
ಬೆಂಗಳೂರು, 25 ಜುಲೈ (ಹಿ.ಸ.):
ಆ್ಯಂಕರ್:
ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಮೈಲಸಂದ್ರ ದಿಣ್ಣೆಪಾಳ್ಯದಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳೊಂದಿಗೆ ಮನೆ ಹಾಗೂ ಅಂಗಡಿಗಳ ಮೇಲೆ ಏಕಾಏಕಿ ದಾಳಿ ನಡೆಸಿ ದಾಂಧಲೆ ಎಸಗಿರುವ ಭಯಾನಕ ಘಟನೆ ನಡೆದಿದೆ. ಈ ಸಂಪೂರ್ಣ ಕೃತ್ಯವು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಘಟನೆ ಕುರಿತು ಮಾತನಾಡಿದ ಮನೆಯ ಮಾಲೀಕರಾದ ವಿಶ್ವನಾಥ ರೆಡ್ಡಿ ಎಂಬುವವರು ನಿನ್ನೆ ರಾತ್ರಿ ಊಟ ಮುಗಿಸಿ ತಮ್ಮ ಪತ್ನಿ ಮತ್ತು ಸೊಸೆ ಜೊತೆ ಮನೆಯ ಹೊರಗಡೆ ವಿಶ್ರಾಂತಿ ಪಡೆಯುತ್ತಿದ್ದರು. ಆ ಸಮಯದಲ್ಲಿ ಕಾರಿನಲ್ಲಿ ಬಂದ ನಾಲ್ವರು ಅಪರಿಚಿತ ವ್ಯಕ್ತಿಗಳು ಏಕಾಏಕಿ ಲಾಂಗು-ಮಚ್ಚುಗಳೊಂದಿಗೆ ಮನೆಯತ್ತ ನುಗ್ಗಿದ್ದಾರೆ.
ಮಾರಕಾಸ್ತ್ರಗಳನ್ನು ಹಿಡಿದು ಬಂದವರನ್ನು ಕಂಡು ಬೆಚ್ಚಿಬಿದ್ದ ಕುಟುಂಬಸ್ಥರು ತಕ್ಷಣ ಮನೆಯೊಳಗೆ ಓಡಿಹೋಗಿ ಬಾಗಿಲು ಬಂದ್ ಮಾಡಿಕೊಂಡಿದ್ದಾರೆ.
ಬಾಗಿಲು ತೆಗೆಯಲು ಸಾಧ್ಯವಾಗದಿದ್ದಾಗ ಆಕ್ರೋಶಗೊಂಡ ದಾಳಿಕೋರರು ಲಾಂಗು-ಮಚ್ಚಿನಿಂದ ಬಾಗಿಲು ಧ್ವಂಸಗೊಳಿಸಲು ಯತ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಮನೆಯ ಕಿಟಕಿ ಗಾಜುಗಳನ್ನು ಪುಡಿಗೈದು, ಮನೆ ಮುಂದೆ ನಿಲ್ಲಿಸಿದ್ದ ಇನ್ನೋವಾ ಕಾರಿನ ಗಾಜು ಹಾಗೂ ಬೈಕ್ ಸೇರಿದಂತೆ ಸಿಕ್ಕ ಸಿಕ್ಕ ವಸ್ತುಗಳನ್ನು ಜಖಂಗೊಳಿಸಿದ್ದಾರೆ.
ಆ ಸಂದರ್ಭದಲ್ಲಿ ಬಾಗಿಲು ಮಾತ್ರ ಓಪನ್ ಆಗಿದ್ದರೆ ಖಂಡಿತ ನಮ್ಮನ್ನು ಕೊಲೆ ಮಾಡುತ್ತಿದ್ದರು. ನಮಗೆ ಯಾರ ಜೊತೆಯೂ ಯಾವುದೇ ವೈಮನಸ್ಸು ಅಥವಾ ದ್ವೇಷವಿಲ್ಲ. ಆದರೆ ನಮ್ಮ ಮೇಲೆ ಕೊಲೆ ಮಾಡಲು ಬಂದಿದ್ದವರು ಯಾರು ಎಂಬುದು ನಮಗೆ ಇನ್ನೂ ತಿಳಿದುಬಂದಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮನೆಗೆ ನುಗ್ಗಲು ವಿಫಲರಾದ ಬಳಿಕ ದುಷ್ಕರ್ಮಿಗಳು ಸಮೀಪದ ಬಟ್ಟೆ ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅಂಗಡಿಯಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿಯಾಗಿ ನಾಶಪಡಿಸಿದ್ದು, ಅಡ್ಡ ಬಂದ ಅಂಗಡಿ ಮಾಲೀಕನ ಮೇಲೆಯೂ ಲಾಂಗಿನಿಂದ ಹಲ್ಲೆ ನಡೆಸಿ ಆವಾಜ್ ಹಾಕಿದ್ದಾರೆ.
ಇದಲ್ಲದೆ, ರಸ್ತೆಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರನ್ನು ಹಾಗೂ ಬೈಕ್ ಸವಾರರನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ. ರಸ್ತೆಯಲ್ಲಿ ಜನ ಭಯದಿಂದ ಚಲ್ಲಾಪಿಲ್ಲಿಯಾಗಿ ಓಡಿಹೋಗಿರುವ ದೃಶ್ಯಗಳು ಸಿಸಿಸಿಟಿವಿಯಲ್ಲಿ ದಾಖಲಾಗಿವೆ. ಕೃತ್ಯ ಎಸಗಿದ ಬಳಿಕ ನಾಲ್ವರು ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತಲೆಮರೆಸಿಕೊಂಡಿರುವ ದುಷ್ಕರ್ಮಿಗಳ ಪತ್ತೆಗಾಗಿ ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII