
ಕಾರಾಕಾಸ್, 02 ಜುಲೈ (ಹಿ.ಸ.):
ಆ್ಯಂಕರ್:ದಕ್ಷಿಣ ಅಮೆರಿಕದ ವೆನೆಜುವೆಲಾದಲ್ಲಿ ಸಂಭವಿಸಿದ ಭೀಕರ ಭೂಕಂಪ ದುರಂತದ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದುವರೆಗೆ 2,295 ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದು, ಮೃತರ ಸಂಖ್ಯೆ 10 ಸಾವಿರದವರೆಗೆ ಏರಬಹುದೆಂಬ ಆತಂಕವನ್ನು ಸಂಯುಕ್ತ ರಾಷ್ಟ್ರ ಸಂಸ್ಥೆ ವ್ಯಕ್ತಪಡಿಸಿದೆ.
ವೆನೆಜುವೆಲಾದ ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷ ಜಾರ್ಜ್ ರೊಡ್ರಿಗಸ್ ಅವರ ಮಾಹಿತಿ ಪ್ರಕಾರ, ಜೂನ್ 24ರಂದು 7.2 ಮತ್ತು 7.5 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಸಂಭವಿಸಿದ ಪರಿಣಾಮ ಸಾವಿನ ಸಂಖ್ಯೆ 2,295ಕ್ಕೆ ಏರಿಕೆಯಾಗಿದೆ. ಸಾವಿರಾರು ಮಂದಿ ಗಾಯಗೊಂಡಿದ್ದು, 15,866 ಮಂದಿ ನಿರಾಶ್ರಿತರಾಗಿದ್ದಾರೆ.
ಸಂಯುಕ್ತ ರಾಷ್ಟ್ರ ಸಂಸ್ಥೆಯ ಸ್ಥಳೀಯ ಸಂಯೋಜಕ ಜಿಯಾನ್ಲುಕಾ ರಾಂಪೊಲ್ಲಾ ಡೆಲ್ ಟಿಂಡಾರೊ ಅವರು, ಪರಿಸ್ಥಿತಿ ಅತ್ಯಂತ ಗಂಭೀರವಾಗಿರುವುದರಿಂದ 10 ಸಾವಿರ ಮೃತದೇಹ ಚೀಲಗಳನ್ನು ತರಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಸ್ಥಳೀಯ ವರದಿಗಳ ಪ್ರಕಾರ 43 ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.
ನಾಸಾ ಅಂದಾಜಿನ ಪ್ರಕಾರ, ಸುಮಾರು 59 ಸಾವಿರ ಕಟ್ಟಡಗಳು ಸಂಪೂರ್ಣವಾಗಿ ಧ್ವಂಸವಾಗಿವೆ ಅಥವಾ ತೀವ್ರ ಹಾನಿಗೊಳಗಾಗಿವೆ. ರಕ್ಷಣಾ ಸಿಬ್ಬಂದಿ ಅವಶೇಷಗಳಡಿ ಸಿಲುಕಿರುವವರನ್ನು ಪತ್ತೆಹಚ್ಚುವ ಕಾರ್ಯವನ್ನು ಮುಂದುವರಿಸಿದ್ದಾರೆ.
ರಕ್ಷಣಾ ಕಾರ್ಯಗಳಿಗೆ ನೆರವಾಗಲು ವೆನೆಜುವೆಲಾ, ಪ್ಯೂರ್ಟೊ ರಿಕೊ ಮತ್ತು ಕುರಕಾವೊ ಪ್ರದೇಶಗಳಲ್ಲಿ ಸುಮಾರು 1,700 ಅಮೆರಿಕದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದೇ ವೇಳೆ, ದೇಶದ ಈಗಾಗಲೇ ದುರ್ಬಲವಾಗಿರುವ ಆರೋಗ್ಯ ವ್ಯವಸ್ಥೆಯ ಮೇಲೆ ಭಾರೀ ಒತ್ತಡ ಉಂಟಾಗಿದೆ ಎಂದು ಮಾನವೀಯ ನೆರವು ಸಂಸ್ಥೆಗಳು ಎಚ್ಚರಿಸಿವೆ.
ವಿಶ್ವ ಆಹಾರ ಕಾರ್ಯಕ್ರಮ 5 ಲಕ್ಷ ಮಂದಿಗೆ ತುರ್ತು ಆಹಾರ ನೆರವು ಒದಗಿಸಲು 5 ಕೋಟಿ ಅಮೆರಿಕನ್ ಡಾಲರ್ ನೆರವಿನ ಅಗತ್ಯವಿದೆ ಎಂದು ಮನವಿ ಮಾಡಿದೆ.
ಸರ್ಕಾರದ ಮಾಹಿತಿಯ ಪ್ರಕಾರ, ಜೂನ್ 24ರ ಭೂಕಂಪಗಳ ಬಳಿಕ ಇದುವರೆಗೆ 782 ಭೂಕಂಪಾನಂತರದ ಕಂಪನಗಳು ದಾಖಲಾಗಿವೆ. ಹಲವೆಡೆ ಇನ್ನೂ ಅವಶೇಷಗಳನ್ನು ಸಂಪೂರ್ಣ ತೆರವುಗೊಳಿಸಲಾಗಿಲ್ಲ.
ವಿಶ್ವದ ಅತಿದೊಡ್ಡ ತೈಲ ಸಂಗ್ರಹ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾದ ವೆನೆಜುವೆಲಾದಲ್ಲಿ ಭೂಕಂಪದಿಂದ ಉಂಟಾದ ಇಂಧನ ಕೊರತೆಯೂ ಪರಿಹಾರ ಕಾರ್ಯಕ್ಕೆ ದೊಡ್ಡ ಅಡ್ಡಿಯಾಗಿದೆ. ಭಾರೀ ಯಂತ್ರೋಪಕರಣಗಳಿಗೆ ಅಗತ್ಯವಿರುವ ಇಂಧನ ಸಿಗದ ಕಾರಣ ರಕ್ಷಣಾ ಕಾರ್ಯ ನಿಧಾನಗೊಂಡಿದ್ದು, ಹಲವೆಡೆ ಜನರು ತಮ್ಮ ಬಂಧು-ಬಳಗವನ್ನು ಹುಡುಕಲು ಸ್ವತಃ ಕೈಗಳಿಂದಲೇ ಅವಶೇಷಗಳನ್ನು ತೆರವುಗೊಳಿಸುತ್ತಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.