
ಕೋಲಾರ, ೦೫ ಜುಲೈ (ಹಿ.ಸ):
ಆ್ಯಂಕರ್ : ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳಾ ಸಬಲೀಕರಣದ ಉದಾತ್ತ ಆಶಯದೊಂದಿಗೆ ಆರಂಭವಾದ ಇಲ್ಲಿನ ಪ್ರತಿಷ್ಠಿತ ‘ಮಹಿಳಾ ಸಮಾಜ ಶಿಕ್ಷಣ ಸಂಸ್ಥೆ’ಯು ಇಂದು ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಆಸ್ತಿ ಅಕ್ರಮ ಪರಭಾರೆ ಮತ್ತು ನಕಲಿ ದಾಖಲೆ ಸೃಷ್ಟಿಯ ಗಂಭೀರ ಹಗರಣದಲ್ಲಿ ಸಿಲುಕಿದೆ. ನಗರಸಭೆಗೆ ಸೇರಿದ ಬೆಲೆಬಾಳುವ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ದಾಖಲೆಗಳನ್ನು ಪೋರ್ಜರಿ ಮಾಡಿದ ಆರೋಪದ ಹಿನ್ನೆಲೆಯಲ್ಲಿ, ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಅನುಮತಿ ಕೋರಿ ಜಿಲ್ಲಾಧಿಕಾರಿಗಳು ಪೌರಾಡಳಿತ ನಿರ್ದೇಶಕರಿಗೆ ಹಾಗೂ ಸರ್ಕಾರಕ್ಕೆ ಸಮಗ್ರ ತನಿಖಾ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ.
ಈ ಹಿಂದೆ ನಗರಸಭಾ ಸದಸ್ಯರಾದ ಪ್ರವೀಣ್ಗೌಡ ಮತ್ತು ಮುರಳೀಗೌಡ ನೀಡಿದ್ದ ದೂರಿನನ್ವಯ ಮಾಲೂರು ನಗರಸಭೆ ಪೌರಾಯುಕ್ತರು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಹಾಗೂ ಕಂದಾಯ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಈ ತಂಡ ನಡೆಸಿದ ಆಳವಾದ ತನಿಖೆಯಿಂದ ಆಘಾತಕಾರಿ ಸತ್ಯಗಳು ಹೊರಬಂದಿವೆ. ಹೈಕೋರ್ಟ್ ಸಹ ಈ ದಾಖಲೆಗಳ ತಿದ್ದುವಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಅಕ್ರಮ ಎಸಗಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಹಸಿರು ನಿಶಾನೆ ನೀಡಿದೆ.
ಮೈಸೂರು ಸಂಸ್ಥಾನದ ಅವಧಿಯಲ್ಲಿ, ಅಂದರೆ ೧೯೩೩ರಲ್ಲಿ ಮಹಿಳೆಯರ ಪ್ರಗತಿಗಾಗಿ ಆರಂಭವಾದ ಈ ಸಂಸ್ಥೆಗೆ ಅಂದಿನ ಜಿಲ್ಲಾಧಿಕಾರಿಗಳ ಪತ್ನಿ ಅಧ್ಯಕ್ಷರಾಗಿದ್ದರು. ಆರಂಭದಲ್ಲಿ ಟೈಲರಿಂಗ್, ಅಗರಬತ್ತಿ ತಯಾರಿಕೆಯಂತಹ ತರಬೇತಿ ನೀಡುತ್ತಿದ್ದ ಸಂಸ್ಥೆಯು ೧೯೫೭ರ ನಂತರ ಶೈಕ್ಷಣಿಕ ಚಟುವಟಿಕೆಗಳನ್ನು ವಿಸ್ತರಿಸಿತು. ಇದೇ ವೇಳೆ, ೧೯೫೯-೬೦ರ ಸಾಲಿನಲ್ಲಿ ಕೋಲಾರ ನಗರಸಭೆಯು ತನ್ನ ವ್ಯಾಪ್ತಿಯ ಖಾತೆ ಸಂಖ್ಯೆ ೧೭೭೫ರಲ್ಲಿದ್ದ ೮೦/೬೦ ಅಳತೆಯ ಖಾಲಿ ನಿವೇಶನವನ್ನು ವಾರ್ಷಿಕ ಕೇವಲ ಆರು ರೂಪಾಯಿಗಳ ಬಾಡಿಗೆ ದರದಲ್ಲಿ ೫೦ ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಿತ್ತು. ನಗರಸಭೆಯ ಹೊಸ ಬಡಾವಣೆಯ ಅಸೆಸ್ಮೆಂಟ್ ರಿಜಿಸ್ಟರ್ನಲ್ಲಿ ಮಾಲೀಕರ ಜಾಗದಲ್ಲಿ 'ನಗರಸಭೆ' ಎಂದೂ, ಅನುಭೋಗದಾರರ ಜಾಗದಲ್ಲಿ 'ಮಹಿಳಾ ಸಮಾಜ' ಎಂದೂ ಸ್ಪಷ್ಟವಾಗಿ ನಮೂದಿಸಲಾಗಿತ್ತು.
ಆದರೆ, ೫೦ ವರ್ಷಗಳ ಗುತ್ತಿಗೆ ಅವಧಿ ಮುಗಿದ ನಂತರ ೨೦೧೫ರಲ್ಲಿ ಲೋಕೋಪಯೋಗಿ ಇಲಾಖೆಯ ದರದಂತೆ ಮಾಸಿಕ ೨೧,೬೦೦ ರೂಪಾಯಿ ಬಾಡಿಗೆಗೆ ೧೨ ವರ್ಷಗಳ ಅವಧಿಗೆ ಮರು ಗುತ್ತಿಗೆ ನೀಡುವ ಕರಾರು ಮಾಡಿಕೊಳ್ಳಲಾಗಿತ್ತು. ನಿಯಮಗಳ ಪ್ರಕಾರ ಇಂತಹ ಸರ್ಕಾರಿ ಸ್ವತ್ತನ್ನು ಬಹಿರಂಗ ಹರಾಜಿನ ಮೂಲಕವೇ ನೀಡಬೇಕಿತ್ತಾದರೂ, ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಿ ಕರಾರು ಪತ್ರವನ್ನು ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸದೆ ಅಕ್ರಮ ಎಸಗಲಾಗಿತ್ತು. ತದನಂತರ ಈ ಗುತ್ತಿಗೆಯನ್ನು ಜಿಲ್ಲಾಧಿಕಾರಿಗಳು ರದ್ದುಪಡಿಸಿದಾಗ, ಸಂಸ್ಥೆಯ ಆಡಳಿತ ಮಂಡಳಿಯು ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಸಂದರ್ಭದಲ್ಲಿ ಕೋರ್ಟ್ಗೆ ಸಲ್ಲಿಕೆಯಾದ ದಾಖಲೆಗಳನ್ನು ಪರಿಶೀಲಿಸಿದಾಗ, ೧೯೬೩ರಲ್ಲೇ ಈ ಆಸ್ತಿಯನ್ನು ಮಹಿಳಾ ಸಮಾಜಕ್ಕೆ ಮಾರಾಟ ಮಾಡಲಾಗಿದೆ ಎಂಬ ನಕಲಿ ನೋಂದಣಿ ಪತ್ರ ಮತ್ತು ನಕಲಿ ಗುತ್ತಿಗೆ ಕರಾರು ಪತ್ರಗಳನ್ನು ಸೃಷ್ಟಿಸಿ ನ್ಯಾಯಾಲಯ ಹಾದಿ ತಪ್ಪಿಸಿರುವುದು ಬೆಳಕಿಗೆ ಬಂದಿದೆ.
ಅಕ್ರಮವಾಗಿ ೧೨ ವರ್ಷಗಳ ಕಾಲ ಗುತ್ತಿಗೆ ನೀಡಲು ಸಹಕರಿಸಿದ ಅಂದಿನ ಪೌರಾಯುಕ್ತ ಕೆ.ಎನ್. ಲಕ್ಷ್ಮೀನಾರಾಯಣ, ಕಂದಾಯ ಅಧಿಕಾರಿ ಸುಬ್ರಮಣಿ, ಕಂದಾಯ ನಿರೀಕ್ಷಕ ಸುಬಣ್ಣ ಸೇರಿದಂತೆ ಹಲವು ಅಧಿಕಾರಿಗಳು ಈ ಹಗರಣದ ಮುಖ್ಯ ಸೂತ್ರಧಾರರಾಗಿದ್ದಾರೆ. ಇದರೊಂದಿಗೆ ಅಂದಿನ ನಗರಸಭೆ ಅಧ್ಯಕ್ಷರಾಗಿದ್ದ ಮುಬಾರಕ್ ಅವರ ಅವಧಿಯಲ್ಲೇ ಈ ಆಸ್ತಿ ಪರಭಾರೆ ಪ್ರಕ್ರಿಯೆ ನಡೆದಿದ್ದು, ಸೂಕ್ತ ತನಿಖೆಯಾದರೆ ಅಂದಿನ ಆಡಳಿತ ಮಂಡಳಿಯ ಸದಸ್ಯರೂ ಸಿಲುಕುವ ಸಾಧ್ಯತೆಯಿದೆ.
ಒಂದೊಮ್ಮೆ ದಿವಂಗತ ಚೆನ್ನಬಸಪ್ಪನವರ ಕುಟುಂಬದ ತ್ಯಾಗ ಹಾಗೂ ಉಷಾ ಗಂಗಾಧರ್ ಅವರಂತಹ ನಿಷ್ಠಾವಂತರ ಪರಿಶ್ರಮದಿಂದ ಹೆಮ್ಮರವಾಗಿ ಬೆಳೆದಿದ್ದ ಈ ಶಿಕ್ಷಣ ಸಂಸ್ಥೆ, ಇತ್ತೀಚಿನ ವರ್ಷಗಳಲ್ಲಿ ಸ್ವಾರ್ಥಿ ಕೈಗಳ ಪಾಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಾಂಶುಪಾಲರಾಗಿ ಬಂದ ನವೀನ ಎಂಬುವವರು ಹಳೆಯ ಆಡಳಿತ ಮಂಡಳಿಯ ಉಷಾ ಗಂಗಾಧರ್ ಹಾಗೂ ಶಾರದಾ ಸೀತಪ್ಪ ಅವರ ಪುತ್ರಿ ರೇಣುಕಾ ಅವರನ್ನು ಪದಚ್ಯುತಿಗೊಳಿಸಿ, ತಮ್ಮದೇ ಕುಟುಂಬದ ನಂದನಾ ಅವರನ್ನು ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡು ಸಂಸ್ಥೆಯನ್ನು ವಶಪಡಿಸಿಕೊಂಡಿದ್ದಾರೆ.
ಪ್ರಸ್ತುತ ಮೇಲ್ನೋಟಕ್ಕೇ ಕೋಟ್ಯಂತರ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿ ಲೂಟಿಯಾಗಿರುವುದು ಸಾಬೀತಾಗಿದ್ದರೂ, ಆರೋಪಿಗಳು ರಾಜಕೀಯ ಪ್ರಭಾವ ಹಾಗೂ ಹಣಬಲ ಬಳಸಿ ತನಿಖೆಯನ್ನು ಆಮೆಗತಿಯಲ್ಲಿ ಸಾಗುವಂತೆ ಮಾಡುತ್ತಿದ್ದಾರೆ ಎಂಬ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ. ನಗರಸಭೆಯ ಆಸ್ತಿ ರಕ್ಷಿಸಲು ಹೋರಾಡಿದ ಪ್ರವೀಣ್ಗೌಡರು ರಾಜಕೀಯ ಪಿತೂರಿಯಿಂದಾಗಿ ತಮ್ಮ ಉಪಾಧ್ಯಕ್ಷ ಸ್ಥಾನವನ್ನೇ ಕಳೆದುಕೊಳ್ಳಬೇಕಾಯಿತು. ಹಾಲಿ ಪೌರಾಯುಕ್ತರು ತಕ್ಷಣವೇ ಪೊಲೀಸ್ ಠಾಣೆಗೆ ದೂರು ನೀಡಿಸಿ ಎಫ್ಐಆರ್ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದ್ದರೂ, ಕೇವಲ ಸರ್ಕಾರದ ಅನುಮತಿಯ ನೆಪವೊಡ್ಡಿ ಇಡೀ ಪ್ರಕರಣವನ್ನು ಮತ್ತಷ್ಟು ವಿಳಂಬ ಮಾಡಲಾಗುತ್ತಿದೆ ಎಂಬ ಟೀಕೆಗಳು ತೀವ್ರವಾಗಿ ಕೇಳಿಬರುತ್ತಿವೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್