
ವಿಜಯಪುರ, 27 ಜುಲೈ (ಹಿ.ಸ.)
ಆ್ಯಂಕರ್ : ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಮೇ 5ರಂದು ಸಂಭವಿಸಿದ್ದ ಅರುಣ್ ಬಡಿಗೇರೆ ಅವರ ಸಾವಿನ ಪ್ರಕರಣವು ಆರಂಭದಲ್ಲಿ ಸಹಜ ಹೃದಯಾಘಾತದಿಂದ ಸಂಭವಿಸಿದ ಮರಣವೆಂದು ಭಾವಿಸಲಾಗಿತ್ತು. ಮೃತರ ಪತ್ನಿ ಭಾಗ್ಯಶ್ರೀ ಅವರು ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಹಾಗೂ ಪರಿಚಯಸ್ಥರಿಗೆ ತಿಳಿಸಿದ್ದರಿಂದ ಯಾವುದೇ ಅನುಮಾನ ಮೂಡಿರಲಿಲ್ಲ. ಕುಟುಂಬಸ್ಥರು ಕೂಡ ಅದನ್ನು ನಂಬಿ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದರು.
ಆದರೆ, ಎರಡು ತಿಂಗಳ ಬಳಿಕ ಪೊಲೀಸ್ ತನಿಖೆಯಲ್ಲಿ ಈ ಪ್ರಕರಣವು ಅಚ್ಚರಿಯ ತಿರುವು ಪಡೆದುಕೊಂಡಿದ್ದು, ಇದು ಪೂರ್ವಯೋಜಿತ ಕೊಲೆ ಎಂಬ ಗಂಭೀರ ಆರೋಪ ಬೆಳಕಿಗೆ ಬಂದಿದೆ. ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ನಡೆಸಿದ ತನಿಖೆಯಲ್ಲಿ ಪತ್ನಿಯ ಮೊಬೈಲ್ ಕರೆ ವಿವರಗಳು ಹಾಗೂ ಚಾಟ್ಗಳ ಪರಿಶೀಲನೆಯಿಂದ ಹಲವು ಅನುಮಾನಾಸ್ಪದ ಸಂಗತಿಗಳು ಪೊಲೀಸರ ಗಮನಕ್ಕೆ ಬಂದಿವೆ.
ತನಿಖೆಯ ಪ್ರಕಾರ, ಭಾಗ್ಯಶ್ರೀ ತನ್ನ ಪ್ರಿಯಕರನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆತನ ಸಲಹೆಯಂತೆ ಪತಿಗೆ ಮೊದಲು ನಿದ್ರೆ ಮಾತ್ರೆ ನೀಡಿ ಅಸ್ವಸ್ಥಗೊಳಿಸಿ, ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬಳಿಕ ಈ ಕೃತ್ಯವನ್ನು ಸಹಜ ಹೃದಯಾಘಾತದಿಂದ ಸಂಭವಿಸಿದ ಸಾವು ಎಂಬಂತೆ ಬಿಂಬಿಸಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಬೈಲ್ ಚಾಟ್ಗಳಲ್ಲಿ ದೊರೆತ ಮಾಹಿತಿ ಹಾಗೂ ಇತರೆ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಭಾಗ್ಯಶ್ರೀಯನ್ನು ಬಂಧಿಸಿದ್ದು, ಪ್ರಕರಣದಲ್ಲಿ ಸಹಕಾರ ನೀಡಿದ ಆರೋಪದಡಿ ಆಕೆಯ ಪ್ರಿಯಕರನಿಗಾಗಿ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.
ಈ ಪ್ರಕರಣವು ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದ್ದು, ಆರಂಭದಲ್ಲಿ ಸಹಜ ಸಾವು ಎಂದು ಕಂಡುಬಂದ ಘಟನೆ ಹೇಗೆ ಕೊಲೆ ಪ್ರಕರಣವಾಗಿ ಬಯಲಾಯಿತು ಎಂಬುದು ಸಾರ್ವಜನಿಕರಲ್ಲೂ ಚರ್ಚೆಗೆ ಕಾರಣವಾಗಿದೆ.
ತನಿಖೆ ಇನ್ನೂ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ ಎಂದು ಇಂಡಿ ಠಾಣೆ ಪೊಲೀಸರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande