿಕ ಹಾಗೂ ಪ್ರಕೃತಿ ವಿಕೋಪಗಳ ಸವಾಲುಗಳನ್ನು ಬಿಡಿಸಿಟ್ಟ ಬೊಮ್ಮಾಯಿ ಅವರು, ಒಬ್ಬ ಸರ್ಕಾರಿ ಅಧಿಕಾರಿಗೆ, ಉದ್ಯೋಗಿಗೆ ಅಥವಾ ಮಂತ್ರಿಗೆ ಸ್ವಂತ ಮನೆ, ಭದ್ರತೆ ಇರುತ್ತದೆ. ಆದರೆ ರೈತನ ಬದುಕಿಗೆ ಆಕಾಶವೇ ಮೇಲ್ಛಾವಣಿ ಮತ್ತು ಭೂಮಿಯೇ ಹಾಸಿಗೆಯಾಗಿದೆ. ಇವೆರಡರ ನಡುವೆ ಅವನು ಬಯಲಿನಲ್ಲಿ ಬದುಕುತ್ತಿದ್ದಾನೆ ಎಂದು ಹೇಳಿದರು.
ರೈತನ ದುಡಿಮೆಯ ಅನಿಶ್ಚಿತತೆಯನ್ನು ವಿವರಿಸಿದ ಅವರು
ಬಂಡವಾಳದ ಲೆಕ್ಕವಿಲ್ಲ: ರೈತ ಭೂಮಿಗೆ ಹಾಕುವ ಬಂಡವಾಳಕ್ಕೆ ಯಾವುದೇ ಲೆಕ್ಕವಿರುವುದಿಲ್ಲ. ಮಳೆ ಬಾರದಿದ್ದರೆ ಮತ್ತೊಮ್ಮೆ ಬಿತ್ತನೆ ಮಾಡಬೇಕಾಗುತ್ತದೆ.
ರೋಗ ಮತ್ತು ವೆಚ್ಚಗಳ ಅನಿವಾರ್ಯತೆ: ಬಿತ್ತಿದ ನಂತರ ಬೆಳೆ ಕೊಂಚ ಮೇಲೆ ಬಂದರೆ ಸಾಕು, ಅದಕ್ಕೆ ರೋಗ ತಗುಲುತ್ತದೆ. ಅದನ್ನು ತಡೆಯಲು ಮತ್ತಷ್ಟು ಸಾಲ ಮಾಡಿ ಔಷಧಿ ಹೊಡೆಯಬೇಕು, ಗೊಬ್ಬರ ಹಾಕಬೇಕು ಹಾಗೂ ಕಳೆಯನ್ನು ಕೀಳಬೇಕು.
ಬೆಲೆಯ ಅನಿಶ್ಚಿತತೆ
ಇಷ್ಟೆಲ್ಲಾ ಕಷ್ಟಪಟ್ಟು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಸಿಗುತ್ತದೆ ಎಂಬುದು ಅವನಿಗೇ ಗೊತ್ತಿರುವುದಿಲ್ಲ. ಬೆಲೆಗಳು ದಿಢೀರನೆ ಕುಸಿಯುವುದರಿಂದ ರೈತನ ಶ್ರಮವೆಲ್ಲ ನೀರು ಪಾಲಾಗುತ್ತಿದೆ.ಕೃಷಿಯನ್ನು ಶಾಶ್ವತವಾಗಿ ಅಭಿವೃದ್ಧಿಪಡಿಸಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು 'ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ'ಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ನೀರಿನ ಸಂಗ್ರಹಣೆಯಿಂದ ಹಿಡಿದು, ಹನಿ ನೀರಾವರಿ ಹಾಗೂ ಗೊಬ್ಬರ ನಿರ್ವಹಣೆಯವರೆಗೆ ರೈತರಿಗೆ ಎಲ್ಲಾ ರೀತಿಯ ತಾಂತ್ರಿಕ ಮತ್ತು ಆರ್ಥಿಕ ಸೌಲಭ್ಯಗಳು ದೊರೆಯುತ್ತಿವೆ. ಇಂತಹ ಯೋಜನೆಗಳ ಸದ್ಬಳಕೆಯಾಗಬೇಕು ಎಂದು ಅವರು ತಿಳಿಸಿದರು.
ಪರಿಹಾರಕ್ಕಾಗಿ ಜಾಗತಿಕ ಅಧ್ಯಯನ
ರೈತರ ಈ 50 ವರ್ಷಗಳ ಹಳೆಯ ಸಮಸ್ಯೆಗೆ ರಾಜಕಾರಣಿಗಳು ಕೇವಲ ಭಾಷಣ ಮಾಡುತ್ತಾ ಬಂದಿದ್ದಾರೆ. ಆದರೆ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಾನು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಕೃಷಿ ಕ್ಷೇತ್ರ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅಲ್ಲಿನ ಸಹಕಾರ ರಂಗ ಹೇಗೆ ಯಶಸ್ವಿಯಾಗಿದೆ ಎಂಬುದನ್ನು ಆಳವಾಗಿ ಅಧ್ಯಯನ ಮಾಡಿದ್ದೇನೆ. ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಕೃಷಿ ನೀತಿಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗಬೇಕಿದೆ ಎಂದು ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟರು.
