
ವಿಜಯಪುರ, 27 ಜುಲೈ (ಹಿ.ಸ.)
ಆ್ಯಂಕರ್ : ವಿಶೇಷಚೇತನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸಮಾನ ಅವಕಾಶ ಹಾಗೂ ಗೌರವಯುತ ಜೀವನ ಕಲ್ಪಿಸುವ ಉದ್ದೇಶದಿಂದ ವಿಜಯಪುರ ನಗರದಲ್ಲಿ ಸ್ಥಾಪಿಸಲಾದ ಬಿಎಲ್ ಡಿಎ -ರಘುಕುಲ ಸಮನ್ವಯ ಶಾಲೆಯ ನೂತನ ಕಟ್ಟಡವನ್ನು ಸೋಮವಾರ ಧಾರ್ಮಿಕ ಹಾಗೂ ಸಾಂಸ್ಕೃತಿಕ ವಾತಾವರಣದಲ್ಲಿ ಸಚಿವ ಎಂ ಬಿ ಪಾಟೀಲ್ ಉದ್ಘಾಟಿಸಿದರು.
ಬಿಎಲ್ ಡಿಈ ಹಾಗೂ ಸಂಭವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ನ ಜಂಟಿ ಆಶ್ರಯದಲ್ಲಿ ಆರಂಭಿಸಲಾದ ಈ ಶಾಲೆಯ ನೂತನ ಕಟ್ಟಡವನ್ನು ಪರಮಪೂಜ್ಯ ಜಗದ್ಗುರು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು (ಬೆಕ್ಕಿನ ಕಲ್ಮಠ, ಶಿವಮೊಗ್ಗ) ಹಾಗೂ ಪರಮಪೂಜ್ಯ ಜಗದ್ಗುರು ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿ (ವಿರಕ್ತ ಮಠ, ನಿಡೋಣಿ) ಅವರ ಪವಿತ್ರ ಸಾನ್ನಿಧ್ಯದಲ್ಲಿ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ ಬಿ ಪಾಟೀಲ್, ವಿಶೇಷಚೇತನ ಮಕ್ಕಳು ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಅವರಿಗೆ ಸಾಮಾನ್ಯ ಮಕ್ಕಳಂತೆ ಸಮಾನ ಶಿಕ್ಷಣ, ತರಬೇತಿ, ಅವಕಾಶ ಹಾಗೂ ಸ್ವಾವಲಂಬಿ ಬದುಕು ದೊರೆಯುವಂತೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ವಿಶೇಷಚೇತನ ಮಕ್ಕಳ ಸಾಮರ್ಥ್ಯವನ್ನು ಗುರುತಿಸಿ, ಅವರಲ್ಲಿರುವ ಪ್ರತಿಭೆಯನ್ನು ಹೊರತರಲು ಸೂಕ್ತ ಶಿಕ್ಷಣ, ಪುನರ್ವಸತಿ ಹಾಗೂ ಕೌಶಲಾಭಿವೃದ್ಧಿ ಕಾರ್ಯಕ್ರಮಗಳು ಅತ್ಯಂತ ಅಗತ್ಯವಾಗಿವೆ. ಈ ನಿಟ್ಟಿನಲ್ಲಿ
ಬಿಎಲ್ ಡಿಇ -ರಘುಕುಲ ಸಮನ್ವಯ ಶಾಲೆ ಉತ್ತಮ ಶಿಕ್ಷಣ ಕೇಂದ್ರವಾಗಿ ರೂಪುಗೊಂಡಿದ್ದು, ಮಕ್ಕಳಲ್ಲಿ ಆತ್ಮವಿಶ್ವಾಸ, ಸ್ವಾಭಿಮಾನ ಹಾಗೂ ಸಾಮಾಜಿಕ ಹೊಂದಾಣಿಕೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ತಿಳಿಸಿದರು.
ಶಾಲೆಯ ನೂತನ ಕಟ್ಟಡವು ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದ್ದು, ವಿಶೇಷಚೇತನ ಮಕ್ಕಳ ಅಗತ್ಯಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಮಕ್ಕಳ ಶೈಕ್ಷಣಿಕ, ಮಾನಸಿಕ, ದೈಹಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಇಲ್ಲಿ ನಿರ್ಮಿಸಲಾಗಿದೆ. ಬಿಎಲ್ಡಿಇಎ ಹಾಗೂ ಸಂಭವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ಗಳು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾಗಿದ್ದು, ಈ ಸಮನ್ವಯ ಶಾಲೆಯ ಮೂಲಕ ವಿಶೇಷಚೇತನ ಮಕ್ಕಳ ಜೀವನದಲ್ಲಿ ಹೊಸ ಆಶಾಕಿರಣ ಮೂಡಲಿದೆ ಎಂದು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಮಠಗಳ ಸ್ವಾಮೀಜಿಗಳು, ವೈದ್ಯರು, ಶಿಕ್ಷಕರು, ಪಾಲಕರು, ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿ ನೂತನ ಕಟ್ಟಡ ಉದ್ಘಾಟನೆಗೆ ಸಾಕ್ಷಿಯಾದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande