
ಚಿತ್ರದುರ್ಗ , 25 ಜುಲೈ (ಹಿ.ಸ.):
ಆ್ಯಂಕರ್:
ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿರುವ ನೀಟ್ ಪರೀಕ್ಷಾ ಹಗರಣದ ಬೆನ್ನಲ್ಲೇ, ಕೇಂದ್ರ ರಾಜಕಾರಣದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ, ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರವು ಪರೀಕ್ಷಾ ಅಕ್ರಮಗಳ ವಿರುದ್ಧ ಅತ್ಯಂತ ಕಠಿಣ ನಿಲುವು ತಳೆದಿದೆ.
ರಾಜ್ಯದಲ್ಲಿ ಮುಂಬರುವ ಯಾವುದೇ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ಅಥವಾ ಅಕ್ರಮಗಳು ನಡೆದರೆ ಅದಕ್ಕೆ ಆಯಾ ಜಿಲ್ಲಾಧಿಕಾರಿಗಳೇ ನೇರ ಹೊಣೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಚಿತ್ರದುರ್ಗದ ಮುರುಘಾ ಮಠದ ಅನುಭವ ಮಂಟಪದಲ್ಲಿ ನಡೆದ ಬೆಂಗಳೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಪರೀಕ್ಷಾ ಲೋಪದೋಷಗಳನ್ನು ಉಲ್ಲೇಖಿಸಿ ಆಡಳಿತ ಯಂತ್ರಕ್ಕೆ ಖಡಕ್ ಸಂದೇಶ ರವಾನಿಸಿದರು.
'ನೀಟ್ ಹಗರಣ' ಎಲ್ಲರ ಕಣ್ಣಮುಂದಿರಲಿ!
ಕೇಂದ್ರದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಮತ್ತು ವಿದ್ಯಾರ್ಥಿಗಳ ಹೋರಾಟದ ತೀವ್ರತೆಯನ್ನು ನೆನಪಿಸಿದ ಡಿ.ಕೆ. ಶಿವಕುಮಾರ್, ನೀಟ್ ಹಗರಣದಲ್ಲಿ ದೇಶಾದ್ಯಂತ ಏನಾಯಿತು ಎಂಬುದು ಎಲ್ಲರ ಕಣ್ಣಮುಂದಿದೆ. ಇಂತಹ ಪರೀಕ್ಷಾ ಅಕ್ರಮಗಳು ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಕಲುಷಿತಗೊಳಿಸುತ್ತವೆ. ನಮ್ಮ ರಾಜ್ಯದಲ್ಲಿ ಇಂತಹ ಯಾವುದೇ ಲೋಪಗಳು ಮರುಕಳಿಸದಂತೆ ಅಧಿಕಾರಿಗಳು ಹದ್ದಿನ ಕಣ್ಣಿಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
70 ಸಾವಿರ ಹುದ್ದೆಗಳ ನೇಮಕಾತಿಗೆ ಹೈಟೆಕ್ ಭದ್ರತೆ!
ರಾಜ್ಯದಲ್ಲಿ ಸದ್ಯದಲ್ಲೇ ಸುಮಾರು 70 ಸಾವಿರಕ್ಕೂ ಹೆಚ್ಚು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬೃಹತ್ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದ್ದು, ಪಾರದರ್ಶಕತೆ ಕಾಪಾಡಲು ಹೊಸ ಕಠಿಣ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ ಎಂದರು.
ಕಡ್ಡಾಯ ಸಿಸಿಟಿವಿ:
ಪರೀಕ್ಷೆ ನಡೆಯುವ ಪ್ರತಿಯೊಂದು ಕೇಂದ್ರಗಳಲ್ಲೂ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಪ್ರಶ್ನೆ ಪತ್ರಿಕೆ ತಯಾರಿಕೆ, ಸಾಗಣೆ ಮತ್ತು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಿ ಹಂಚಿಕೆ ಮಾಡುವವರೆಗಿನ ಪ್ರತಿಯೊಂದು ಹಂತವೂ ಕಡ್ಡಾಯವಾಗಿ ವಿಡಿಯೋ ದಾಖಲೀಕರಣಗೊಳ್ಳಬೇಕು. ಪ್ರಶ್ನೆ ಪತ್ರಿಕೆಗೆ ಅತ್ಯುನ್ನತ ಮಟ್ಟದ ಭದ್ರತೆ ಒದಗಿಸದಿದ್ದರೆ, ಯಾವುದೇ ಸಣ್ಣ ಪ್ರಮಾದ ಕಂಡುಬಂದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII