ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಜಾಗೃತಿ ಅಗತ್ಯ ; ನ್ಯಾ. ಪ್ರಭು ಬಡಿಗೇರ್
ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಜಾಗೃತಿ ಅಗತ್ಯ ; ನ್ಯಾಯಾಧೀಶ ಪ್ರಭು ಬಡಿಗೇರ್
ಕೋಲಾರದ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ಮಕ್ಕಳ ಹಕ್ಕುಗಳು ಮತ್ತು ಮೊಬೈಲ್ ದುಸ್ಪರಿಣಾಮದ ಬಗ್ಗೆ ಅರಿವು ಕಾರ್ಯಕ್ರಮ ನಡೆಯಿತು.


ಕೋಲಾರ: ಜುಲೈ ೨೧(ಹಿ.ಸ):

ಆ್ಯಂಕರ್ : ಸಮಾಜದಲ್ಲಿ ಕಾನೂನಿನ ಅರಿವಿದ್ದರೂ ಸಹ ಕಾನೂನು ತಿಳಿದವರೇ ಹೆಚ್ಚಾಗಿ ಅದನ್ನು ಉಲ್ಲಂಘಿಸುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಪ್ರಭು ಬಡಿಗೇರ್ ಆತಂಕ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು, ಮಕ್ಕಳ ಹಕ್ಕುಗಳು ಮತ್ತು ಮೊಬೈಲ್ ದುಷ್ಪರಿಣಾಮಗಳು ಕುರಿತ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಣ್ಣ ವಯಸ್ಸಿನ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ಹಾಗೂ ಹಿಂಸಾಚಾರ ಪ್ರಕರಣಗಳು ಸಮಾಜದಲ್ಲಿ ತೀವ್ರವಾಗಿ ಹೆಚ್ಚಾಗುತ್ತಿವೆ. ನ್ಯಾಷನಲ್ ಕ್ರೈಮ್ ರೇಕಾರ್ಡ್ಸ್ ಬ್ಯೂರೋ ವರದಿಗಳ ಪ್ರಕಾರ ದೇಶದಲ್ಲಿ ದಾಖಲಾಗುವ ಒಟ್ಟು ಲೈಂಗಿಕ ಅಪರಾಧಗಳಲ್ಲಿ ಸುಮಾರು ೯೦% ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಚಿತರೇ ಅಪರಾಧಿಗಳಾಗಿರುತ್ತಾರೆ. ಆದರೆ, ಮರ್ಯಾದೆಗೆ ಅಂಜಿ ನೂರರಲ್ಲಿ ಕೇವಲ ೫ ರಿಂದ ೧೦ ಪ್ರಕರಣಗಳು ಮಾತ್ರ ಬೆಳಕಿಗೆ ಬರುತ್ತಿದ್ದು, ಉಳಿದ ಶೇ. ೯೦ ರಷ್ಟು ಪ್ರಕರಣಗಳು ಮುಚ್ಚಿಹೋಗುತ್ತಿರುವುದು ಆತಂಕಕಾರಿ. ವಿದ್ಯಾರ್ಥಿನಿಯರು ಇಂತಹ ಸಂದರ್ಭಗಳಲ್ಲಿ ಹೆದರದೆ, ಬಲವಾದ ಆತ್ಮವಿಶ್ವಾಸದಿಂದ ಧೈರ್ಯವಾಗಿ ಪ್ರತಿಭಟಿಸಬೇಕು ಎಂದು ಕರೆ ನೀಡಿದರು.

ಹದಿನೆಂಟು ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ, ರಕ್ಷಣೆ, ಆಟೋಟಗಳು, ಆರೋಗ್ಯ ತಪಾಸಣೆ ಹಾಗೂ ಗ್ರಂಥಾಲಯ ಬಳಕೆಯಂತಹ ಮೂಲಭೂತ ಹಕ್ಕುಗಳಿವೆ. ಶಾಲಾ-ಕಾಲೇಜುಗಳಲ್ಲಿ ಅಥವಾ ಸಮಾಜದಲ್ಲಿ ಈ ಹಕ್ಕುಗಳ ಉಲ್ಲಂಘನೆಯಾದಲ್ಲಿ ಅಥವಾ ಲೈಂಗಿಕ ಕಿರುಕುಳ ನಡೆದರೆ ತಕ್ಷಣವೇ ದೂರು ನೀಡಬೇಕು. ಒಂದು ವೇಳೆ ಶಾಲಾ ಆಡಳಿತ ಮಂಡಳಿ ಸ್ಪಂದಿಸದಿದ್ದರೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬಹುದು. ಪ್ರಾಧಿಕಾರವು ಯಾವುದೇ ಶುಲ್ಕವಿಲ್ಲದೆ ಮಹಿಳೆಯರು ಹಾಗೂ ಮಕ್ಕಳಿಗೆ ಸಂಪೂರ್ಣ ಉಚಿತವಾಗಿ ನ್ಯಾಯ ಒದಗಿಸಲು ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಇದೇ ವೇಳೆ ತಂತ್ರಜ್ಞಾನದ ದುರ್ಬಳಕೆ ಮತ್ತು ಮೊಬೈಲ್ ಬಳಕೆಯ ಅಪಾಯಗಳ ಬಗ್ಗೆ ಎಚ್ಚರಿಸಿದ ಅವರು, ಇಂದಿನ ಯುವಜನತೆ ಮೊಬೈಲ್ ದಾಸ್ಯಕ್ಕೆ ಈಡಾಗುತ್ತಿದ್ದಾರೆ. ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಶೇ. ೭೦ ಕ್ಕೂ ಹೆಚ್ಚು ಹದಿಹರೆಯದ ಮಕ್ಕಳು ಮೊಬೈಲ್ ಅಡಿಕ್ಷನ್ಗೆ ಒಳಗಾಗಿದ್ದು, ದಿನಕ್ಕೆ ೫ ರಿಂದ ೭ ಗಂಟೆಗಳ ಕಾಲ ಸ್ಕ್ರೀನ್ ನೋಡುವುದರಲ್ಲೇ ಕಳೆಯುತ್ತಿದ್ದಾರೆ. ಇದರಿಂದ ಕಣ್ಣಿನ ರೆಟಿನಾ ಹಾನಿಯಾಗುವುದಲ್ಲದೆ, ಮೆದುಳಿನ ಮೇಲೆಯೂ ಗಂಭೀರ ನಕಾರಾತ್ಮಕ ಪರಿಣಾಮ ಬೀರುತ್ತಿದೆ.

ಸಾಮಾಜಿಕ ಜಾಲತಾಣಗಳ ದುಷ್ಟ ಪ್ರಭಾವದಿಂದ ಅನೇಕ ಯುವಕ-ಯುವತಿಯರು ಅರಿವಿಲ್ಲದೇ ಪೋಕ್ಸೊ ನಂತಹ ಗಂಭೀರ ಶಾಸನಬದ್ಧ ಅಪರಾಧ ಪ್ರಕರಣಗಳಲ್ಲಿ ಸಿಲುಕಿ ಇಡೀ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಅಗತ್ಯವಿದ್ದರೆ ಮಾತ್ರ ಮೊಬೈಲ್ ಬಳಸಿ, ಉಳಿದಂತೆ ಪುಸ್ತಕಗಳ ಓದು, ಬರಹ, ಕಥೆ-ಕವನ, ಚಿತ್ರಕಲೆ ಹಾಗೂ ಕ್ರೀಡೆಗಳಂತಹ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಆರ್. ಶ್ರೀನಿವಾಸ್ ಗೌಡ, ಪ್ರಧಾನ ಕಾರ್ಯದರ್ಶಿ ಕೆ.ವಿ. ಆದಿತ್ಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ಡಾ. ಎ.ವಿ. ನಾರಾಯಣಸ್ವಾಮಿ, ಪ್ಯಾನಲ್ ವಕೀಲರಾದ ಸಂಪತ್ ಕುಮಾರಿ, ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ನೂರಾರು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande