
ಕೋಲಾರ, ೨೫ ಜುಲೈ (ಹಿ.ಸ):
ಆ್ಯಂಕರ್ : ಪಠ್ಯದಷ್ಟೇ ಕ್ರೀಡೆಗೂ ಮಹತ್ವವಿದ್ದು, ಉತ್ತಮ ಆರೋಗ್ಯದ ಜತೆಗೆ ಸದಾ ಕ್ರಿಯಾಶೀಲವಾಗಿರಲು ನೆರವಾಗುತ್ತದೆ ಎಂದು ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಕೆ.ಲೀಲಾ ಕರೆ ನೀಡಿದರು.
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದ ಶಾಲಾ ಆವರಣದಲ್ಲಿ ಪ್ರಸ್ತುತ ಸಾಲಿನ ಶಾಲಾ ಹಂತದ ಕ್ರೀಡಾಕೂಟಕ್ಕೆ ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಕ್ರೀಡೆಗಳಿಂದ ವಿದ್ಯಾರ್ಥಿಗಳಲ್ಲಿ ಸೌಹಾರ್ದತೆ ನೆಲಸುವುದರ ಜತೆಗೆ ಎದುರಾಗುವ ಸೋಲನ್ನು ಕ್ರೀಡಾಮನೋಭಾವದಿಂದ ತೆಗೆದುಕೊಂಡು ಮತ್ತೆ ಗೆಲುವಿನತ್ತ ಹೆಜ್ಜೆ ಹಾಕಬೇಕೆಂಬ ಆತ್ಮಸ್ಥೆöÊರ್ಯ ಬೆಳೆಯುತ್ತದೆ. ಪಠ್ಯಕ್ಕೆ ನೀಡುವಷ್ಟೇ ಕ್ರೀಡೆಗಳಿಗೂ ಪ್ರಾಮುಖ್ಯತೆ ನೀಡಬೇಕಾಗಿದೆ, ಕೇವಲ ಅಂಕಗಳಿಕೆಯ ಯಂತ್ರಗಳಾಗಬಾರದು ಎಂದ ಅವರು, ಉತ್ತಮ ಆರೋಗ್ಯದ ಜತೆಗೆ ಪಠ್ಯ ಕಲಿಕೆಗೂ ಕ್ರೀಡೆ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳಿಗೆ ಕಲಿಕೆಯ ಜತೆಗೆ ಮನೋಲ್ಲಾಸವೂ ಲಭಿಸುತ್ತದೆ ಎಂದರು.
ಕ್ರೀಡಾ ಕ್ಷೇತ್ರದಲ್ಲಿ ಇಂದು ಅನೇಕರು ಇಡೀ ವಿಶ್ವವೇ ಮೆಚ್ಚುವ ರೀತಿಯಲ್ಲಿ ಸಾಧನೆ ಮಾಡಿರುವುದನ್ನು ಕಂಡಿದ್ದೇವೆ, ಅಂತಹ ಸಾಧಕರು ನೀವು ಆಗಲು ಪರಿಶ್ರಮ, ಆಸಕ್ತಿ ಅತ್ಯಗತ್ಯ. ಶಾಲಾ ಹಂತದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಹೋಬಳಿಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಮಾಡುತ್ತಿದ್ದು, ಅಲ್ಲಿಯೂ ಉತ್ತಮ ಸಾಧನೆಯೊಂದಿಗೆ ಜಿಲ್ಲಾ,ರಾಜ್ಯಮಟ್ಟದಲ್ಲೂ ಶಾಲೆಯನ್ನು ಪ್ರತಿನಿಧಿಸಿ ಸಾಧಕರಾಗಿ ಹೊರಹೊಮ್ಮಿ ಎಂದು ಕಿವಿಮಾತು ಹೇಳಿದರು.
ಮುಖ್ಯಶಿಕ್ಷಕಿ ತಾಹೇರಾನುಸ್ರತ್ ಮಾತನಾಡಿ, ಮಕ್ಕಳಲ್ಲಿ ಉತ್ತಮ ಆರೋಗ್ಯ ನೆಲಸಲು ಕ್ರೀಡೆಗಳು ಸಹಕಾರಿಯಾಗಿವೆ, ಇಂದಿನ ಆಹಾರ ಪದ್ದತಿಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಬರುತ್ತವೆ ಎಂದು ಎಚ್ಚರಿಸಿದ ಅವರು, ನಿತ್ಯ ವ್ಯಾಯಾಮ,ಆಟೋಟಳಿಗೆ ಹೆಚ್ಚಿನ ಗಮನ ನೀಡಿ. ಕ್ರೀಡೆಗಳಲ್ಲಿ ಸಾಧನೆ ಮಾಡಿದರೆ ಮುಂದಿನ ನಿಮ್ಮ ಬದುಕಿಗೂ ಅದು ಆಧಾರವಾಗಲಿದೆ, ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಉನ್ನತ ವ್ಯಾಸಂಗ ಮತ್ತು ಉದ್ಯೋಗದಲ್ಲೂ ಮೀಸಲಾತಿ ಇದೆ ಎಂದು ತಿಳಿಸಿದ ಅವರು, ಸೋಲು ಗೆಲುವನ್ನು ಕ್ರೀಡಾಮನೋಭಾವದಿಂದ ಸ್ವೀಕರಿಸಿ, ದ್ವೇಷ,ಅಸೂಯೆಗೆ ಜಾಗ ನೀಡದಿರಿ ಎಂದು ತಿಳಿಸಿದರು.
ಶಿಕ್ಷಕಿ ಸುಗುಣಾ ಕ್ರೀಡಾಕೂಟದ ನೇತೃತ್ವ ವಹಿಸಿದ್ದು, ವಿದ್ಯಾರ್ಥಿ ಜೀವನದಲ್ಲಿ ಪಠ್ಯಕ್ಕಿರುವ ಪ್ರಧಾನ್ಯತೆ ಕ್ರೀಡೆಗೂ ಇದೆ, ಕ್ರೀಡೆಗಳಿಂದ ಪರಸ್ಪರ ಸೌಹಾರ್ದತೆ, ಆತ್ಮಸ್ಥೆöÊರ್ಯ ಮೂಡಲು ಕಾರಣವಾಗಿದೆ ಎಂದು ತಿಳಿಸಿ, ವಿದ್ಯಾರ್ಥಿಗಳು ಉತ್ತಮ ಸಾಧನೆಯೊಂದಿಗೆ ಹೋಬಳಿಮಟ್ಟಕ್ಕೆ ಹೋಗಲು ಸಿದ್ದರಾಗಿ ಎಂದರು.
ಅರಾಭಿಕೊತ್ತನೂರು ಗ್ರಾಮದ ರಸ್ತೆಯಲ್ಲಿ ಓಟದ ಸ್ಪರ್ಧೆ ನಡೆಸಿದ್ದು, ಉಳಿದ ಕ್ರೀಡೆಗಳನ್ನು ಶಾಲೆಯ ಆವರಣದಲ್ಲಿ ನಡೆಸಲಾಯಿತು. ಅಥ್ಲೆಟಿಕ್ಸ್, ಗುಂಪು ಆಟಗಳಾದ ವಾಲಿಬಾಲ್, ಕಬ್ಬಡ್ಡಿ, ಥ್ರೋಬಾಲ್, ಖೋಖೋ ಪಂದ್ಯಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದರು. ಅವರಲ್ಲಿ ಉತ್ತಮ ಸಾಧನೆ ಮಾಡಿದ ಮಕ್ಕಳನ್ನು ಹೋಬಳಿ ಮಟ್ಟಕ್ಕೆ ಆಯ್ಕೆ ಮಾಡಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್