ದೇಶದಲ್ಲಿ ರೈತರಿಗೆ ಸ್ಥಿರವಾದ ಬೆಲೆ ಸಿಗುವವರೆಗೂ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ. ಅಂತರರಾಷ್ಟ್ರೀಯ ಮತ್ತು ಸ್ಥಳೀಯ ಮಾರುಕಟ್ಟೆಗಳ ಏರಿಳಿತಗಳನ್ನು ಆಧರಿಸಿ ಮುಂದಿನ 10 ವರ್ಷಗಳ ಮುನ್ನೋಟದೊಂದಿಗೆ ಬೆಲೆ ನಿಗದಿ ಮಾಡುವ 'ಔಟ್ಲುಕ್ ರಿಪೋರ್ಟ್' ವ್ಯವಸ್ಥೆಯ ಅಗತ್ಯತೆಯನ್ನು ಅವರು ಒತ್ತಿ ಹೇಳಿದರು.
ಉದಾಹರಣೆಗೆ ಜೋಳಕ್ಕೆ ಕನಿಷ್ಠ ₹2,೦೦೦ ನಿಗದಿಪಡಿಸಿದರೆ, ಮಾರುಕಟ್ಟೆ ಬೆಲೆ ಅದಕ್ಕಿಂತ ಶೇ. 15ರಷ್ಟು ಕುಸಿದಾಗ ಸರ್ಕಾರವೇ ಮಧ್ಯಪ್ರವೇಶಿಸಿ ನಷ್ಟ ಭರಿಸುವಂತಾಗಬೇಕು ಎಂದರು.
*ಪಿಎಲ್ಡಿ ಬ್ಯಾಂಕ್ಗಳ ಪುನಶ್ಚೇತನ*
ರಾಜ್ಯದಲ್ಲಿ ಪಿಎಲ್ಡಿ ಬ್ಯಾಂಕ್ಗಳ ಸ್ಥಿತಿ ಹದಗೆಟ್ಟಿದ್ದಾಗ, ನಬಾರ್ಡ್ ಸಂಸ್ಥೆಯು ಸಾಲ ನೀಡಲು ನಿರಾಕರಿಸಿತ್ತು. ಅಂತಹ ಸಂದರ್ಭದಲ್ಲಿ ₹2,000 ಕೋಟಿ ರೂಪಾಯಿಗಳ ಸರ್ಕಾರಿ ಗ್ಯಾರಂಟಿ ನೀಡಿ, ಬ್ಯಾಂಕ್ಗಳನ್ನು ಸಬಲೀಕರಣಗೊಳಿಸಿ ಪುನಶ್ಚೇತನಗೊಳಿಸಿದ್ದನ್ನು ಬೊಮ್ಮಾಯಿ ಅವರು ನೆನಪಿಸಿಕೊಂಡರು.
ರಾಜಕೀಯವನ್ನು ಮೀರಿದ ರೈತ
ರೈತ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ, ಆದರೆ ಎಲ್ಲಾ ರಾಜಕೀಯ ಪಕ್ಷಗಳು ರೈತನಿಗೆ ಸೇರಿದವು ಎಂದು ಹೇಳಿದ ಅವರು, ರೈತರ ವಿಷಯದಲ್ಲಿ ರಾಜಕೀಯ ಮಾಡದೆ ಪ್ರತಿಯೊಬ್ಬರೂ ಹೃದಯದಿಂದ ಕೆಲಸ ಮಾಡಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ 33 ಕೋಟಿ ಇದ್ದ ಜನಸಂಖ್ಯೆ ಇಂದು 130 ಕೋಟಿ ದಾಟಿದೆ. ಇಷ್ಟೂ ಜನರಿಗೆ ಅನ್ನ ನೀಡುತ್ತಿರುವ ಶಕ್ತಿ ರೈತನ ಬೆವರಿನಲ್ಲಿದೆ. ಆದ್ದರಿಂದ ರೈತರ ಆರೋಗ್ಯಕ್ಕಾಗಿ ಜಾರಿಗೆ ತಂದಿದ್ದ 'ಯಶಸ್ವಿನಿ' ಯೋಜನೆಯಂತಹ ಕಾರ್ಯಕ್ರಮಗಳು ನಿರಂತರವಾಗಿರಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಸಹಕಾರ ರಂಗವು ರೈತರಿಗೆ ಕೇವಲ ಸಾಲ ನೀಡುವ ಸಂಸ್ಥೆಯಾಗದೆ, ಅವರ ಆರ್ಥಿಕ ಭದ್ರತೆಗೆ ಹೆಗಲಾಗಬೇಕು ಎಂದು ಬಸವರಾಜ ಬೊಮ್ಮಾಯಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಸಂಧರ್ಭದಲ್ಲಿ ಶ್ರೀ ಮ.ನಿ.ಪ್ರ ಜಗದ್ಗುರು ಫಕ್ಕೀರಸಿದ್ದರಾಮ ಮಹಾಸ್ವಾಮಿಗಳು, ಸಂಸ್ಥಾನ ಮಠ ಶಿರಹಟ್ಟಿ ಶ್ರೀಗಳು ಸಾನಿಧ್ಯ ವಹಿಸಿದ್ದರು. ಶಾಸಕರಾದ ಡಾ. ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ, ಕೆ.ಸಿ.ಸಿ.ಬ್ಯಾಂಕ ಅಧ್ಯಕ್ಷರಾದ ಶಿವಕುಮಾರಗೌಡ ಪಾಟೀಲ್, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷರಾದ ವಿಶ್ವನಾಥ ಕಪ್ಪತ್ತನವರ, ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಶ್ರೀ ರಾಜು ಕುರಡಗಿ ಸೇರಿದಂತೆ ಹಲವಾರು ಪ್ರಮುಖರು ಹಾಗೂ ಮುಖಂಡರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP