
ಬಾಗಲಕೋಟೆ, 27 ಜುಲೈ (ಹಿ.ಸ.)
ಆ್ಯಂಕರ್ : 2028ರ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ಮತ್ತೊಮ್ಮೆ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಜ್ಜಾಗಿರುವ ಸೂಚನೆಗಳು ದೊರೆತಿವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಖಾಲಿ ಇರುವ ಸಚಿವ ಸ್ಥಾನಗಳನ್ನು ಭರ್ತಿ ಮಾಡುವ ಕುರಿತು ಪಕ್ಷದ ವರಿಷ್ಠರು ಗಂಭೀರ ಚಿಂತನೆ ನಡೆಸಿದ್ದು, ಸೋಮವಾರ ಸಂಜೆ ಅಥವಾ ಮಂಗಳವಾರದೊಳಗೆ ಹೊಸ ಸಚಿವರ ಹೆಸರುಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ.
ಸಂಪುಟ ವಿಸ್ತರಣೆಯ ಸುದ್ದಿ ಹೊರಬಿದ್ದ ಬೆನ್ನಲ್ಲೇ ಸಚಿವ ಸ್ಥಾನಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳ ಕಾಂಗ್ರೆಸ್ ಶಾಸಕರು ಹಾಗೂ ಮೇಲ್ಮನೆ ಸದಸ್ಯರು ರಾಜಕೀಯ ಚಟುವಟಿಕೆಗಳನ್ನು ತೀವ್ರಗೊಳಿಸಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಶಾಸಕರು ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದು, ತಮ್ಮ ಅನುಭವ, ಹಿರಿತನ, ಸಮುದಾಯದ ಪ್ರಾತಿನಿಧ್ಯ, ಪಕ್ಷನಿಷ್ಠೆ ಹಾಗೂ ರಾಜಕೀಯ ಪ್ರಭಾವವನ್ನು ಮುಂದಿಟ್ಟುಕೊಂಡು ವರಿಷ್ಠರ ಮೇಲೆ ಒತ್ತಡ ಹೇರುವ ಪ್ರಯತ್ನಗಳು ಜೋರಾಗಿವೆ.
ಬಾಗಲಕೋಟೆಯಿಂದ ನಾಲ್ವರು ಪ್ರಮುಖ ಆಕಾಂಕ್ಷಿಗಳು
ಬಾಗಲಕೋಟೆ ಜಿಲ್ಲೆಯಲ್ಲಿಯೂ ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಕಂಡುಬರುತ್ತಿದೆ. ಜಿಲ್ಲೆಯ ಐವರು ಕಾಂಗ್ರೆಸ್ ಶಾಸಕರು ಹಾಗೂ ಒಬ್ಬ ವಿಧಾನ ಪರಿಷತ್ ಸದಸ್ಯರಿದ್ದು, ಅವರಲ್ಲಿ ಹಲವು ನಾಯಕರು ತಮ್ಮದೇ ರೀತಿಯಲ್ಲಿ ಅವಕಾಶಕ್ಕಾಗಿ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಜಿಲ್ಲೆಯ ಹಿರಿಯ ಪತ್ರಕರ್ತರು ಹಾಗೂ ರಾಜಕೀಯ ವಿಶ್ಲೇಷಕರು ಆದ ಸಿದ್ದು ಧುತ್ತರಗವಿ ಅವರು ವಿಶ್ಲೇಷಿಸಿದ್ದಾರೆ.
ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಅವರು ತಮ್ಮ ಆಡಳಿತ ಅನುಭವ, ಹಿರಿಯತೆ ಹಾಗೂ ಪ್ರಾದೇಶಿಕ ಸಮತೋಲನವನ್ನು ಮುಂದಿಟ್ಟುಕೊಂಡು ಸಚಿವ ಸ್ಥಾನಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ವಿಜಯಾನಂದ ಕಾಶಪ್ಪನವರ ಅವರು ಪ್ರಬಲ ಲಿಂಗಾಯತ ಸಮುದಾಯದ ಪ್ರತಿನಿಧಿತ್ವ, ಕುಟುಂಬದ ಪಕ್ಷನಿಷ್ಠೆ ಹಾಗೂ ಸಂಘಟನಾ ಹಿನ್ನೆಲೆಯನ್ನು ಆಧಾರವನ್ನಾಗಿ ಮಾಡಿಕೊಂಡಿದ್ದಾರೆ.
ಹಿರಿಯ ನಾಯಕ ಜೆ.ಟಿ. ಪಾಟೀಲ ಅವರು ಹಿರಿಯರ ಕೋಟಾದಡಿ ಅವಕಾಶ ನಿರೀಕ್ಷಿಸುತ್ತಿದ್ದರೆ, ಉಮಾಶ್ರೀ ಅವರು ಮಹಿಳಾ ಪ್ರತಿನಿಧಿತ್ವದ ಆಧಾರದ ಮೇಲೆ ಸಚಿವ ಸ್ಥಾನಕ್ಕೆ ತಮ್ಮ ಹಕ್ಕು ಮಂಡಿಸುತ್ತಿದ್ದಾರೆ. ಉಳಿದ ಮೊದಲ ಬಾರಿಗೆ ಆಯ್ಕೆಯಾದ ಶಾಸಕರು ಹೊಸ ಮುಖಗಳಿಗೆ ಅವಕಾಶ ಸಿಕ್ಕರೆ ತಮಗೂ ಅವಕಾಶ ದೊರೆಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಜಿಲ್ಲೆಯ ಪರ ಒಗ್ಗಟ್ಟಿನ ಪ್ರಯತ್ನ ಕಾಣಿಸಲಿಲ್ಲ
ಆದರೆ, ಈ ಬಾರಿ ಬಾಗಲಕೋಟೆ ಜಿಲ್ಲೆಯಲ್ಲಿ ಸಚಿವ ಸ್ಥಾನಕ್ಕಾಗಿ ನಡೆಯುತ್ತಿರುವ ಪ್ರಯತ್ನಗಳಲ್ಲಿ ಜಿಲ್ಲೆಯ ಸಮಗ್ರ ಹಿತಾಸಕ್ತಿ ಹಿಂದೆ ಬಿದ್ದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಪ್ರತಿಯೊಬ್ಬ ಆಕಾಂಕ್ಷಿಯೂ ತಮ್ಮ ವೈಯಕ್ತಿಕ ಅರ್ಹತೆ, ಅನುಭವ ಅಥವಾ ಸಮುದಾಯದ ಪ್ರತಿನಿಧಿತ್ವವನ್ನು ಮುಂದಿಟ್ಟುಕೊಂಡಿದ್ದರೂ, ಜಿಲ್ಲೆಯ ಅಭಿವೃದ್ಧಿ ಹಾಗೂ ರಾಜಕೀಯ ಪ್ರಾತಿನಿಧ್ಯವನ್ನು ಮುಂದಿಟ್ಟು ಒಗ್ಗಟ್ಟಾಗಿ ವರಿಷ್ಠರನ್ನು ಭೇಟಿ ಮಾಡಿದ ಉದಾಹರಣೆ ಕಂಡುಬಂದಿಲ್ಲ.
ಜಿಲ್ಲೆಯಲ್ಲಿ ಐವರು ಕಾಂಗ್ರೆಸ್ ಶಾಸಕರು ಹಾಗೂ ಒಬ್ಬ ಮೇಲ್ಮನೆ ಸದಸ್ಯರಿದ್ದರೂ, ಎಲ್ಲರೂ ಸೇರಿ ಜಿಲ್ಲೆಯ ಹಿತದೃಷ್ಟಿಯಿಂದ ನಮ್ಮಲ್ಲಿ ಯಾರಿಗಾದರೂ ಸಚಿವ ಸ್ಥಾನ ನೀಡಿ ಎಂಬ ಒಗ್ಗಟ್ಟಿನ ಮನವಿ ಸಲ್ಲಿಸದಿರುವುದು ಹಲವು ರಾಜಕೀಯ ವಿಶ್ಲೇಷಕರ ಗಮನ ಸೆಳೆದಿದೆ.
ಕೋಲಾರದ ಮಾದರಿ ಚರ್ಚೆಗೆ
ರಾಜ್ಯದ ಇತರ ಜಿಲ್ಲೆಗಳಲ್ಲಿ ಮಾತ್ರ ವಿಭಿನ್ನ ಚಿತ್ರಣ ಕಂಡುಬಂದಿದೆ. ಕೋಲಾರ ಜಿಲ್ಲೆಯ ಕಾಂಗ್ರೆಸ್ ಶಾಸಕರು ಒಗ್ಗಟ್ಟಾಗಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಜಿಲ್ಲೆಯ ಹಿತಾಸಕ್ತಿ, ಪಕ್ಷ ಸಂಘಟನೆ ಹಾಗೂ ಚುನಾವಣಾ ದೃಷ್ಟಿಯಿಂದ ಜಿಲ್ಲೆಯ ಒಬ್ಬ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಸಲ್ಲಿಸಿರುವುದು ಬಾಗಲಕೋಟೆ ನಾಯಕರ ನಡೆಗೆ ಹೋಲಿಕೆ ಆಗುತ್ತಿದೆ.
ಬಾಗಲಕೋಟೆಗೆ ಅವಕಾಶ ಸಿಗುವುದೇ?
ಪ್ರಸ್ತುತ ರಾಜಕೀಯ ಬೆಳವಣಿಗೆಗಳನ್ನು ಅವಲೋಕಿಸಿದರೆ ಬಾಗಲಕೋಟೆ ಜಿಲ್ಲೆಗೆ ಸಚಿವ ಸ್ಥಾನ ದೊರೆಯುವುದು ಸುಲಭವಲ್ಲ ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿದೆ. ಒಂದು ವೇಳೆ ಅವಕಾಶ ದೊರೆತರೂ ಅದು ಕೊನೆಯ ಕ್ಷಣದ ರಾಜಕೀಯ ಸಮೀಕರಣಗಳ ಮೇಲೆ ಅವಲಂಬಿತವಾಗಿರಲಿದೆ ಎನ್ನಲಾಗುತ್ತಿದೆ.
ಜಿಲ್ಲೆಗೆ ಮತ್ತೆ ಸಚಿವ ಸ್ಥಾನ ಕೈತಪ್ಪಿದರೆ ಅದರ ಪ್ರಮುಖ ಕಾರಣ ಶಾಸಕರ ನಡುವಿನ ಒಗ್ಗಟ್ಟಿನ ಕೊರತೆ ಎಂಬ ಟೀಕೆ ಎದುರಾಗುವ ಸಾಧ್ಯತೆ ಇದೆ. ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗಳು ಹಾಗೂ 2028ರ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕತ್ವಕ್ಕೆ ಸಚಿವ ಸ್ಥಾನ ರಾಜಕೀಯವಾಗಿ ಅತ್ಯಂತ ಮಹತ್ವದ್ದಾಗಿದೆ.
ಸಂಪುಟ ವಿಸ್ತರಣೆಯ ಅಧಿಕೃತ ಘೋಷಣೆ ಹೊರಬರುವವರೆಗೆ ರಾಜಕೀಯ ಲಾಬಿ, ಲೆಕ್ಕಾಚಾರ ಹಾಗೂ ಕೊನೆಯ ಕ್ಷಣದ ಬೆಳವಣಿಗೆಗಳು ಮುಂದುವರಿಯಲಿವೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande