
ದೋಹಾ, 25 ಜುಲೈ (ಹಿ.ಸ.):
ಆ್ಯಂಕರ್:
ಕತಾರ್‌ನಲ್ಲಿ ಮೂರು ವರ್ಷಗಳ ಯಶಸ್ವಿ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಭಾರತದ ರಾಯಭಾರಿ ವಿಪುಲ್ ಅವರಿಗೆ ಅನಿವಾಸಿ ಭಾರತೀಯ ಸಮುದಾಯವು ದೋಹಾದ ಐಸಿಸಿ ಅಶೋಕ ಸಭಾಂಗಣದಲ್ಲಿ ಬೀಳ್ಕೊಡುಗೆ ನೀಡಿತು.
ಭಾರತೀಯ ಸಾಂಸ್ಕೃತಿಕ ಕೇಂದ್ರ, ಭಾರತೀಯ ಸಮುದಾಯ ಕಲ್ಯಾಣ ವೇದಿಕೆ, ಭಾರತೀಯ ಕ್ರೀಡಾ ಕೇಂದ್ರ ಹಾಗೂ ಭಾರತೀಯ ಉದ್ಯಮ ಮತ್ತು ವೃತ್ತಿಪರರ ಮಂಡಳಿ ಜಂಟಿಯಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ವಿಪುಲ್ ಅವರನ್ನು 'ಪೀಪಲ್ಸ್ ಅಂಬಾಸಿಡರ್' ಎಂದು ಗೌರವಿಸಿದರು. ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಅವರ ಕಾರ್ಯಶೈಲಿ ಮತ್ತು ತೆರೆದ ಬಾಗಿಲಿನ ನೀತಿಯನ್ನು ಎಲ್ಲರೂ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಪುಲ್, ಕತಾರ್‌ನಲ್ಲಿರುವ 8.3 ಲಕ್ಷಕ್ಕೂ ಹೆಚ್ಚು ಭಾರತೀಯರು ವಿಶ್ವದಲ್ಲೇ ಅತ್ಯಂತ ಶಿಸ್ತಿನ ಸಮುದಾಯವಾಗಿದ್ದು, ತಮ್ಮ ಅಧಿಕಾರಾವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕತಾರ್ ಭೇಟಿ ಹಾಗೂ ಕತಾರ್ ಅಮೀರ್ ಅವರ ಭಾರತ ಭೇಟಿಯಿಂದ ಉಭಯ ರಾಷ್ಟ್ರಗಳ ಬಾಂಧವ್ಯ ಮತ್ತಷ್ಟು ಬಲಗೊಂಡಿದೆ ಎಂದು ಹೇಳಿದರು. ಕರ್ನಾಟಕ ಸಂಘ ಕತಾರ್ ಸೇರಿದಂತೆ ವಿವಿಧ ಭಾರತೀಯ ಸಾಂಸ್ಕೃತಿಕ ಸಂಸ್ಥೆಗಳು ವಿದೇಶದಲ್ಲೂ ಭಾರತೀಯ ಸಂಸ್ಕೃತಿಯನ್ನು ಜೀವಂತವಾಗಿರಿಸಿರುವುದನ್ನು ಅವರು ಮೆಚ್ಚಿದರು.
ಸಮಾರಂಭದಲ್ಲಿ ಐಸಿಸಿ ಅಧ್ಯಕ್ಷ ಎ.ಪಿ. ಮಣಿಕಂಠನ್, ಐಸಿಬಿಎಫ್ ಅಧ್ಯಕ್ಷ ಶಾನವಾಸ್ ಬಾವಾ, ಐಎಸ್‌ಸಿ ಅಧ್ಯಕ್ಷ ಇ.ಪಿ. ಅಬ್ದುಲ್ ರಹಮಾನ್, ಐಬಿಪಿಸಿ ಅಧ್ಯಕ್ಷ ತಾಹಾ ಮಹಮ್ಮದ್ ಹಾಗೂ ಕರ್ನಾಟಕ ಸಂಘ ಕತಾರ್‌ನ ಪದಾಧಿಕಾರಿಗಳು ಸೇರಿದಂತೆ ನೂರಾರು ಅನಿವಾಸಿ ಭಾರತೀಯರು ಭಾಗವಹಿಸಿದ್ದರು.
ಇದೇ ವೇಳೆ ಕರ್ನಾಟಕ ಸಂಘ ಕತಾರ್‌ನ ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಹಾಗೂ ಸಲಹೆಗಾರರು ವಿಪುಲ್ ಅವರನ್ನು ಸನ್ಮಾನಿಸಿ, ಅನಿವಾಸಿ ಕನ್ನಡಿಗರು, ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಅವರು ನೀಡಿದ ನಿರಂತರ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಿ, ಅವರ ಮುಂದಿನ ಜೀವನ ಹಾಗೂ ಸೇವಾ ಪಯಣಕ್ಕೆ ಶುಭ ಹಾರೈಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.