
ಕೋಲಾರ, 06 ಜುಲೈ (ಹಿ.ಸ.):
ಆ್ಯಂಕರ್:ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಹಸಿರು ಕ್ರಾಂತಿಯ ಹರಿಕಾರ,ಭಾರತದ ಮಾಜಿ ಉಪಪ್ರಧಾನ ಮಂತ್ರಿ ಡಾ.ಬಾಬು ಜಗಜೀವನರಾಂ ಅವರ 40 ನೇ ವರ್ಷದ ಪುಣ್ಯಸ್ಮರಣೆ ಆಚರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್ ಬಾಬೂಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿ, ಹಸಿರು ಕ್ರಾಂತಿಯ ಮೂಲಕ ದೇಶದ ಆಹಾರ ಕೊರತೆ ನೀಗಿಸಿದ ಬಾಬೂಜಿ 50 ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿದ ಧೀಮಂತ ರಾಜಕಾರಣಿ ಎಂದು ಸ್ಮರಿಸಿದರು
ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ ಮಾತನಾಡಿ, ಬಾಬು ಜಗಜೀವನ್ ರಾಂ ಓರ್ವ ವ್ಯಕ್ತಿಯಲ್ಲ ಅವರೊಬ್ಬರು ಶಕ್ತಿ. ಕೃಷಿ ಸಚಿವರಾಗಿ ಅಲ್ಲದೆ, ಕಾರ್ಮಿಕ, ಕಾನೂನು ಸಚಿವರು, ರೈಲ್ವೆ ಸಚಿವರಾಗಿ ಅವರು ಅನೇಕ ಜನಪರ ಕಾಯ್ದೆಗಳನ್ನು ಜಾರಿಗೆ ತಂದು ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತುಗಳು ದೊರೆಯುವಂತಹ ಅವಕಾಶ ಕಲ್ಪಿಸಿದರು. ೪೦ ಕೋಟಿ ಜನರಿಗೆ ಆಹಾರ ಒದಗಿಸಲು ಪರದಾಡುತ್ತಿದ್ದ ಕಾಲದಲ್ಲಿ, ಹಸಿರು ಕ್ರಾಂತಿಯ ಮೂಲಕ ಕೃಷಿಯಲ್ಲಿ ಹಲವಾರು ಬದಲಾವಣೆಗಳನ್ನು ತಂದು,ಡ್ಯಾಂಗಳ ಮೂಲಕ ನೀರಾವರಿ ಒದಗಿಸಿ, ದೇಶದ ಎಲ್ಲ ಜನರು ಸಂತೃಪ್ತಿಯಿಂದ ಊಟ ಮಾಡುವಂತಹ ವಾತಾವರಣ ಕಲ್ಪಿಸಿದರು. ಇಂತಹ ವ್ಯಕ್ತಿಗಳನ್ನು ಆದರ್ಶವಾಗಿಟ್ಟುಕೊಂಡು ನಾವೆಲ್ಲರೂ ಮುನ್ನಡೆಯಬೇಕಾಗಿದೆ ಎಂದರು.
ಹಿರಿಯ ಮುಖಂಡ ರಾಜಕಲ್ಲಹಳ್ಳಿ ಶ್ರೀನಿವಾಸ್ ಮಾತನಾಡಿ ದೇಶದಲ್ಲಿ ಕೃಷಿ, ಕೈಗಾರಿಕಾ, ಕಾರ್ಮಿಕ, ವಿದೇಶಾಂಗ ಸಚಿವರಾಗಿ ಅವರು ಕೈಗೊಂಡ ಕಾರ್ಯಕ್ರಮಗಳು ಇಂದಿಗೂ ಇಡೀ ದೇಶಕ್ಕೆ ಮಾದರಿಯಾಗಿವೆ.ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ರಚನೆ ಮಾಡಿಕೊಟ್ಟರೆ, ಬಾಬು ಜಗಜೀವನ್ ರಾಂ ಅವರು ಸಂವಿಧಾನದ ಆಶಯಗಳನ್ನು ಈಡೇರಿಸಲು ತಮ್ಮ ಉಸಿರಿನ ಕೊನೆಯವರೆಗೂ ನಿರಂತವಾಗಿ ಶ್ರಮಿಸಿದ್ದರು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಆಫ್ಸರ್, ಎಸ್ಸಿ ಘಟಕದ ಜಿಲ್ಲಾ ಅಧ್ಯಕ್ಷ ಜಯದೇವ್ ಮುಖಂಡರಾದ ಬೆಳಗಾನಹಳ್ಳಿ ಮುನಿವೆಂಕಟಪ್ಪ, ವೀರೇಂದ್ರ ಪಾಟೀಲ್, ಬಿ.ಟಿ ಚಂದ್ರಶೇಖರ್, ನದೀಂ,. ಸೋಮಶೇಖರ್, ಲಾಲ್ ಬಹಾದ್ದೂರ್ ಶಾಸ್ತ್ರಿ, ಕೋಟೆ ರಾಜೇಶ್, ಅಯೂಬ್, ಶಿವಕುಮಾರ್ ಮುಂತಾದವರು ಇದ್ದರು
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್