
ಹಾವೇರಿ, 06 ಜುಲೈ (ಹಿ.ಸ.):
ಆ್ಯಂಕರ್:
ಕೃಷಿ ಹಾಗೂ ಸಹಕಾರಿ ರಂಗಕ್ಕೆ ಅವಿನಾಭಾವ ಸಂಬಂಧವಿದೆ. ದೇಶದ ಶೇಕಡಾ 90 ರಷ್ಟು ಜನಸಂಖ್ಯೆಗೆ ಅನುಕೂಲ ಮಾಡಿಕೊಡುವ ಸಾಮರ್ಥ್ಯವಿರುವ ಸಹಕಾರಿ ರಂಗದಲ್ಲಿ ನಾವು ರಾಜಕೀಯವನ್ನು ಬೆರೆಸಿದರೆ, ಆ ಸಂಸ್ಥೆಗಳು ಉಳಿಯಲು ಸಾಧ್ಯವಿಲ್ಲ ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.
ಇಂದು ಹಾವೇರಿಯಲ್ಲಿ ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯ 5 ವರ್ಷ ಪೂರ್ಣಗೊಳಿಸುತ್ತಿರುವ ಸಂಧರ್ಭದಲ್ಲಿ *ಸಹಕಾರದಿಂದ ಸಮೃದ್ಧಿ ಎಂಬ* ಧ್ಯೇಯದೊಂದಿಗೆ ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಹಾವೇರಿ ಜಿಲ್ಲಾ ಸಹಕಾರ ಯೂನಿಯನ್, ಕೆ.ಸಿ.ಸಿ.ಬ್ಯಾಂಕ್ ಧಾರವಾಡ, ಹಾವೇರಿ ಜಿಲ್ಲಾ ಹಾಲು ಒಕ್ಕೂಟ ಹಾಗೂ ಜಿಲ್ಲೆಯ ಎಲ್ಲ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ *ಸಹಕಾರ ಸಪ್ತಾಹ* ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾನು ಪ್ರಥಮ ಬಾರಿಗೆ ಈ ಜಿಲ್ಲಾ ಸಹಕಾರಿ ಯೂನಿಯನ್‌ನ ಸಭಾಭವನವನ್ನು ನೋಡುತ್ತಿದ್ದೇನೆ. ರಾಜ್ಯ ಸಹಕಾರಿ ಯೂನಿಯನ್ ನೀಡಿದ ಸುಮಾರು 35 ಲಕ್ಷ ರೂಪಾಯಿಗಳ ಧನಸಹಾಯದಿಂದ ಈ ಭವನ ನಿರ್ಮಾಣಗೊಂಡಿದೆ. ಈ ಸುಂದರ ಭವನದ ನಿರ್ಮಾಣಕ್ಕೆ ಕಾರಣರಾದ ಜಿ.ಟಿ. ದೇವೇಗೌಡರಿಗೆ ಹಾಗೂ ರಾಜ್ಯ ಸಹಕಾರಿ ಯೂನಿಯನ್ ಪದಾಧಿಕಾರಿಗಳಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
.
*ಸಹಕಾರಿ ಚಳವಳಿಯ ಶ್ಲಾಘನೆ:*
ಸಹಕಾರಿ ರಂಗದಲ್ಲಿ ಹಾವೇರಿ ಜಿಲ್ಲೆಯ ಮುಖಂಡರ ಕೊಡುಗೆಯನ್ನು ಸ್ಮರಿಸಿದ ಅವರು, ಇಲ್ಲಿ ನೆರೆದಿರುವವರಲ್ಲಿ ಅನೇಕರು ಸಹಕಾರಿ ಚಳವಳಿಯಲ್ಲಿ 10, 20 ಹಾಗೂ 30 ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಪದಾಧಿಕಾರಿಗಳಾಗಿ, ನಿರ್ದೇಶಕರಾಗಿ ಹಾಗೂ ಅಧ್ಯಕ್ಷರಾಗಿ ಜವಾಬ್ದಾರಿಯುತ ಸ್ಥಾನಗಳಲ್ಲಿ ಇದ್ದುಕೊಂಡು ಸಹಕಾರಿ ರಂಗವನ್ನು ಬಲಪಡಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
*ಸ್ಥಾನ-ಮಾನಗಳಿಗಿಂತ ಸಾಮೂಹಿಕ ಗುರಿ ಮುಖ್ಯ*
ಸಹಕಾರಿ ರಂಗದಲ್ಲಿ ಕೇವಲ ಅಧಿಕಾರ ಮತ್ತು ಸ್ಥಾನಗಳಿಗೆ ಪ್ರಾಮುಖ್ಯತೆ ನೀಡುವ ಪ್ರವೃತ್ತಿಯ ಬಗ್ಗೆ ಮಾತನಾಡಿದ ಅವರು, ಕೇವಲ ಒಂದು ಸ್ಥಾನಕ್ಕಾಗಿ ಅಥವಾ ಗೌರವಕ್ಕಾಗಿ ನಾನು ನಿರ್ದೇಶಕ ಮಂಡಳಿಯ ಸದಸ್ಯನಾಗುತ್ತೇನೆ, ಅಧ್ಯಕ್ಷನಾಗುತ್ತೇನೆ ಎಂದು ಹಂಬಲಿಸುವುದರಿಂದ ಹೆಚ್ಚಿನ ಪ್ರಯೋಜನವಿಲ್ಲ. ನಾವು ಆ ಸ್ಥಾನದಲ್ಲಿದ್ದಾಗ ಎಲ್ಲರೂ 'ಚೇರ್ಮನ್ ಸಾಹೇಬ್ರು' ಎನ್ನುತ್ತಾರೆ, ಆಮೇಲೆ ಯಾರೂ ಕೇಳುವುದಿಲ್ಲ. ಇದು ಎಲ್ಲರಿಗೂ ಅನ್ವಯಿಸುವ ಸತ್ಯ ಎಂದರು.
ವೈಯಕ್ತಿಕ ಹಿತಾಸಕ್ತಿಗಿಂತ ಸಾಮೂಹಿಕವಾಗಿ ನಾವೆಲ್ಲರೂ ಸೇರಿ ಒಂದು ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಕೆಲಸ ಮಾಡಬೇಕು. ಯಾವುದೇ ದಾರಿ ಅಥವಾ ದಿಸೆ ಇಲ್ಲದೆ ಕೆಲಸ ಮಾಡಿದರೆ ಅದರಿಂದ ಸಮಯ ವ್ಯರ್ಥವಾಗುತ್ತದೆಯೇ ಹೊರತು ಯಾವುದೇ ಪ್ರಯೋಜನವಾಗುವುದಿಲ್ಲ.ಎಂದರು.
*ಭಾವನಾತ್ಮಕ ಸಂಬಂಧ*
ಸಹಕಾರಿ ರಂಗದಲ್ಲಿ ಕೇವಲ ವ್ಯವಹಾರ ಅಷ್ಟೇ ಅಲ್ಲದೆ, ಪ್ರತಿಯೊಬ್ಬರ ನಡುವೆ ಒಂದು ಭಾವನಾತ್ಮಕ ಸಂಬಂಧ ಬೆಳೆಯಬೇಕು. ಕುಟುಂಬದಂತೆ ಕೆಲಸ ಮಾಡಿ: ಹಾವೇರಿ ಸಹಕಾರ ಯೂನಿಯನ್‌ನ ಎಲ್ಲಾ ಸಂಘ ಸಂಸ್ಥೆಗಳು, ಸದಸ್ಯರು ಮತ್ತು ಪದಾಧಿಕಾರಿಗಳು ಒಂದು ಕುಟುಂಬದ ಸದಸ್ಯರಂತೆ ಒಗ್ಗಟ್ಟಿನಿಂದ ಕೆಲಸ ಮಾಡಲು ಸಂಕಲ್ಪ ಮಾಡಬೇಕು. ಸಹಕಾರಿ ರಂಗದಲ್ಲೇ ನಾವು ಒಬ್ಬರಿಗೊಬ್ಬರು ಸಹಕಾರ ನೀಡದಿದ್ದರೆ, ಇನ್ನೆಲ್ಲಿ ಸಹಕಾರ ನೀಡಲು ಸಾಧ್ಯ? ಆದ್ದರಿಂದ ರಾಜಕೀಯವನ್ನು ಬದಿಗಿಟ್ಟು ಸಂಸ್ಥೆಯನ್ನು ಬಲಪಡಿಸಬೇಕು. ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಕಷ್ಟಪಟ್ಟು ಕಟ್ಟಿರುವ ಇಂತಹ ಸಹಕಾರಿ ಸಂಸ್ಥೆಗಳನ್ನು ಮತ್ತಷ್ಟು ಆರ್ಥಿಕವಾಗಿ ಸದೃಢಗೊಳಿಸಲು ನಾವೆಲ್ಲರೂ ಬದ್ಧರಾಗಬೇಕಿದೆ ಎಂದು ಹೇಳಿದರು
*ಸಾಮೂಹಿಕ ಪ್ರಯತ್ನ ಅತ್ಯಗತ್ಯ*
ಸಹಕಾರ ರಂಗದ ಮೂಲಕ ದೇಶದಲ್ಲಿ ಸಮೃದ್ಧಿ ತರಬೇಕಾದರೆ ನಾವೆಲ್ಲರೂ ಸಾಮೂಹಿಕ ಹಾಗೂ ಸಂಘಟಿತ ಹೋರಾಟ ಮತ್ತು ಪ್ರಯತ್ನವನ್ನು ಮಾಡುವುದು ಅತ್ಯಗತ್ಯ ನಮ್ಮ ಗ್ರಾಮೀಣ ಭಾಗದಲ್ಲಿ ಹತ್ತಾರು ಬ್ಯಾಂಕುಗಳು ಹಾಗೂ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಸಾಮರ್ಥ್ಯವನ್ನು ಮತ್ತಷ್ಟು ವೃದ್ಧಿಸಲು ಬೇಕಾದ ಸೂಕ್ತ ಕಾರ್ಯಕ್ರಮಗಳನ್ನು ನಾವು ರೂಪಿಸಬೇಕಿದೆ. ಇದನ್ನು ಕೇವಲ ಒಂದು ಯೋಜನೆಯನ್ನಾಗಿ ನೋಡದೆ, ಒಂದು ಚಳುವಳಿಯ ರೂಪದಲ್ಲಿ ನಾವು ಪ್ರಾರಂಭಿಸಬೇಕು ಎಂದರು.
ಎಲ್ಲಾ ಗ್ರಾಮಗಳಲ್ಲೂ ಒಟ್ಟಿಗೇ ಯಶಸ್ಸು ಸಿಗುತ್ತದೆ ಎಂದು ನಾನು ಹೇಳುವುದಿಲ್ಲ. ಆದರೆ ಒಂದು ತಾಲೂಕಿನ ಕನಿಷ್ಠ 5 ರಿಂದ 6 ಹಳ್ಳಿಗಳಲ್ಲಿ ಯಶಸ್ವಿಯಾದರೆ, ಅದನ್ನು ಮಾದರಿಯಾಗಿಟ್ಟುಕೊಂಡು ಮುಂದಿನ ವರ್ಷಗಳಲ್ಲಿ ಇತರ ಗ್ರಾಮ ಹಾಗೂ ತಾಲೂಕುಗಳಿಗೂ ವಿಸ್ತರಿಸಬಹುದು ಎಂದರು
ನಾವು ಕೇವಲ ಡಿಸಿಸಿ ಬ್ಯಾಂಕ್ ಅಥವಾ ಸರ್ಕಾರದ ಧನಸಹಾಯದ ಕಡೆಗೆ ಮುಖ ಮಾಡದೆ, ಸಹಕಾರ ರಂಗದ ಸ್ವಂತ ಸಾಮರ್ಥ್ಯದ ಮೇಲೆ ರೈತರಿಗೆ ಸಾಲ ಹಾಗೂ ಇತರ ನೆರವು ನೀಡುವಂತಾಗಬೇಕು. ಇದರೊಂದಿಗೆ ಸಾಲದ ಸಮರ್ಪಕ ಮರುಪಾವತಿ ಕಡೆಗೂ ಸಂಸ್ಥೆಗಳು ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.
*ಸತತ ಪ್ರಯತ್ನದ ಫಲ:*
ಜಿಲ್ಲೆಗೆ ಸ್ವಂತ ಹಾಲು ಒಕ್ಕೂಟವನ್ನು ತರಬೇಕೆಂಬ ನಿಟ್ಟಿನಲ್ಲಿ 2004 ರಿಂದ ಸತತವಾಗಿ ಪ್ರಯತ್ನ ನಡೆಸಲಾಗಿತ್ತು. ಧಾರವಾಡ ಹಾಲು ಒಕ್ಕೂಟದ ಸರ್ವ ಸದಸ್ಯರು ಸೇರಿದಂತೆ ಸರ್ಕಾರಿ ಮಟ್ಟದಲ್ಲಿ ಎಲ್ಲರ ಪ್ರೋತ್ಸಾಹ ಮತ್ತು ಸಹಕಾರದಿಂದಾಗಿ ಈ ಕನಸು ನನಸಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಸ್ವಂತ ಹಾಲು ಒಕ್ಕೂಟ ಅಸ್ತಿತ್ವಕ್ಕೆ ಬಂದಿದ್ದು, ಶೀಘ್ರದಲ್ಲೇ ಮೆಗಾ ಡೈರಿ ತಲೆಯೆತ್ತುತ್ತಿರುವುದು ಹೆಮ್ಮೆಯ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಹಾವೇರಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಧರೆಪ್ಪಗೌಡ ಪಾಟೀಲ್ ಸೇರಿದಂತೆ ಹಲವಾರು ಪ್ರಮುಖರು ಹಾಗೂ ಮುಖಂಡರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.