ಮಾಧ್ಯಮ ಧರ್ಮ, ಸತ್ಯತೆ ಹಾಗೂ ವೃತ್ತಿಪರತೆಗೆ ಕಟಿಬದ್ಧರಾಗಿರಿ: ನ್ಯಾ. ಬಿ. ವೀರಪ್ಪ
ಹೊಸಪೇಟೆ, 25 ಜುಲೈ (ಹಿ.ಸ.): ಆ್ಯಂಕರ್ : ಮಾಧ್ಯಮಗಳು ಕೂಡ ಪ್ರಜಾಪ್ರಭುತ್ವದ ನಾಲ್ಕನೇ ಕಂಬವಾಗಿದ್ದು, ಸಮಾಜಕ್ಕೆ ಮುಖಪುಟದಂತೆ ಕೆಲಸ ಮಾಡುತ್ತವೆ. ಪತ್ರಕರ್ತರು ತಮ್ಮ ವೃತ್ತಿಧರ್ಮ, ಸತ್ಯಸಂಧತೆ, ನಿಷ್ಪಕ್ಷಪಾತತನ ಹಾಗೂ ಧೈರ್ಯದಿಂದ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಹಣದ ಆಸೆಗೆ ಬಿದ್ದು ಸುಳ್ಳು ಸುದ
ಮಾಧ್ಯಮ ಧರ್ಮ, ಸತ್ಯತೆ ಹಾಗೂ ವೃತ್ತಿಪರತೆಗೆ ಕಟಿಬದ್ಧರಾಗಿರಿ: ನ್ಯಾ. ಬಿ. ವೀರಪ್ಪ


ಹೊಸಪೇಟೆ, 25 ಜುಲೈ (ಹಿ.ಸ.):

ಆ್ಯಂಕರ್ : ಮಾಧ್ಯಮಗಳು ಕೂಡ ಪ್ರಜಾಪ್ರಭುತ್ವದ ನಾಲ್ಕನೇ ಕಂಬವಾಗಿದ್ದು, ಸಮಾಜಕ್ಕೆ ಮುಖಪುಟದಂತೆ ಕೆಲಸ ಮಾಡುತ್ತವೆ. ಪತ್ರಕರ್ತರು ತಮ್ಮ ವೃತ್ತಿಧರ್ಮ, ಸತ್ಯಸಂಧತೆ, ನಿಷ್ಪಕ್ಷಪಾತತನ ಹಾಗೂ ಧೈರ್ಯದಿಂದ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಹಣದ ಆಸೆಗೆ ಬಿದ್ದು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂದು ರಾಜ್ಯ ಉಪ ಲೋಕಾಯುಕ್ತರು ಹಾಗೂ ನ್ಯಾಯಮೂರ್ತಿ ಬಿ. ವೀರಪ್ಪ ಅವರು ತಿಳಿಸಿದ್ದಾರೆ.

ವಿಜಯನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹೊಸಪೇಟೆ ಪುಣ್ಯಾನಂದಪುರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ 'ಪತ್ರಿಕಾ ದಿನಾಚರಣೆ' ಕಾರ್ಯಕ್ರಮವನ್ನು ಉದ್ಘಾಟಿಸಿ, ಸಾಧಕರಿಗೆ ಸನ್ಮಾನ ಹಾಗೂ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.

'ಲೋಗೋ ಗನ್ ಆಗಲಿ, ಪೆನ್ನು ಕತ್ತಿಯಾಗಲಿ' ಯುವ ಪತ್ರಕರ್ತರಿಗೆ ಎಚ್ಚರಿಕೆ ಹಾಗೂ ಮಾರ್ಗದರ್ಶನ

ನೀಡಿದ ಅವರು ಮಾಧ್ಯಮದ ಶಕ್ತಿ ಮತ್ತು ಜವಾಬ್ದಾರಿಯನ್ನು ಸ್ಮರಿಸಿ ಮಾಧ್ಯಮ ಸಂಸ್ಥೆಯ ಪ್ರತಿನಿಧಿಯಾಗಿ ನೀವು ಹಿಡಿಯುವ ಲೋಗೋ ಒಂದು ಗನ್ (ತುಪಾಕಿ) ನಂತೆ ಕೆಲಸ ಮಾಡಬೇಕು ಹಾಗೂ ನಿಮ್ಮ ಕೈಯಲ್ಲಿರುವ ಲೇಖನಿ (ಪೆನ್ನು) ಸತ್ಯವನ್ನು ಬಿಚ್ಚಿಡುವ ಕತ್ತಿಯಂತೆ ಕೆಲಸ ಮಾಡಬೇಕು. ಅಧಿಕಾರಸ್ಥರು ಮತ್ತು ಭ್ರಷ್ಟರು ನಿಮ್ಮ ಲೇಖನಿಗೆ ಹೆದರಬೇಕೇ ಹೊರತು, ನೀವು ಯಾರ ಒತ್ತಡಕ್ಕೂ ಮಣಿಯಬಾರದು ಎಂದರು.

ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರದ ಹೆಸರಿನಲ್ಲಿ ನಡೆಯುತ್ತಿರುವ ದುರ್ಬಳಕೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ಕೆಲವರು ಒಂದು ಮೊಬೈಲ್ ಹಿಡಿದುಕೊಂಡು ಯೂಟ್ಯೂಬ್ ಚಾನೆಲ್ ಅಥವಾ ಪತ್ರಿಕೆ ಹೆಸರಿನಲ್ಲಿ ಅಧಿಕಾರಿಗಳನ್ನು, ವ್ಯಾಪಾರಿಗಳನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ. ಸಣ್ಣಪುಟ್ಟ ಮೇಲಾಧಿಕಾರಿಗಳನ್ನು ಅಥವಾ ಸಣ್ಣ ಗೂಡಂಗಡಿಯವರನ್ನು ಹೆದರಿಸಿ ಹಣ ವಸೂಲಿ ಮಾಡುವುದು, ಪೆನ್ಡ್ರೈವ್ ಹಾಗೂ ಪೆನ್ಡ್ರೈವ್ ಬಂಚ್ಗಳನ್ನು ಇಟ್ಟುಕೊಂಡು ಬೆದರಿಸುವುದು ಪತ್ರಿಕಾರಂಗಕ್ಕೆ ತರುವ ದೊಡ್ಡ ಕಳಂಕ. ಈ ರೀತಿಯ ಪ್ರವೃತ್ತಿ ತಕ್ಷಣವೇ ನಿಲ್ಲಬೇಕು ಎಂದು ಎಚ್ಚರಿಸಿದರು.

ಸತ್ಯಸಂಧತೆಗೆ ಆದ್ಯತೆ: ಸುಳ್ಳು ಸುದ್ದಿ ನೀಡಿದರೆ 3 ವರ್ಷ ಜೈಲು ಶಿಕ್ಷೆ!

ಪತ್ರಿಕೋದ್ಯಮದಲ್ಲಿ ಸುದ್ದಿ ಪ್ರಕಟಿಸುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಕಡ್ಡಾಯ ಎಂದು ಪ್ರತಿಪಾದಿಸಿದ ಉಪ ಲೋಕಾಯುಕ್ತರು, ಯಾರೋ ನೀಡಿದ ಅರ್ಧಸತ್ಯ ಅಥವಾ ಸುಳ್ಳು ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಸುದ್ದಿ ಮಾಡಿ ಒಬ್ಬರ ಮಾನ-ಮರ್ಯಾದೆ ಹರಾಜು ಹಾಕುವುದು ಧರ್ಮವಲ್ಲ. ಪ್ರಕಟಿಸುವ ಮುನ್ನ ಸತ್ಯಾಂಶವನ್ನು ಪರಿಶೀಲಿಸಿ, ಲೋಕಾಯುಕ್ತ ಸಂಸ್ಥೆಯು ಸಾರ್ವಜನಿಕರ ಸೇವೆಯಲ್ಲಿದೆ. ಆದರೆ, ಯಾರಾದರೂ ಸ್ವಾರ್ಥಕ್ಕಾಗಿ ಅಥವಾ ವೈಯಕ್ತಿಕ ದ್ವೇಷಕ್ಕಾಗಿ ಸುಳ್ಳು ಮಾಹಿತಿ ನೀಡಿ ಸಾರ್ವಜನಿಕರ ಅಥವಾ ಅಧಿಕಾರಿಗಳ ತೇಜೋವಧೆ ಮಾಡಲು ಯತ್ನಿಸಿದರೆ ಅಂತಹವರ ವಿರುದ್ಧ ಕಾನೂನು ಕಠಿಣವಾಗಿದೆ. ಲೋಕಾಯುಕ್ತ ಕಾಯ್ದೆಯಡಿ ಸುಳ್ಳು ದೂರು ಅಥವಾ ಸುಳ್ಳು ಮಾಹಿತಿ ನೀಡಿದರೆ 3 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ ₹5000 ವರೆಗೆ ದಂಡ ವಿಧಿಸಲು ಅವಕಾಶವಿದೆ ಎಂಬುದನ್ನು ನೆನಪಿಸಿದರು.

ಉಪವಾಸ ಬಿದ್ದರೂ ಪರವಾಗಿಲ್ಲ, ಸ್ವಾಭಿಮಾನವನ್ನು ಮಾತ್ರ ಎಂದಿಗೂ ಮಾರಿಕೊಳ್ಳಬೇಡಿ. ಸತ್ಯದ ಪರವಾಗಿ ನಿಲ್ಲಿ ನಿಮ್ಮ ಲೇಖನಿ ಮತ್ತು ಧ್ವನಿ ಸಮಾಜಕ್ಕೆ ಕಾವಲು ನಾಯಿಯಂತೆ ಕೆಲಸ ಮಾಡಬೇಕೇ ಹೊರತು, ಸ್ವಾರ್ಥದ ಕೊಡೆಯಾಗಬಾರದು ಎಂದು ಭಾವನಾತ್ಮಕವಾಗಿ ಯುವ ಪತ್ರಕರ್ತರಿಗೆ ಕಿವಿಮಾತು ಹೇಳಿದರು.

ಅಕ್ರಮ ಗಣಿಗಾರಿಕೆ ಮತ್ತು ಪರಿಸರ ನಾಶ: ಮಂಡ್ಯ ಹಾಗೂ ಬಾಗಲಕೋಟೆ ಭಾಗಗಳಲ್ಲಿ ನಡೆದ ಅಕ್ರಮ ಗಣಿಗಾರಿಕೆ ಮತ್ತು ನಿಯಮಬಾಹಿರ ಕ್ವಾರಿಗಳ ಮೇಲೆ ಸ್ವತಃ ದಾಳಿ ನಡೆಸಿದ ಘಟನೆಯನ್ನು ಮೆಲಕುಹಾಕಿದರು.

ಗೃಹಲಕ್ಷ್ಮಿ ಯೋಜನೆ ಮತ್ತು ಅಕ್ರಮ ದುಡ್ಡು ವಸೂಲಿ: ಹೊಸಪೇಟೆಯಲ್ಲಿ ಬಡ ಮಹಿಳೆಯೊಬ್ಬರಿಗೆ 'ಗೃಹಲಕ್ಷ್ಮಿ' ಯೋಜನೆಯ ಹಣ ತಲುಪದೇ ಇದ್ದಾಗ, ಸಂಬಂಧಪಟ್ಟ ವರದಿಯನ್ನು ಪತ್ರಿಕೆಯಲ್ಲಿ ನೋಡಿ ತಕ್ಷಣವೇ ಸ್ವಯಂಪ್ರೇರಿತ ದೂರು ದಾಖಲಿಸಿ, ಆ ಬಡ ಮಹಿಳೆಗೆ ಬರಬೇಕಾದ ಹಣವನ್ನು ಕೊಡಿಸಿ, ತಪ್ಪಿತಸ್ಥ ಅಧಿಕಾರಿಗಳಿಂದ ದಂಡ ವಸೂಲಿ ಮಾಡಿಸಿದ ಪ್ರಸಂಗವನ್ನು ನೆನಪಿಸಿಕೊಂಡರು.

ಇಂದಿನ ಮಾಧ್ಯಮಗಳಲ್ಲಿ ಕೇವಲ ಕ್ರೈಮ್, ಗಾಸಿಪ್ ಹಾಗೂ ನಕಾರಾತ್ಮಕ ಸುದ್ದಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ವಿಜಯನಗರ ಹಾಗೂ ರಾಜ್ಯದ ಎಲ್ಲಾ ಮಾಧ್ಯಮ ಮಿತ್ರರಲ್ಲಿ ಒಂದು ವಿನಮ್ರ ವಿನಂತಿ ಮಾಡಿ

ಪ್ರತಿದಿನ ಸಾಯಂಕಾಲ ಪ್ರಸಾರವಾಗುವ ಚಾನೆಲ್ಗಳಲ್ಲಿ ಅಥವಾ ಪತ್ರಿಕೆಗಳಲ್ಲಿ ಕನಿಷ್ಠ 10 ನಿಮಿಷಗಳ ಕಾಲ ದೇಶದ ಗಡಿಯಲ್ಲಿ ಕಾಯುವ ಸೈನಿಕರ ತ್ಯಾಗ, ದೇಶಭಕ್ತಿ, ಭಾರತೀಯ ಸಂಸ್ಕೃತಿ ಮತ್ತು ನಮ್ಮ ಸೈನಿಕರ ಸಾಹಸಗಾಥೆಗಳನ್ನು ಪ್ರಸಾರ ಮಾಡಿ. ಇಂದಿನ ಯುವಜನತೆ ಮತ್ತು ಮಕ್ಕಳಲ್ಲಿ ನರನಾಡಿಗಳಲ್ಲಿ ದೇಶಭಕ್ತಿಯ ಚೈತನ್ಯ ತುಂಬುವುದು ಅತ್ಯಗತ್ಯ. ಮೊಬೈಲ್ ಹಾಗೂ ಅನಗತ್ಯ ಗಾಸಿಪ್ಗಳಿಂದ ಹಾಳಾಗುತ್ತಿರುವ ಯುವಪೀಳಿಗೆಗೆ ಉತ್ತಮ ದಾರಿ ತೋರಿಸುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಪತ್ರಕರ್ತರು ತಮಗೆ ಬರುವ ಆಮಿಷಗಳಿಗೆ ಬಲಿಯಾಗದೆ, ಭಯರಹಿತವಾಗಿ ಹಾಗೂ ಸತ್ಯದ ಪರವಾಗಿ ನಿಲ್ಲಬೇಕು. ಮಾಧ್ಯಮದ ಕಳಂಕ ತೊಳೆಯಲು ಪ್ರತಿಯೊಬ್ಬ ಪತ್ರಕರ್ತನೂ ಶ್ರಮಿಸಬೇಕು. ಲೋಕಾಯುಕ್ತ ಸಂಸ್ಥೆಯು ಸದಾ ಸತ್ಯ ಮತ್ತು ನ್ಯಾಯದ ಪರವಾಗಿ ಕಾರ್ಯಾಚರಿಸುವ ಪತ್ರಕರ್ತರ ಬೆನ್ನಿಗೆ ನಿಲ್ಲಲಿದೆ ಎಂದರು.

ಹುಬ್ಬಳ್ಳಿ ಕನ್ನಡಪ್ರಭ ಸ್ಥಾನಿಕ ಸಂಪಾದಕ ಮಲ್ಲಿಕಾರ್ಜುನ ಸಿದ್ದಣ್ಣವರ ತಮ್ಮ ಆಶಯ ಭಾಷಣದಲ್ಲಿ ಮಾತನಾಡಿ, ಪತ್ರಿಕೆ ಮತ್ತು ವರದಿಗಾರ ನಿಖರವಾದ ಆಧಾರಗಳಿಲ್ಲದಿದ್ದರೂ ಮಾಹಿತಿ ನೆಲೆಯಲ್ಲಿಯೇ ನಿಖರ ಸುದ್ದಿ ಮಾಡುವ ಮೂಲಕ ಅನೇಕ ಕಾನೂನು ಬಾಹಿರ ಕೃತ್ಯಗಳನ್ನು ಹೊರತೆಗೆಯಲಾಗಿದೆ ಎಂದು ಪತ್ರಿಕೆಯಲ್ಲಿ ಪ್ರಕಟಿಸಿದ ಅಸ್ಪೃಶ್ಯದ ಆಚರಣೆ ಉದಾಹರಣೆ ನೀಡಿದರು. ಪತ್ರಕರ್ತ ವರದಿ ಮಾಡಲು ಮಾಹಿತಿಯನ್ನು ಆಧಾರಿಸಿದರೆ, ರಕ್ಷಣಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಾಕ್ಷಾಧಾರಗಳನ್ನು ಪರಿಗಣಿಸುತ್ತವೆ. ಅನ್ಯಾಯ ಅಧರ್ಮ, ಅಕ್ರಮಗಳು ನಡೆದಾಗ ಸಾಕ್ಷಾಧಾರಗಳ

ಆಧಾರದಲ್ಲಿ ಸುದ್ದಿ ಮಾಡಿ ನ್ಯಾಯ ಒದಗಿಸುವುದು ಕಷ್ಟಕರ ಕೆಲಸ. ಆದರೂ ಸಹ ಪತ್ರಕರ್ತ ಖಚಿತ ಮಾಹಿತಿ ಮೇರೆಗೆ ಮಾನವೀಯ ನೆಲೆ ಮತ್ತು ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಸುದ್ದಿ ಮಾಡುವರು.

ಪತ್ರಿಕೋದ್ಯಮ ಮೌಲ್ಯ ಶೇ.10ರಷ್ಟು ಕುಸಿತವಾಗಿರಬಹುದು ಆದರೂ ಸಹ ಪತ್ರಿಕಾ ರಂಗ ತನ್ನದೇ ಆದ ಮೌಲ್ಯವನ್ನು ಉಳಿಸಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಪತ್ರಕರ್ತರಿಗೆ ಸಾಮಾಜಿಕ ಭದ್ರತೆ ಮುಖ್ಯವಲ್ಲ. ಸಮಾಜದ ಭದ್ರತೆ, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವುದು ಪ್ರಮುಖ ಆಶಯವಾಗಿದೆ ಎಂದರು.

ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಪತ್ರಿಕಾ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಪತ್ರಕರ್ತರ ಸಮಸ್ಯೆಗೆ ಜಿಲ್ಲಾಡಳಿತ ಸದಾ ಸ್ಪಂದಿಸಲಿದೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪಿ.ಸತ್ಯನಾರಾಯಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜಕ್ಕೆ ಪತ್ರಕರ್ತ ಏನಾದರೂ ಕೊಡುಗೆ ಕೊಡುವುದಾದರೆ ಅದು ಪ್ರಾಮಾಣಿಕತೆ, ಸತ್ಯತೆಯಿಂದ ಮಾತ್ರ ಸಾಧ್ಯವಾಗಲಿದೆ ಎಂದು ತಿಳಿಸಿ, ಪತ್ರಿಕಾ ದಿನಾಚರಣೆ ಕುರಿತಂತೆ ಮಾತನಾಡಿದರು.

ಇದೇ ಸಂದರ್ಭದಲ್ಲಿ ಪತ್ರಿಕಾ ರಂಗದಲ್ಲಿ ವಿವಿಧ ರೀತಿಯ ಸಾಧನೆಗೈದ ಆರ್.ಕನ್ನಡ ಜಿಲ್ಲಾ ವರದಿಗಾರ ಸುರೇಶ್ ಚೌವ್ಹಾಣ್ ಹಗರಿಬೊಮ್ಮನಹಳ್ಳಿ ಸಂಜೆವಾಣಿ ವರದಿಗಾರ ಉಮಾಪತಿ ಶೆಟ್ಟರ, ಹಡಗಲಿ ಪ್ರಜಾವಾಣಿ ವರದಿಗಾರ ಕೆ.ಸೋಮಶೇಖರ್, ಹಡಗಲಿ ಸಂಜೆವಾಣಿ ವರಿದಿಗಾರ ಕರಿಬಸಪ್ಪ, ಕೂಡ್ಲಿಗಿ ಸಂಜೆವಾಣಿ ವರದಿಗಾರ ಬಿ.ನಾಗರಾಜ್, ಕೊಟ್ಟೂರು ಪ್ರಜಾವಾಣಿ ವರದಿಗಾರರಾದ ಗುರುಪ್ರಸಾದ್ ಅವರಿಗೆ ಸನ್ಮಾನಿಸಲಾಯಿತು.

ಪತ್ರಕರ್ತರ ಕುಟುಂಬದ ಮಕ್ಕಳು ಎಸ್ಎಸ್ಎಲ್ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಜಿ.ವೈ಼ಷ್ಣವಿ(ಶೇ.83.20), ಪಿಯುಸಿ ಜಿ.ಎಸ್.ಶ್ರಾವಣಿ (ಶೇ.97.17), ಪಿಯುಸಿ ಕೆ.ಅನನ್ಯ (ಶೇ.83.83) ಮಕ್ಕಳಿಗೆ ಪ್ರಶಸ್ತಿ ಪತ್ರ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಸನ್ಮಾನಿಸಲಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande