ಕೋಲಾರ ನಿರ್ಮಿತಿ ಕೇಂದ್ರದಿಂದ ಅಭಿವೃದ್ಧಿಯ ಹೊಸ ಹೆಜ್ಜೆ: ರೂ. 1.40 ಕೋಟಿ ವೆಚ್ಚದಲ್ಲಿ ಒಳಾಂಗಣ ವಿನ್ಯಾಸ ಘಟಕ ಸ್ಥಾಪನೆಗೆ ಅನುಮೋದನೆ.
ಕೋಲಾರ ನಿರ್ಮಿತಿ ಕೇಂದ್ರದಿಂದ ಅಭಿವೃದ್ಧಿಯ ಹೊಸ ಹೆಜ್ಜೆ: ರೂ. 1.40 ಕೋಟಿ ವೆಚ್ಚದಲ್ಲಿ 'ಒಳಾಂಗಣ ವಿನ್ಯಾಸ ಘಟಕ' ಸ್ಥಾಪನೆಗೆ ಅನುಮೋದನೆ.
ಕೋಲಾರ ನಿರ್ಮಿತಿ ಕೇಂದ್ರದಿಂದ ಅಭಿವೃದ್ಧಿಯ ಹೊಸ ಹೆಜ್ಜೆ: ರೂ. 1.40 ಕೋಟಿ ವೆಚ್ಚದಲ್ಲಿ ಒಳಾಂಗಣ ವಿನ್ಯಾಸ ಘಟಕ ಸ್ಥಾಪನೆಗೆ ಅನುಮೋದನೆ.


ಕೋಲಾರ, 06 ಜುಲೈ (ಹಿ.ಸ.):

ಆ್ಯಂಕರ್:

ಕೋಲಾರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯತ್ತ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಜಿಲ್ಲಾ ನಿರ್ಮಿತಿ ಕೇಂದ್ರವು, ಮತ್ತೊಂದು ಮಹತ್ವದ ಯೋಜನೆಯನ್ನು ಕೈಗೆತ್ತಿಕೊಂಡಿದೆ. 2025-26ನೇ ಆರ್ಥಿಕ ವರ್ಷದಲ್ಲಿ ರೂ. 1.40 ಕೋಟಿ ವೆಚ್ಚದಲ್ಲಿ ಸುಸಜ್ಜಿತ 'ಒಳಾಂಗಣ ವಿನ್ಯಾಸ ಘಟಕ'ವನ್ನು ಸ್ಥಾಪಿಸಲು ಮಾನ್ಯ ಜಿಲ್ಲಾಧಿಕಾರಿಗಳು ಅನುಮೋದನೆ ನೀಡಿದ್ದಾರೆ.

ಈಗಾಗಲೇ ಅತ್ಯಾಧುನಿಕ ಯುಪಿವಿಸಿ ಕಿಟಕಿ ಮತ್ತು ಬಾಗಿಲುಗಳ ತಯಾರಿಕಾ ಘಟಕವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ನಿರ್ಮಿತಿ ಕೇಂದ್ರವು, ಇದೀಗ ಒಳಾಂಗಣ ವಿನ್ಯಾಸದ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಲು ಸಜ್ಜಾಗಿದೆ. ಹೊಸದಾಗಿ ಸ್ಥಾಪನೆಯಾಗಲಿರುವ ಈ ಘಟಕದ ಮೂಲಕ ಸರ್ಕಾರಿ ಕಚೇರಿಗಳು, ಶಾಲೆಗಳು, ಆಸ್ಪತ್ರೆಗಳು, ನ್ಯಾಯಾಲಯಗಳು ಮತ್ತು ಸಾರ್ವಜನಿಕ ಕಟ್ಟಡಗಳಿಗೆ ಬೇಕಾದ ಆಧುನಿಕ ಒಳಾಂಗಣ ವಿನ್ಯಾಸ, 3D ವಿನ್ಯಾಸ, ಮಾಡ್ಯುಲರ್ ಪೀಠೋಪಕರಣಗಳು, ಫಾಲ್ಸ್ ಸೀಲಿಂಗ್, ವುಡ್ ವರ್ಕ್ ಹಾಗೂ ಅಲ್ಯೂಮಿನಿಯಂ ಮತ್ತು ಗ್ಲಾಸ್ ವರ್ಕ್ ಸೇರಿದಂತೆ ಸಮಗ್ರ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸಲಾಗುವುದು.

ಈ ಕುರಿತು ಮಾಹಿತಿ ನೀಡಿರುವ ನಿರ್ಮಿತಿ ಕೇಂದ್ರದ ಅಧಿಕಾರಿಗಳು, ಈ ಯೋಜನೆಯು ಸರ್ಕಾರಿ ಇಲಾಖೆಗಳಿಗೆ ಗುಣಮಟ್ಟದ ಹಾಗೂ ವೆಚ್ಚ-ಪರಿಣಾಮಕಾರಿ ಸೇವೆಯನ್ನು ಒದಗಿಸುವುದಲ್ಲದೆ, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಹೊಸ ಆಯಾಮ ನೀಡಲಿದೆ ಎಂದು ತಿಳಿಸಿದ್ದಾರೆ.

ಗುಣಮಟ್ಟ, ಪಾರದರ್ಶಕತೆ ಮತ್ತು ಸಮಯಪಾಲನೆಯನ್ನು ಪ್ರಮುಖ ಧೈಯವನ್ನಾಗಿ ಹೊಂದಿರುವ ಕೋಲಾರ ಜಿಲ್ಲಾ ನಿರ್ಮಿತಿ ಕೇಂದ್ರವು, ಭವಿಷ್ಯದಲ್ಲಿ ಇಂತಹ ನವೀನ ಯೋಜನೆಗಳ ಮೂಲಕ ರಾಜ್ಯದಲ್ಲೇ ಮಾದರಿ ಸಂಸ್ಥೆಯಾಗಿ ಹೊರಹೊಮ್ಮುವ ಗುರಿಯನ್ನು ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande