ನೊಂದವರಿಗೆ ಉಚಿತ ಕಾನೂನು ನೆರವು : ನ್ಯಾ. ಪ್ರಭು ನೀಲಾಚಾರಿ ಬಡಿಗೇರ್
ನೊಂದವರಿಗೆ ಉಚಿತ ಕಾನೂನು ನೆರವು : ನ್ಯಾಯಾಧೀಶ ಪ್ರಭು ನೀಲಾಚಾರಿ ಬಡಿಗೇರ್.
ಕೋಲಾರ ನಗರಸಭೆಯ ಆವರಣದಲ್ಲಿ ಪೌರ ಕಾರ್ಮಿಕರಿಗೆ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ನೀಲಾಚಾರಿ ಬಡಿಗೇರ್ ಉದ್ಘಾಟಿಸಿದರು.


ಕೋಲಾರ: ಜುಲೈ ೨೫(ಹಿ.ಸ):

ಆ್ಯಂಕರ್ : ಸಂಕಷ್ಟದಲ್ಲಿರುವ ಬಡವರು, ಹಿಂಸೆಗೊಳಗಾದ ಮಹಿಳೆಯರು ಹಾಗೂ ಕೋರ್ಟ್ ವೆಚ್ಚ ಭರಿಸಲಾಗದ ಅಶಕ್ತರಿಗೆ ಉಚಿತ ಕಾನೂನು ನೆರವು ನೀಡುವುದು ನ್ಯಾಯಾಂಗದ ಪ್ರಾಥಮಿಕ ಕರ್ತವ್ಯವಾಗಿದೆ. ಸಾರ್ವಜನಿಕರು ಕಾನೂನು ಸೇವಾ ಪ್ರಾಧಿಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನ್ಯಾ. ಪ್ರಭು ನೀಲಾಚಾರಿ ಬಡಿಗೇರ್ ಕರೆ ನೀಡಿದರು.

ನಗರದ ನಗರಸಭೆ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನಗರಸಭೆ ಕೋಲಾರ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪೌರ ಕಾರ್ಮಿಕರಿಗೆ ಸಿಗುವ ಹಕ್ಕುಗಳು ಮತ್ತು ಸೌಲಭ್ಯಗಳ ಕುರಿತು ಕಾನೂನು ಅರಿವು ಮತ್ತು ಉಚಿತ ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಾಧಿಕಾರದಿಂದ ದೊರೆಯುವ ವಿವಿಧ ಉಚಿತ ಸೇವೆಗಳು ಹಾಗೂ ಪರಿಹಾರ ಯೋಜನೆಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು.

ಆರ್ಥಿಕವಾಗಿ ಹಿಂದುಳಿದವರು, ದೌರ್ಜನ್ಯಕ್ಕೊಳಗಾದ ಮಹಿಳೆಯರು ಮತ್ತು ನ್ಯಾಯಾಲಯದಲ್ಲಿ ವಕೀಲರನ್ನು ನೇಮಿಸಿಕೊಳ್ಳಲು ಸಾಧ್ಯವಾಗದ ಆರೋಪಿಗಳಿಗೆ ಪ್ರಾಧಿಕಾರದಿಂದ ಉಚಿತವಾಗಿ ವಕೀಲರ ಸೇವೆಯನ್ನು ಒದಗಿಸಲಾಗುತ್ತಿದೆ. ಗಂಡ-ಹೆಂಡತಿಯ ನಡುವಿನ ಗೃಹಹಿಂಸೆ ಅಥವಾ ಕುಟುಂಬ ವ್ಯಾಜ್ಯಗಳು ಕೋರ್ಟ್ ಮೆಟ್ಟಿಲೇರುವ ಮುನ್ನವೇ 'ಪ್ರೀ-ಲಿಟಿಗೇಷನ್' ಹಾಗೂ ಮಧ್ಯಸ್ಥಿಕೆ ಸಂಧಾನ ಕೇಂದ್ರಗಳ ಮೂಲಕ ಪರಸ್ಪರ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಮೊದಲ ಆದ್ಯತೆ ನೀಡಲಾಗುವುದು. ಒಂದೊಮ್ಮೆ ಸಂಧಾನ ಸಾಧ್ಯವಾಗದಿದ್ದಲ್ಲಿ, ಕೋರ್ಟ್ನಲ್ಲೇ ಉಚಿತವಾಗಿ ವ್ಯಾಜ್ಯ ನಡೆಸಿಕೊಡಲಾಗುವುದು ಎಂದು ತಿಳಿಸಿದರು.

ಅಪ್ರಾಪ್ತರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಯಲು ಕಾನೂನು ಬಿಗಿಯಾಗಿದ್ದು, ಸಂತ್ರಸ್ತ ಮಕ್ಕಳ ಪುನರ್ವಸತಿಗಾಗಿ ಪೋಕ್ಸೋ ನ್ಯಾಯಾಲಯದಿಂದ ೧ ಲಕ್ಷದಿಂದ ೭ ಲಕ್ಷದವರೆಗೆ ಪರಿಹಾರ ಧನವನ್ನು ನ್ಯಾಯಾಲಯವೇ ಮಂಜೂರು ಮಾಡುತ್ತದೆ. ಸಂಘರ್ಷ ಅಥವಾ ಕೊಲೆ ಪ್ರಕರಣಗಳಲ್ಲಿ ಮೃತರಾದವರ ಕುಟುಂಬದ ಆಶ್ರಿತರಿಗೆ ಮೃತರ ವಯಸ್ಸಿನ ಆಧಾರದಲ್ಲಿ ಪರಿಹಾರ ಒದಗಿಸಲಾಗುತ್ತದೆ:

ಹದಿನಾಲ್ಕು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣದ ಹಕ್ಕಿದೆ. ಮಕ್ಕಳಿಗೆ ಕಲಿವಿನ ಜೊತೆಗೆ ಆಟೋಟ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಹಕ್ಕಿದೆ. ಸರ್ಕಾರದಿಂದ ಬಿಸಿಊಟ, ಹಾಲು, ಮೊಟ್ಟೆ, ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಖಾಸಗಿ ಶಿಕ್ಷಣದ ವ್ಯಾಪಾರೀಕರಣದಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವುದು ಕಳವಳಕಾರಿ ಸಂಗತಿ. ನಾವು ಸೇರಿದಂತೆ ವೇದಿಕೆ ಮೇಲಿರುವ ಬಹುತೇಕರು ಸರ್ಕಾರಿ ಶಾಲೆಯಲ್ಲೇ ಓದಿ ಬೆಳೆದವರಾಗಿದ್ದು, ಸಾರ್ವಜನಿಕರು ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ಶ್ರಮಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್ ಶ್ರೀನಿವಾಸ್ ಮಾತನಾಡಿ ಸರ್ಕಾರದ ಯೋಜನೆಗಳು ಹಾಗೂ ನಾಗರಿಕ ಸೌಲಭ್ಯಗಳು ಪ್ರತಿಯೊಬ್ಬ ಅರ್ಹ ಬಡ ನಿವಾಸಿಗೆ ತಲುಪಬೇಕಿದ್ದು, ನಗರದಲ್ಲಿ ಕುಡಿಯುವ ನೀರಿನ ಅಭಾವ ತಡೆಯಲು ಮಳೆನೀರು ಕೊಯ್ಲು ನಿಯಮಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಕೋಲಾರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಲ್. ಶ್ರೀನಿವಾಸ್ ಒತ್ತಾಯಿಸಿದರು.

ಸ್ಥಳೀಯ ಪ್ರದೇಶಗಳ ಅಭಿವೃದ್ಧಿ ಹಾಗೂ ಸಾರ್ವಜನಿಕರ ಮೂಲಭೂತ ಹಕ್ಕುಗಳ ಕುರಿತು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದರು. ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಆರೋಗ್ಯ ಇಲಾಖೆಯಿಂದ ದೊರೆಯುವ ಉಚಿತ ವೈದ್ಯಕೀಯ ತಪಾಸಣೆ, ತಾಯಿ-ಮಗು ಲಸಿಕೆ, ಪೌಷ್ಟಿಕಾಂಶ ಮಾತ್ರೆಗಳು ಹಾಗೂ ತಾಯಿ ಕಾರ್ಡ್ ಸೌಲಭ್ಯಗಳು ತಳಮಟ್ಟದ ಮಹಿಳೆಯರಿಗೆ ಸರಿಯಾಗಿ ತಲುಪಬೇಕು. ಮಾಹಿತಿ ಕೊರತೆಯಿಂದಾಗಿ ಅನೇಕ ಬಡ ಮಹಿಳೆಯರು ಈ ಯೋಜನೆಯಿಂದ ವಂಚಿತರಾಗುತ್ತಿದ್ದು, ಇದನ್ನು ತಪ್ಪಿಸಲು ವ್ಯಾಪಕ ಜಾಗೃತಿ ಅಗತ್ಯವಿದೆ ಎಂದರು.

ನಗರದಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕುಡಿಯುವ ನೀರಿನ ಅಭಾವ ಹೆಚ್ಚುತ್ತಿದೆ. ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರದ ನಿರ್ದೇಶನದಂತೆ ಜಲ ಸಂಚಯ ಜನ ಭಾಗೀದಾರಿ ಪರಿಕಲ್ಪನೆಯಡಿ ಸಾರ್ವಜನಿಕರು ಮನೆ ನಿರ್ಮಿಸುವಾಗ ಹಾಗೂ ಬೋರ್ವೆಲ್ ಕೊರೆಸುವಾಗ ಕಡ್ಡಾಯವಾಗಿ ಮಳೆನೀರು ಇಂಗುಗುಂಡಿ ನಿರ್ಮಿಸಬೇಕು. ನಗರಸಭೆ ಕಮಿಷನರ್ ಅವರು ನೂತನ ಕಟ್ಟಡ ಪರವಾನಗಿ ನೀಡುವಾಗ ಈ ಇಂಗುಗುಂಡಿ ನಿರ್ಮಾಣದ ಷರತ್ತನ್ನು ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿದರು.

ಕೋಲಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ಸಾರ್ವಜನಿಕರ ನೆರವಿಗಾಗಿ ೨೦ ಪ್ಯಾನಲ್ ವಕೀಲರು ಹಾಗೂ ೪ ಎಲ್ಎಡಿಸಿ ವಕೀಲರ ತಂಡ ಲಭ್ಯವಿದೆ. ಯಾವುದೇ ಜಾತಿ, ಧರ್ಮ ಅಥವಾ ವರ್ಗದ ಭೇದವಿಲ್ಲದೆ ಕಷ್ಟದಲ್ಲಿರುವ ಮಹಿಳೆಯರು ಹಾಗೂ ಬಡ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಉಚಿತವಾಗಿ ವಕೀಲರ ಸೇವೆ ಒದಗಿಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಹಕ್ಕುಗಳ ರಕ್ಷಣೆಗೆ ಕಾನೂನು ಪ್ರಾಧಿಕಾರವನ್ನು ನೇರವಾಗಿ ಸಂಪರ್ಕಿಸಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತರ ವೆಂಕಟೇಶ್ ನಾಗನೂರ ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರು ಹೆಚ್.ವಿ. ಸುಬ್ರಮಣಿ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಎ. ಆದರ್ಶ, ಆರೋಗ್ಯ ಇಲಾಖೆ ನಿರೀಕ್ಷಕರು ಸಂಜಯ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande