
ಮನಿಲಾ (ಫಿಲಿಪೈನ್ಸ್), ಜುಲೈ 22(ಹಿ.ಸ)
ಆ್ಯಂಕರ್:ಇಂಧನ, ಆಹಾರ ಮತ್ತು ಆರೋಗ್ಯ ಭದ್ರತೆಯನ್ನು ಇನ್ನು ಮುಂದೆ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಹೇಳಿದ್ದಾರೆ.
ಫಿಲಿಪೈನ್ಸ್‌ನ ರಾಜಧಾನಿ ಮನಿಲಾದಲ್ಲಿ ನಡೆದ ಭಾರತ–ಆಸಿಯಾನ್ ಸಚಿವರ ನಂತರದ (ಪೋಸ್ಟ್ ಮಿನಿಸ್ಟೀರಿಯಲ್) ಸಮ್ಮೇಳನದಲ್ಲಿ ಮಾತನಾಡಿದ ಅವರು, ಭಾರತ ಮತ್ತು ಆಸಿಯಾನ್ ರಾಷ್ಟ್ರಗಳು ಭವಿಷ್ಯದ ಸಹಕಾರ ಮತ್ತು ಅಭಿವೃದ್ಧಿಯ ಬಗ್ಗೆ ಆಶಾವಾದ ಹೊಂದಿವೆ ಎಂದು ತಿಳಿಸಿದರು. ತಮ್ಮ ಉದ್ಘಾಟನಾ ಭಾಷಣದ ವಿಡಿಯೊವನ್ನು ಅವರು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಹಂಚಿಕೊಂಡಿದ್ದಾರೆ.
ಜಾಗತಿಕ ವ್ಯಾಪಾರವು ಸಮುದ್ರ ಮಾರ್ಗಗಳ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಸಮುದ್ರ ಭದ್ರತೆ ಅತ್ಯಂತ ಮಹತ್ವದ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕಾನೂನುಗಳ ಪಾಲನೆ ಅತ್ಯಗತ್ಯ ಎಂದು ಜೈಶಂಕರ್ ಒತ್ತಿಹೇಳಿದರು.
2026 'ಆಸಿಯಾನ್–ಭಾರತ ಸಮುದ್ರ ಸಹಕಾರ ವರ್ಷ'ವಾಗಿರುವುದು ಹೆಚ್ಚು ಸ್ಥಿರ ಮತ್ತು ಸುರಕ್ಷಿತ ಭವಿಷ್ಯ ನಿರ್ಮಾಣಕ್ಕೆ ಉಭಯಪಕ್ಷಗಳು ಕೈಜೋಡಿಸುವ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅವರು ಹೇಳಿದರು.
ಭಾರತ–ಆಸಿಯಾನ್ ಸಹಕಾರದ ಕಾರ್ಯಸೂಚಿಯಲ್ಲಿ ವ್ಯಾಪಾರ, ಹೂಡಿಕೆ, ಜನರ ಸಂಚಾರ, ಪ್ರತಿಭೆ ಅಭಿವೃದ್ಧಿ, ತಂತ್ರಜ್ಞಾನ, ಡಿಜಿಟಲ್ ವಲಯ, ಕೃತಕ ಬುದ್ಧಿಮತ್ತೆ (ಎಐ), ಹಸಿರು ಅಭಿವೃದ್ಧಿ, ಸುಸ್ಥಿರತೆ ಹಾಗೂ ಸಂಪರ್ಕ ವ್ಯವಸ್ಥೆ ಪ್ರಮುಖ ಆದ್ಯತೆಗಳಾಗಿವೆ ಎಂದು ಜೈಶಂಕರ್ ತಿಳಿಸಿದರು.
ಫಿಲಿಪೈನ್ಸ್ 2026ನೇ ಸಾಲಿನ ಆಸಿಯಾನ್ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದು, ಆಸಿಯಾನ್ ಚೌಕಟ್ಟಿನಡಿ ನಡೆಯುತ್ತಿರುವ ವಿದೇಶಾಂಗ ಸಚಿವರ ಮಟ್ಟದ ವಿವಿಧ ಸಭೆಗಳಲ್ಲಿ ಭಾಗವಹಿಸಲು ಜೈಶಂಕರ್ ಮನಿಲಾ ಪ್ರವಾಸ ಕೈಗೊಂಡಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.