
ಕೋಲಾರ ೨೫ ಜುಲೈ (ಹಿ.ಸ):
ಆ್ಯಂಕರ್ : ದ್ವಿಚಕ್ರ ವಾಹನ ಸವಾರರೊಬ್ಬರು ತಾನು ಕಾರಿನಲ್ಲಿ ಹೋಗುತ್ತಿದ್ದಾಗ ಕೈ ಸನ್ನೆ ಮಾಡಿ ಅಸಭ್ಯವಾಗಿ ವರ್ತಿಸಿದ. ಆತನನ್ನು ಪ್ರಶ್ನೆ ಮಾಡಿದಾಗ ನಾನು ಪ್ರಯಾಣಿಸುತ್ತಿದ್ದ ಕಾರನ್ನು ತಡೆದು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಎಂದು ಮಾಲೂರು ಪೊಲೀಸರಿಗೆ ಅಲ್ಲಿನ ಸಿವಿಲ್ ಮತ್ತು ನ್ಯಾಯಿಕಾ ದಂಡಾಧಿಕಾರಿ ಗಾಯತ್ರಿ ಅವರು ಮಾಲೂರು ಪೊಲೀಸರಿಗೆ ನೀಡಿರುವ ದೂರು ಈಗ ಚರ್ಚೆಗೆ ಗ್ರಾಸವಾಗಿದೆ.
ನ್ಯಾಯಾಧೀಶರಾದ ಗಾಯತ್ರಿ ಅವರು ಅಧಿಕಾರ ದುರುಪಯೋಗಪಡಿಸಿಕೊಂಡು ಅಮಾಯಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬೆಂಗಳೂರಿನ ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಹೈಕೋರ್ಟಿಗೆ ದೂರು ನೀಡಿದ್ದಾರೆ. ಈ ಘಟನೆ ಸಾರ್ವಜನಿಕ ಮತ್ತು ವಕೀಲರ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮಾಲೂರಿನಲ್ಲಿ ಸಿವಿಲ್ ಮತ್ತು ನ್ಯಾಯಿಕಾ ದಂಡಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಗಾಯತ್ರಿ ಅವರು ಕಳೆದ ೧೮ರಂದು ತಮ್ಮ ವಾಹನದಲ್ಲಿ ನ್ಯಾಯಾಲಯಕ್ಕೆ ತೆರಳುತ್ತಿದ್ದಾಗ ಎದುರು ದಿಕ್ಕಿನಲ್ಲಿ ಬಂದ ವಿನಯ್ ಎಂಬ ಯುವಕ ಬೆರಳು ತೋರಿಸಿ ಸನ್ನೆ ಮಾಡಿದ. ಆ ವ್ಯಕ್ತಿ ಹೆಲ್ಮೆಟ್ ಧರಿಸಿರಲಿಲ್ಲ ತಮ್ಮ ಪತಿ ಕಾರು ಚಾಲನೆ ಮಾಡುತ್ತಿದ್ದರು. ನಮ್ಮನ್ನು ನೋಡಿದ ಆರೋಪಿ ಅವಾಚ್ಯ ಶಬ್ದಗಳಿಂದ ನಿಂದಿಸಿದ. ಹಿಂಬಾಲಿಸಿ ಕಾರಿನಲ್ಲಿ ಹೋದಾಗ ನಿರ್ಮಾಣ ಹಂತದಲ್ಲಿದ್ದ ಮನೆಯ ಮಾಳಿಗೆಯ ಮೇಲೆ ನಿಂತಿದ್ದ. ಮಾಳಿಗೆಯ ಮೇಲಿನಿಂದ ಇಳಿದ ಆರೋಪಿ ಪುನಃ ಬಲಗೈ ತೋರಿಸಿ ನಿಮ್ಮ ಕಾರನ್ನು ನನ್ನ ಮೇಲೆ ಹರಿಸುತ್ತಿಯ ಎಂದು ಏಕವಚನದಲ್ಲಿ ನಿಂದಿಸಿದ.
ಆಗ ನಾನು ಆ ವ್ಯಕ್ತಿಗೆ ಸರಿಯಾಗಿ ಮಾತನಾಡು ಎಂದು ಎಚ್ಚರಿಕೆ ನೀಡಿದೆ. ಸರಿಯಾಗಿ ದ್ವಿಚಕ್ರ ವಾಹನ ಚಾಲನೆ ಮಾಡಬೇಕೆಂದು ನಮ್ಮ ಪತಿ ಹೇಳಿದರು. ಆಗ ವ್ಯಕ್ತಿ ನಿಮ್ಮ ಪತಿ ಕಾರು ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಹಾಕಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ.
ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಹಾಕಿಲ್ಲ ಎಂದು ಕೇಳಿದ್ದಕ್ಕೆ ಆತನ ತಾಯಿ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಪೊಲೀಸರಿಗೆ ದೂರು ನೀಡಿ ಬುದ್ದಿ ಕಲಿಸುವುದಾಗಿ ಎಚ್ಚರಿಕೆ ನೀಡಿದರು. ನಿನ್ನ ಭಾಷೆ ಸರಿ ಇಲ್ಲ ಸರಿಯಾಗಿ ಮಾತನಾಡು ಎಂದು ನಾನು ಹೇಳಿದೆ. ಆಗ ಆಗ ಮಹಿಳೆ ನಿಮ್ಮ ಗಂಡನಿಗೆ ಮಾತ್ರ ಇಂಗ್ಲಿಷ್ ಬರುತ್ತದೆ. ನನ್ನ ಮಗನಿಗೂ ಇಂಗ್ಲಿಷ್ ಬರುತ್ತದೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ತಾಯಿ ಮತ್ತು ಮಗನ ಜಗಳದಿಂದ ನಾನು ಸಕಾಲದಲ್ಲಿ ನ್ಯಾಯಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಅವರು ನನ್ನ ಕಾರನ್ನು ಅಡ್ಡಗಟ್ಟಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು ಎಂದು ಆರೋಪಿಸಿ ನ್ಯಾಯಾಧೀಶರಾದ ಗಾಯತ್ರಿ ಮಾಲೂರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರನ್ನು ಘಟನೆ ನಡೆದ ಮೂರು ದಿನಗಳ ನಂತರ ತಡವಾಗಿ ನೀಡಲಾಗಿದೆ.
ಮಾಲೂರು ಪೊಲೀಸರು ಇಂಜಿನಿಯರಿAಗ್ ವಿದ್ಯಾರ್ಥಿ ವಿನಯ್, ಆತನ ತಾಯಿ ಕವಿತಾ, ಸಿ.ಪಿ ವೆಂಕಟೇಶ್ ಹಾಗೂ ಇತರ ವಿರುದ್ಧ ಎಫ್.ಐ.ಆರ್. ದಾಖಲಿಸಿದ್ದಾರೆ. ನ್ಯಾಯಾಧೀಶರು ನೀಡಿದ ದೂರಿನ ಮೇರೆಗೆ ಮಾಲೂರು ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮೇರೆಗೆ ಸೆಕ್ಷನ್ ೧೨೬, ೧೩೨, ೩೫೧ ಪ್ರಕಾರ ದೂರು ದಾಖಲಿಸಿಕೊಂಡಿದ್ದಾರೆ.
ಪೊಲೀಸರು ಎಫ್.ಐ.ಆರ್. ದಾಖಲಿಸಿದ ನಂತರ ಆರೋಪಿ ವಿನಯ್ ನನ್ನು ಬಂಧಿಸಿದ್ದಾರೆ ಅಲ್ಲದೆ ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆಗಾಗಿ ಪೊಲೀಸರು ೧೭೦೦೦ ದಂಡ ವಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ನ್ಯಾಯಾಧೀಶರಾದ ಗಾಯತ್ರಿ ಹಾಗೂ ಅವರ ಪತಿ, ಯುವಕ ಹಾಗೂ ಅವರ ತಾಯಿಯೊಂದಿಗೆ ವಾಗ್ವಾದ ನಡೆಸುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ. ತಮ್ಮ ಅನುಮತಿ ಇಲ್ಲದೆ ವೀಡಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿದೆ. ಆರೋಪಿಯ ವರ್ತನೆಯಿಂದ ತಮಗೆ ಮಾನ ಹಾನಿಯಾಗಿದೆ ಎಂದು ದೂರಿನಲ್ಲಿ ನ್ಯಾಯಾಧೀಶರಾದ ಗಾಯತ್ರಿ ಆರೋಪಿಸಿದ್ದಾರೆ.
ದೂರು ನೀಡಿದ ನಂತರ ನಿಯಮದ ಪ್ರಕಾರ ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಾಗಿತ್ತು. ಆದರೆ ನ್ಯಾಯಾಧೀಶರು ದೂರು ನೀಡಿದ ಕೂಡಲೇ ಮಾಲೂರು ಪೊಲೀಸರು ಒತ್ತಡಕ್ಕೆ ಮಣಿದು ಎಫ್.ಐ.ಆರ್. ದಾಖಲಿಸಿ ಆರೋಪಿಗಳನ್ನು ಬಂಧಿಸಿದಿದ್ದಾರೆ ಎಂದು ವಕೀಲರ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.
ನ್ಯಾಯಾಧೀಶರು ಮತ್ತು ಯುವಕ ಹಾಗೂ ಆತನ ತಾಯಿ ವಾಗ್ವಾದ ನಡೆಸಿದ ವಿಡಿಯೋ ವೈರಲ್ ಆಗಿದ್ದು, ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಹಾಗೂ ಇತರರು ಗಮನಿಸಿದ್ದಾರೆ. ಈ ಘಟನೆಯನ್ನು ತೀವ್ರವಾಗಿ ವಿರೋಧಿಸಿರುವ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಹೈಕೋರ್ಟ್ ಆಡಳಿತ ನ್ಯಾಯಾಧೀಶರಾದ ಎಸ್ ಆರ್ ಕೃಷ್ಣಕುಮಾರ್ ರವರಿಗೆ ದೂರು ನೀಡಿದ್ದಾರೆ ಮಾಲೂರು ನ್ಯಾಯಾಧೀಶರಾದ ಗಾಯತ್ರಿ ಅವರು ಬೀದಿ ರಂಪಾಟ ನಡೆಸಿ ಒಬ್ಬ ಸಾಮಾನ್ಯ ವಿದ್ಯಾರ್ಥಿಯ ವಿರುದ್ಧ ಪೊಲೀಸರಿಗೆ ದೂರು ನೀಡಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ನ್ಯಾಯಾಧೀಶರು ಅಮಾನವೀಯವಾಗಿ ವರ್ತಿಸಿದ್ದಾರೆ ಅವರನ್ನು ಸೇವೆಯಿಂದ ಅಮಾನತ್ತು ಪಡಿಸಿ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್ ಗೆ ಬರೆದಿರುವ ದೂರಿನಲ್ಲಿ ವಿವೇಕ್ ಸುಬ್ಬಾರೆಡ್ಡಿ ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್