
ಚಿತ್ರದುರ್ಗ, 25 ಜುಲೈ (ಹಿ.ಸ.):
ಆ್ಯಂಕರ್:
ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಕುತೂಹಲ ಮೂಡಿಸಿರುವ ಸಚಿವ ಸಂಪುಟ ವಿಸ್ತರಣೆಗೆ ಅಂತಿಮವಾಗಿ ಮುಹೂರ್ತ ಕೂಡಿಬಂದಿದ್ದು, ಮುಂದಿನ ವಾರವೇ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಚಿತ್ರದುರ್ಗದ ಮುರುಘಾ ಮಠದ ಅನುಭವ ಮಂಟಪದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೊಸ ಸಚಿವರ ಸೇರ್ಪಡೆಯ ಬಳಿಕ ಎಲ್ಲರೂ ಒಟ್ಟಾಗಿ ಕೈಜೋಡಿಸಿ ರಾಜ್ಯದ ಗಂಭೀರ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬೇಕಿದೆ ಎಂದು ತಿಳಿಸಿದರು.
ಕುಡಿಯುವ ನೀರಿಗೆ ₹1 ಕೋಟಿ ಮುಕ್ತ ಅವಕಾಶ;
ನಿರ್ಲಕ್ಷ್ಯಕ್ಕೆ ಕಠಿಣ ಎಚ್ಚರಿಕೆ
ರಾಜ್ಯದ ಗ್ರಾಮೀಣ ಭಾಗದಲ್ಲಿ ತಲೆದೋರಿರುವ ತೀವ್ರ ಕುಡಿಯುವ ನೀರಿನ ಬಿಕ್ಕಟ್ಟನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಸ್ಥಳೀಯ ಆಡಳಿತಕ್ಕೆ ಮುಕ್ತ ಅಧಿಕಾರ ನೀಡಿದೆ. ಬೆಳಗಾವಿ ಸಭೆಯ ನಿರ್ಣಯದಂತೆ, ಗ್ರಾಮೀಣ ಪ್ರದೇಶದ ಪ್ರತಿ ವಿಧಾನಸಭಾ ಕ್ಷೇತ್ರದ ಕುಡಿಯುವ ನೀರು ಪೂರೈಕೆಗಾಗಿ ಜಿಲ್ಲಾಡಳಿತಗಳು ₹1 ಕೋಟಿ ರೂಪಾಯಿವರೆಗೆ ಖರ್ಚು ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ತುರ್ತು ಕಾರ್ಯದಲ್ಲಿ ಯಾವುದೇ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ರೈತರಿಗೆ ಎಚ್ಚರಿಕೆ:
ಸ್ವಯಂ ನಿರ್ಧಾರದ ಬೆಳೆಗಳಿಗೆ ಸರ್ಕಾರದ ನೆರವಿಲ್ಲ
ರಾಜ್ಯದಲ್ಲಿ ತೀವ್ರ ನೀರಿನ ಅಭಾವವಿರುವ ಹಿನ್ನೆಲೆಯಲ್ಲಿ ರೈತರು ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿರುವ ಡಿ.ಕೆ. ಶಿವಕುಮಾರ್, ಮುಂದಿನ ಮಳೆ ಅಥವಾ ಅಣೆಕಟ್ಟಿನ ನೀರನ್ನು ನಂಬಿ ಬೇಕಾಬಿಟ್ಟಿ ಬೆಳೆಗಳನ್ನು ಹಾಕಬಾರದು ಎಂದು ಸ್ಪಷ್ಟಪಡಿಸಿದರು. ನೀರಾವರಿ ಸಮಿತಿ ಮತ್ತು ಸರ್ಕಾರದ ಮಾರ್ಗದರ್ಶನದ ಮೇಲೆಯೇ ಬೆಳೆಗಳ ನಿರ್ಧಾರ ಕೈಗೊಳ್ಳಬೇಕು. ಸರ್ಕಾರದ ಸೂಚನೆ ಮೀರಿ ಸ್ವಯಂ ನಿರ್ಧಾರದಿಂದ ಬೆಳೆಗಳನ್ನಿಟ್ಟು ನಷ್ಟ ಅನುಭವಿಸಿದರೆ ಅದಕ್ಕೆ ರೈತರೇ ಸಂಪೂರ್ಣ ಹೊಣೆಗಾರರಾಗಲಿದ್ದು, ಸರ್ಕಾರದಿಂದ ಯಾವುದೇ ಪರಿಹಾರ ಅಥವಾ ಸಹಕಾರ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರಸ್ತುತ ಆಲಮಟ್ಟಿ ಜಲಾಶಯವನ್ನು ಹೊರತುಪಡಿಸಿ ರಾಜ್ಯದ ಬೇರೆ ಯಾವುದೇ ಅಣೆಕಟ್ಟಿನಲ್ಲೂ ನೀರಿನ ಮಟ್ಟ ಹೆಚ್ಚಳವಾಗಿಲ್ಲಾ ಎಂದರು.
ಕಾವೇರಿ ನೀರು ಬಿಡಲು ಸಾಧ್ಯವಿಲ್ಲ:
ದೆಹಲಿಗೆ ಸರ್ವಪಕ್ಷ ನಿಯೋಗ
ಬರ ಪರಿಸ್ಥಿತಿಯ ಕುರಿತು ಕೇಂದ್ರ ಸರ್ಕಾರದ ಮೇಲೆ ತೀವ್ರ ಒತ್ತಡ ತರಲು ರಾಜ್ಯ ಸರ್ಕಾರ ಸಜ್ಜಾಗಿದೆ. ಕಾವೇರಿ ಜಲಾಶಯಗಳಲ್ಲಿ ಕುಡಿಯುವ ನೀರಿಗೇ ಪರದಾಡುವ ಪರಿಸ್ಥಿತಿ ಇರುವುದರಿಂದ ತಮಿಳುನಾಡಿಗೆ ನೀರು ಹರಿಸುವುದು ಅಸಾಧ್ಯವೆಂದು ಕಾವೇರಿ ನೀರು ನಿರ್ವಹಣಾ ಸಮಿತಿಗೆ ಆಗಿ ತಿಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೂ 'ಎಲ್ ನಿನೋ' ಪರಿಣಾಮ ಹಾಗೂ ರಾಜ್ಯದ ಕಷ್ಟದ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಈ ಕುರಿತು ಚರ್ಚಿಸಲು ಸೋಮವಾರ ದೆಹಲಿಯಲ್ಲಿ ಸಂಸದರ ಸಭೆ ಕರೆಯಲಾಗಿದ್ದು, ಶೀಘ್ರದಲ್ಲೇ ಕೇಂದ್ರಕ್ಕೆ ಸರ್ವಪಕ್ಷ ನಿಯೋಗವನ್ನು ಕರೆದೊಯ್ಯಲಾಗುವುದು ಎಂದು ತಿಳಿಸಿದರು.
ಅಧಿಕಾರಿಗಳ ವಿರುದ್ಧ ವಾಗ್ದಾಳಿ ಹಾಗೂ ಅರಣ್ಯ ಇಲಾಖೆಗೆ ಎಚ್ಚರಿಕೆ:
ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯನ್ನು ತರಾಟೆಗೆ ತೆಗೆದುಕೊಂಡ ಅವರು, ಜನರ ಸಮಸ್ಯೆಗಳನ್ನು ಕಚೇರಿಗಳಲ್ಲಿ ತಳ್ಳಿಹಾಕುವ ಗುಣ ಬಿಟ್ಟು ಗೌರವಯುತವಾಗಿ ಸ್ಪಂದಿಸಬೇಕು ಎಂದು ಎಚ್ಚರಿಸಿದರು. ಅಲ್ಲದೆ, ತೀವ್ರ ಬರವಿರುವ ಈ ಸಮಯದಲ್ಲಿ ಗ್ರಾಮೀಣ ಭಾಗದ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಕೆ, ಬೋರ್ವೆಲ್ ಕೊರೆಯುವುದು ಹಾಗೂ ರಸ್ತೆ ದುರಸ್ತಿಗೆ ಅರಣ್ಯ ಇಲಾಖೆಯ ನಿಯಮಗಳನ್ನು ಮುಂದಿಟ್ಟುಕೊಂಡು ಅಧಿಕಾರಿಗಳು ಯಾವುದೇ ತೊಡಕುಂಟು ಮಾಡಬಾರದು ಎಂದು ತಾಕೀತು ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII