
ಬಾಗಲಕೋಟೆ, 27 ಜುಲೈ (ಹಿ.ಸ.)
ಆ್ಯಂಕರ್ ; ಬಾಗಲಕೋಟೆ ನಗರದ ವಿದ್ಯಾಗಿರಿಯ ಶಾಪಿಂಗ್ ಮಾಲ್ ಮುಂಭಾಗದ ಮುಖ್ಯ ರಸ್ತೆಯಲ್ಲಿ ಒಳಚರಂಡಿ ಕಟ್ಟಿಕೊಂಡು ಕೊಳಚೆ ನೀರು ಉಕ್ಕಿ ಹರಿಯುತ್ತಿರುವ ಪರಿಣಾಮ ಇಡೀ ಪ್ರದೇಶದಲ್ಲಿ ತೀವ್ರ ದುರ್ನಾತ ಆವರಿಸಿದ್ದು, ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಒಳಚರಂಡಿ ನೀರು ರಸ್ತೆ ಮೇಲೆಯೇ ಹರಿಯುತ್ತಿರುವುದರಿಂದ ವಾಹನ ಸವಾರರು, ಪಾದಚಾರಿಗಳು ಹಾಗೂ ಸ್ಥಳೀಯ ನಿವಾಸಿಗಳು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಮಳೆ ನೀರಿನೊಂದಿಗೆ ಬೆರೆತ ಕೊಳಚೆ ರಸ್ತೆ ತುಂಬಾ ಹರಿದು, ಪರಿಸರ ಅಸ್ವಚ್ಛಗೊಂಡಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಎದುರಾಗಿದೆ.
ಪ್ರತಿನಿತ್ಯ ಸಾವಿರಾರು ಜನರು ಸಂಚರಿಸುವ ಈ ರಸ್ತೆಯಲ್ಲಿ ದುರ್ವಾಸನೆ ಹೆಚ್ಚಾಗಿರುವುದರಿಂದ ಅಂಗಡಿಗಳಿಗೆ ಬರುವ ಗ್ರಾಹಕರ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂದು ಸ್ಥಳೀಯ ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ. ಕೆಲವೆಡೆ ಕೊಳಚೆ ನೀರು ರಸ್ತೆ ಮಧ್ಯದಲ್ಲೇ ನಿಂತಿರುವುದರಿಂದ ವಾಹನಗಳು ಜಾರುವ ಅಪಾಯವೂ ಹೆಚ್ಚಾಗಿದೆ.
ಈ ಸಮಸ್ಯೆ ಹಲವು ದಿನಗಳಿಂದ ಮುಂದುವರಿದಿದ್ದರೂ ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹಲವು ಬಾರಿ ದೂರು ನೀಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೆರಿಗೆ ಕಟ್ಟುವ ನಾಗರಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ನಗರಸಭೆ ವಿಫಲವಾಗಿದೆ. ತಕ್ಷಣವೇ ಒಳಚರಂಡಿಯನ್ನು ಸ್ವಚ್ಛಗೊಳಿಸಿ, ಕೊಳಚೆ ನೀರು ರಸ್ತೆಗೆ ಹರಿಯದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರ ಆರೋಗ್ಯ ಹಾಗೂ ನಗರದ ಸ್ವಚ್ಛತೆ ದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande