
ಕೋಲಾರ,ಜು.೨೩ (ಹಿ.ಸ):
ಆ್ಯಂಕರ್: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ಡಿವಿಜಿ ದತ್ತಿನಿಧಿ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಪತ್ರಕರ್ತ ಬಿ.ವಿ.ಗೋಪಿನಾಥ್ ಅವರನ್ನು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಗುರುವಾರ ಪತ್ರಕರ್ತರ ಭವನದಲ್ಲಿ ಅಭಿನಂದಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್, ಪತ್ರಕರ್ತರ ಸಂಘ ಹುಟ್ಟುಹಾಕಿದ್ದು ನಮ್ಮ ಜಿಲ್ಲೆಯವರೇ ಆದ ಡಿ.ವಿ.ಗುಂಡಪ್ಪನವರು. ಈಗ ಅವರ ಹೆಸರಲ್ಲಿ ಗೋಪಿನಾಥ್ ಅವರಿಗೆ ಪ್ರಶಸ್ತಿ ಬಂದಿದೆ. ಇದು ಜಿಲ್ಲೆಯ ಎಲ್ಲಾ ಪತ್ರಕರ್ತರ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ.
ನಾವು ಬರೆದ ಸುದ್ದಿಯನ್ನು ಜನ ಮೆಚ್ಚಿದರೆ ಅದೇ ನಮಗೆ ದೊಡ್ಡ ತೃಪ್ತಿ ಹಾಗೂ ಸಂತೋಷ. ಜನ ನಮ್ಮನ್ನು ಗುರುತಿಸುವುದು ಬರವಣಿಗೆ ಮೂಲಕ. ಈಗಿನ ಪರಿಸ್ಥಿತಿ ಗಮನಿಸಿದರೆ ಮುಂದಿನ ಪೀಳಿಗೆಯವರು ಪತ್ರಿಕೋದ್ಯಮಕ್ಕೆ ಬರುವುದೇ ಅನುಮಾನ ಎಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಎ.ಜಿ.ಸುರೇಶ್ ಕುಮಾರ್ ಮಾತನಾಡಿ, ನಮ್ಮ ಜಿಲ್ಲೆಯವರೇ ಆದ ಡಿವಿಜಿ ಹೆಸರಲ್ಲಿ ಗೋಪಿನಾಥ್ ಅವರಿಗೆ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಚಾರ. ತಮ್ಮ ಬರಹದ ಮೂಲಕ ಜಿಲ್ಲೆಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಿದ್ದಾರೆ ಎಂದರು.
ಖಜಾಂಚಿ ಬಿ.ಎಲ್.ರಾಜೇಂದ್ರಸಿಂಹ ಮಾತನಾಡಿ, ಗೋಪಿನಾಥ್ ಪ್ರತಿಯೊಬ್ಬರಿಗೂ ಮಾರ್ಗದರ್ಶಕರಾಗಿದ್ದಾರೆ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸರ್ಕಾರದ ಕಣ್ಣು ತೆರೆಸಿ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಅದಕ್ಕೆ ಉದಾಹರಣೆ ಯರಗೋಳ್ ಜಲಾಶಯ ಯೋಜನೆ ಎಂದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ, ಸಂಘದ ಬೆಳವಣಿಗೆಯಲ್ಲಿ ವಿಶೇಷ ಪಾತ್ರವಿದೆ. ಪತ್ರಕರ್ತರಿಗಾಗಿ ಕಲ್ಯಾಣನಿಧಿ ಮಾಡಿ ಅನುಕೂಲ ಕಲ್ಪಿಸಿದ್ದಾರೆ. ನಿಷ್ಠುರವಾದಿ ವ್ಯಕ್ತಿತ್ವ ಎಂದು ಹೇಳಿದರು.
ಹಿರಿಯ ಪತ್ರಕರ್ತ ಬಿ.ಸುರೇಶ್ ಮಾತನಾಡಿ, ಗೋಪಿನಾಥ್ ಕೊಡುಗೆ, ಶ್ರಮ ಮರೆಯುವಂತಿಲ್ಲ. ಎಲ್ಲಾ ಪತ್ರಕರ್ತರಿಗೆ ಮಾರ್ಗದರ್ಶನ ಮಾಡುವ ಸ್ಥಾನದಲ್ಲಿ ಅವರಿದ್ದಾರೆ ಎಂದರು.
ಹಿರಿಯ ಪತ್ರಕರ್ತ ಆರ್. ಶ್ರೀನಿವಾಸಮೂರ್ತಿ ಮಾತನಾಡಿ, ಸೈಕಲ್ ನಲ್ಲಿ ಪತ್ರಿಕೆ ಹಾಕುವುದರಿಂದ ಹಿಡಿದು ಎಲ್ಲಾ ಕೆಲಸವನ್ನು ಮಾಡಿ ಪತ್ರಿಕೆ ಬೆಳೆಸಿದ್ದಾರೆ. ಅವರಿಂದ ಹಲವಾರು ಮಂದಿ ಕೆಲಸ ಕಲಿತಿದ್ದಾರೆ. ಗೋಪಿನಾಥ್ ಜಿಲ್ಲೆಯ ಪತ್ರಕರ್ತರ ಪಾಲಿಗೆ ದ್ರೋಣಾಚಾರ್ಯ ಇದ್ದಂತೆ ಎಂದು ನುಡಿದರು.
ಪಾ.ಶ್ರೀ.ಅನಂತರಾಮು ಮಾತನಾಡಿ, ಗೋಪಿನಾಥ್ ಅವರ ಅಕ್ಷರ ಪಯಣ ಹೀಗೆ ಮುಂದುವರಿಯಬೇಕು. ಅವ ಬರಹ, ಕೆಲಸ ಉಳಿದವರಿಗೆ ಮಾರ್ಗದರ್ಶನವಾಗುವಂಥದ್ದು. ಕೀರ್ತಿ ಗಳಿಸುವುದು ಅಷ್ಟು ಸುಲಭವಲ್ಲ. ವ್ಯಕ್ತಿತ್ವ ನಮ್ಮನ್ನು ಎತ್ತರಕ್ಕೆ ಬೆಳೆಸುತ್ತದೆ. ಕೋಲಾರ ಜಿಲ್ಲೆಗೆ ಮತ್ತಷ್ಟು ಪ್ರಶಸ್ತಿ ಬರಬೇಕು. ಅದಕ್ಕೆ ಪ್ರಾಮಾಣಿಕತೆ, ಶಿಸ್ತು, ಪರಿಶ್ರಮ, ಹಟ ಬೇಕು. ಪತ್ರಕರ್ತರು ಬದುಕಿರುವವರೆಗೆ ಬರೆಯುತ್ತಲೇ ಇರಬೇಕು ಎಂದು ಹೇಳಿದರು.
ಪತ್ರಕರ್ತರಾದ ಮುನಿವೆಂಕಟಗೌಡ, ಮಾಲೂರು ರವೀಂದ್ರ, ನಂಜುಂಡಪ್ಪ, ಮುರಳಿ ಮೋಹನ್, ಬಾಗೇಪಲ್ಲಿ ಕೃಷ್ಣಾರೆಡ್ಡಿ, ಚಿಂತಾಮಣಿ ನಟರಾಜ್ ಮಾತನಾಡಿದರು.
ಪ್ರಶಸ್ತಿ ಪುರಸ್ಕೃತ ಬಿ.ವಿ.ಗೋಪಿನಾಥ್ ಮಾತನಾಡಿ, ಜೀವನದಲ್ಲಿ ಸಂತೋಷ ಕೊಡುವ ಯಾವುದೇ ವಿಚಾರವನ್ನು ಮರೆಯಬಾರದು. ನನಗೆ ಸಹಾಯ ಮಾಡಿದವರು ಬಹಳಷ್ಟು ಜನರಿದ್ದಾರೆ. ನಾವು ಬರೆದ ಸುದ್ದಿಗೆ ಜನರಿಂದ ಬರುವ ಮೆಚ್ಚುಗೆಯೇ ನಮಗೆ ಸಿಗುವ ಕಿರೀಟ. ಕೆಲಸಕ್ಕೆ ಬೆಲೆ ಕೊಡಬೇಕು. ಪತ್ರಕರ್ತರು ಸಮಾಜಕ್ಕೆ ಬಿದಿರಿನಂತೆ ಇರಬೇಕು. ಹುಟ್ಟಿದಾಗ ಬೇಕಾಗುವ ತೊಟ್ಟಿಲಿನಿಂದ ಹಿಡಿದು ಸತ್ತಾಗ ಬಳಸುವ ಚಟ್ಟದವರೆಗೆ ಬಿದಿರಿನ ಅಗತ್ಯವಿರುತ್ತದೆ. ಅದೇ ರೀತಿಯಲ್ಲಿ ಕೆಲಸ ಮಾಡಬೇಕು. ಡಿವಿಜಿ ಹೇಳಿದಂತೆ ಪತ್ರಕರ್ತರು ಸಮಾಜದ ಕನ್ನಡಿ ಆಗಿರಬೇಕು. ಪ್ರಶಸ್ತಿ ಬಂದಿರುವುದು ಜವಾಬ್ದಾರಿ ಹೆಚ್ಚಿಸಿದೆ. ಯರಗೋಳ್ ಸುದ್ದಿ ವಿಚಾರದಲ್ಲಿ ನಮಗೆ ತೃಪ್ತಿ ಸಿಕ್ಕಿದೆ. ಇಡೀ ಅರ್ಧ ಜಿಲ್ಲೆಗೆ ನೀರು ಬರುತ್ತಿದೆ ಎಂದರು.
ಕ್ಲರಿಕಲ್ ಜರ್ನಲಿಸಂ ಬೇಡ, ಎಥಿಕಲ್ ಜರ್ನಲಿಸಂ ಬೇಕು. ನನಗೆ ಇರುವುದು ಎರಡೇ ಜಾತಿ. ಕೆಲಸಮಾಡುವ ಜಾತಿ ಹಾಗೂ ಕೆಲಸ ಮಾಡದ ಜಾತಿ ಎಂದರು.
ಚಿಕ್ಕಮಗಳೂರಿನಲ್ಲಿ ಜುಲೈ ೨೫ರಂದು ನಡೆಯಲಿರುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಗೋಪಿನಾಥ್ ಅವರನ್ನು ರಾಜ್ಯ ಖಜಾಂಚಿ ವಾಸುದೇವಹೊಳ್ಳ ಆಹ್ವಾನ ನೀಡಿದರು. ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಹಾಡು ಹಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್