112 ತುರ್ತು ಸಹಾಯವಾಣಿಗೆ ಸುಳ್ಳು ಕರೆಗಳ ಕಾಟ: ಬಂಡೇಪಾಳ್ಯದಲ್ಲಿ ಸುಳ್ಳು ತುರ್ತು ಸಂದೇಶ ನೀಡಿ ಸಿಕ್ಕಿಬಿದ್ದ ವ್ಯಕ್ತಿ
ಬೆಂಗಳೂರು, 28 ಜುಲೈ (ಹಿ.ಸ.): ಆ್ಯಂಕರ್: ಸಿಲಿಕಾನ್ ಸಿಟಿಯಲ್ಲಿ ತುರ್ತು ಸಹಾಯವಾಣಿ ''112'' ರ ದುರ್ಬಳಕೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿ ಸತಾಯಿಸುತ್ತಿರುವ ಘಟನೆಗಳು ಮುಂದುವರಿದಿವೆ. ಇತ್ತೀಚೆಗೆ ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸ
bengaluru-112-helpline


ಬೆಂಗಳೂರು, 28 ಜುಲೈ (ಹಿ.ಸ.):

ಆ್ಯಂಕರ್:

ಸಿಲಿಕಾನ್ ಸಿಟಿಯಲ್ಲಿ ತುರ್ತು ಸಹಾಯವಾಣಿ '112' ರ ದುರ್ಬಳಕೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿ ಸತಾಯಿಸುತ್ತಿರುವ ಘಟನೆಗಳು ಮುಂದುವರಿದಿವೆ. ಇತ್ತೀಚೆಗೆ ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಳ್ಳು ತುರ್ತು ಕರೆಯೊಂದು ಪೊಲೀಸರನ್ನು ಹೈರಾಣಾಗಿಸಿದ್ದು, ಈ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಗೇಟ್ ಬಳಿ ನಾಲ್ವರ ಮೇಲೆ ಹಲ್ಲೆ ನಡೆದಿದೆ ಎಂದು ಉಮೇಶ್ ಎಂಬಾತ ಹೊಯ್ಸಳ 112ಗೆ ಕರೆ ಮಾಡಿ ಸುಳ್ಳು ಮಾಹಿತಿ ನೀಡಿದ್ದ. ತುರ್ತು ಸಂದೇಶವೆಂದು ಗಂಭೀರವಾಗಿ ಪರಿಗಣಿಸಿದ ಸಿಬ್ಬಂದಿ, ತಕ್ಷಣವೇ ಸ್ಥಳೀಯ ಪೊಲೀಸರನ್ನು ಕೂಡಲೇ ಘಟನಾ ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದರು.

ಆದರೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅಲ್ಲಿ ಯಾವುದೇ ಹಲ್ಲೆ ನಡೆದಿರಲೇ ಇಲ್ಲಾ. ಸ್ಥಳೀಯರನ್ನು ವಿಚಾರಣೆ ನಡೆಸಿ ಕರೆ ಮಾಡಿದಾತನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿದಾಗ, ಇದು ಸಂಪೂರ್ಣ ಸುಳ್ಳು ಮಾಹಿತಿ ಎಂಬುದು ದೃಢಪಟ್ಟಿದೆ. ಸಿಬ್ಬಂದಿಯನ್ನು ದಿಕ್ಕು ತಪ್ಪಿಸಿ ಅನಗತ್ಯವಾಗಿ ಅಲೆದಾಡಿಸಿದ್ದಕ್ಕಾಗಿ ಬಂಡೇಪಾಳ್ಯ ಪೊಲೀಸರು ಉಮೇಶ್ ವಿರುದ್ಧ ಎನ್ಸಿಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಪೊಲೀಸ್ ಇಲಾಖೆಗೆ ತಲೆನೋವಾಗಿರುವ ನಕಲಿ ಕರೆಗಳು:

ನಗರದ ಹೊಯ್ಸಳ ಗಸ್ತು ತಂಡಗಳಿಗೆ ಇಂತಹ ನಕಲಿ ತುರ್ತು ಕರೆಗಳು ನಿತ್ಯದ ತಲೆನೋವಾಗಿ ಪರಿಣಮಿಸಿವೆ. 112 ಸಹಾಯವಾಣಿಗೆ ಬರುವ ಪ್ರತಿಯೊಂದು ಕರೆಯನ್ನು ಗಂಭೀರವಾಗಿ ಪರಿಗಣಿಸಿ ತುರ್ತು ವಾಹನ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಆದರೆ ಇಂತಹ ಹುಚ್ಚಾಟದ ಕರೆಗಳಿಂದ ಪೊಲೀಸರ ಅಮೂಲ್ಯ ಸಮಯ ವ್ಯರ್ಥವಾಗುವುದಲ್ಲದೆ, ನಿಜವಾದ ತುರ್ತು ಪರಿಸ್ಥಿತಿಯಲ್ಲಿರುವ ಸಂತ್ರಸ್ತರಿಗೆ ಸಮಯಕ್ಕೆ ಸರಿಯಾಗಿ ನೆರವು ತಲುಪಲು ವಿಳಂಬವಾಗುವ ಆತಂಕ ಎದುರಾಗಿದೆ.

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande